ಹಂಬರ್ಗ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧುವಾರದಂದು ಗಾಂಧಿ ಕುಟುಂಬ ಹೇಗೆ ಹಿಂಸೆಯಿಂದ ಬಳಲಿದೆ ಎನ್ನುವುದನ್ನು ತಿಳಿಸುತ್ತಾ "ಹಿಂಸೆಯಿಂದಲೇ ನನ್ನ ಅಜ್ಜಿ ನನ್ನ ಅಪ್ಪ ಕೊಲ್ಲಲ್ಪಟ್ಟರು" ಎಂದು ವಿವರಿಸಿದರು.
ಜರ್ಮನಿಯ ಹಂಬರ್ಗ್ ನಲ್ಲಿನ ಬ್ಯೂಕೆರಿಯಸ್ ಸಮರ್ ಸ್ಕೂಲ್ ನಲ್ಲಿ ವಿಧ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ "ನಾನು ನನ್ನ ಅನುಭವದ ಮೂಲಕ ಮಾತನಾಡುವುದಾದರೆ ಹಿಂಸೆಯ ನಂತರ ನಾವು ಮುನ್ನಡೆಯಬೇಕಾದರೆ ಇರುವ ಒಂದೇ ಮಾರ್ಗವೆಂದರೆ ಹಿಂಸೆಯನ್ನು ಕ್ಷಮಿಸುವುದು.ಅದನ್ನು ಬಿಟ್ಟು ಬೇರೆ ಇನ್ನ್ಯಾವುದೇ ಮಾರ್ಗವಿಲ್ಲ.ಅದ್ದರಿಂದ ನಾವು ಅದು ಹೇಗೆ ಆಯ್ತು ಯಾಕೆ ಆಯ್ತು ಎನ್ನುವುದನ್ನು ಅರ್ಥೈಸಿಕೊಳ್ಳಬೇಕು ಎಂದು ರಾಹುಲ್ ತಿಳಿಸಿದರು.
ತಮ್ಮ ತಂದೆ ರಾಜೀವ್ ಗಾಂಧಿ ಸಾವಿನ ಬಗ್ಗೆ ಪ್ರಸ್ತಾಪಿಸಿದ ರಾಹುಲ್ "ಇಂತಹ ವಿಷಯವನ್ನು ನಿರ್ವಹಿಸುವುದೆಂದರೆ ಅದಕ್ಕೆ ಕಿವಿಗೊಟ್ಟು ಅಹಿಂಸಾತ್ಮಕವಾಗಿ ವರ್ತಿಸುವುದು.ಆದರೆ ಇದನ್ನು ಜನರು ವೀಕ್ ನೆಸ್ ಎಂದು ತಿಳಿಸಿದ್ದಾರೆ.ಆದರೆ ವಾಸ್ತವ ಸಂಗತಿ ಎಂದರೆ ಅದೊಂದು ರೀತಿಯ ಶಕ್ತಿ ಇದ್ದ ಹಾಗೆ. ನನ್ನ ತಂದೆ ಭಯೋತ್ಪಾದಕರಿಂದ 1991ರಲ್ಲ್ಲಿ ಹತ್ಯೆಯಾದರು. 2009 ರಲ್ಲಿ ನನ್ನ ತಂದೆಯನ್ನು ಕೊಂದ ವ್ಯಕ್ತಿ ಶ್ರೀಲಂಕಾದ ಭೂಮಿಯಲ್ಲಿ ಹತ್ಯೆಯಾಗಿ ಬಿದ್ದಿದ್ದನು"ಎಂದು ವಿವರಿಸಿದರು.
ಇದಾದ ನಂತರ ತಮ್ಮ ಸಹೋದರಿ ಪ್ರಿಯಾಂಕಾಗೆ ಕರೆ ಮಾಡಿ ಪ್ರಭಾಕರನ್ ಹತ್ಯೆಯಾಗಿದ್ದರ ಬಗ್ಗೆ ತಮಗೆ ಸಂತಸವಾಗಿಲ್ಲ ಎಂದು ಅವರು ತಿಳಿಸಿದ್ದರು. ಇದಕ್ಕೆ ಪ್ರಿಯಾಂಕಾ ಕೂಡ ತಮಗೂ ಹಾಗೆ ಎಂದು ಮರು ಉತ್ತರ ನೀಡಿರುವುದನ್ನು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಸ್ಮರಿಸಿದರು.