ಕಳೆದ 5 ವರ್ಷಗಳಲ್ಲಿ ದೇಶ ದೊಡ್ಡ ತುರ್ತು ಪರಿಸ್ಥಿತಿ ಎದುರಿಸಿದೆ: ಮಮತಾ ಬ್ಯಾನರ್ಜಿ

ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ನಾವು ಸೂಪರ್ ತುರ್ತು ಪರಿಸ್ಥಿತಿಯನ್ನು ಎದುರಿಸಿದ್ದೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Updated: Jun 25, 2019 , 12:21 PM IST
ಕಳೆದ 5 ವರ್ಷಗಳಲ್ಲಿ ದೇಶ ದೊಡ್ಡ ತುರ್ತು ಪರಿಸ್ಥಿತಿ ಎದುರಿಸಿದೆ: ಮಮತಾ ಬ್ಯಾನರ್ಜಿ

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಕಿಡಿ ಕಾರಿದ್ದು, 45 ವರ್ಷಗಳ ಹಿಂದೆ ದೇಶ ಕಂಡಿದ್ದ ತುರ್ತು ಪರಿಸ್ಥಿತಿ ಬಳಿಕ ಕಳೆದ 5 ವರ್ಷಗಳಲ್ಲಿ ದೇಶ ದೊಡ್ಡ ತರ್ತು ಪರಿಸ್ಥಿತಿಯನ್ನು ಕಂಡಿದೆ ಎಂದು ಟೀಕಿಸಿದ್ದಾರೆ.

"ಇಂದು, 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ಘೋಷಿಸಿದ್ದ ತುರ್ತು ಪರಿಸ್ಥಿತಿಯ ವಾರ್ಷಿಕೋತ್ಸವ ದಿನ. ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದಲ್ಲಿ ನಾವು ಸೂಪರ್ ತುರ್ತು ಪರಿಸ್ಥಿತಿಯನ್ನು ಎದುರಿಸಿದ್ದೇವೆ. ಇತಿಹಾಸದಿಂದ ನಾವು ಪಾಠಗಳನ್ನು ಕಲಿಯಬೇಕು ಆಗೂ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ರಕ್ಷಿಸಲು ನಾವು ಹೋರಾಟ ಮಾಡಬೇಕು" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಮಮತಾ ಬ್ಯಾನರ್ಜಿ ಬಿಜೆಪಿಯನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಕಳೆದ ವಾರ ದೆಹಲಿಯಲ್ಲಿ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿಯೂ ಸಹ ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಭಾಗವಹಿಸಲಿಲ್ಲ. ಅಷ್ಟೇ ಅಲ್ಲದೆ, ಮೋದಿ-2 ಸರ್ಕಾರದ ಪ್ರಮಾಣವಚನ ಕಾರ್ಯಕ್ರಮ, ನೀತಿ ಆಯೋಗದ ಸಭೆಗೂ ಮಮತಾ ಬ್ಯಾನರ್ಜಿ ಗೈರು ಹಾಜರಾಗಿದ್ದರು.