ನವದೆಹಲಿ: ಗುಜರಾತ್ ವಿಧಾನಸಭಾ ಚುನಾವಣೆಗೆ ಇನ್ನೂ ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಮ್ಮಿಕೊಂಡಿರುವ ನರೇಂದ್ರ ಮೋದಿ-ಕೇಂದ್ರಿತ ಚುನಾವಣಾ ಪ್ರಚಾರವನ್ನು ಮಾಜಿ ಕೇಂದ್ರೀಯ ಹಣಕಾಸು ಸಚಿವ ಹಾಗು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಟೀಕಿಸಿದ್ದಾರೆ.
``ಮೋದಿ ಅವರ ಚುನಾವಣಾ ಪ್ರಚಾರವು ಅವರ ಬಗ್ಗೆ ಮತ್ತು ಗುಜರಾತ್ ಮತ್ತು ಗುಜರಾತಿಗಳ ಬಗ್ಗೆ ಮಾತ್ರ. ಆದರೆ ಅವರು ಭಾರತದ ಪ್ರಧಾನ ಮಂತ್ರಿ ಎಂಬುದನ್ನು ಮರೆತಿದ್ದಾರಾ?'' ಎಂದು ಮಂಗಳವಾರ ಪ್ರಕಟವಾದ ಟ್ವೀಟ್ಗಳ ಸರಣಿಯಲ್ಲಿ ಕಾಂಗ್ರೆಸ್ ನಾಯಕ ಚಿದಂಬರಂ ಟೀಕಿಸಿದ್ದಾರೆ.
"ಗುಜರಾತ್ ಚುನಾವಣೆ ಮೋದಿ ಅವರ ಬಗ್ಗೆ ಮಾತ್ರ ಅಲ್ಲ. ಅವರ 42 ತಿಂಗಳುಗಳಲ್ಲಿ ಬರಲಿದೆ ಎಂದು ನೀಡಿದ್ದ `ಅಚ್ಚೆ ದಿನ್' ಭರವಸೆ ಬಗ್ಗೆ ಟೀಕಿಸಿದ್ದಾರೆ.
Mr Modi's campaign is about himself, his past and the alleged disdain of Gujarat and Gujaratis. Has he forgotten he is Prime Minister of India?
— P. Chidambaram (@PChidambaram_IN) November 28, 2017
ಬಿಜೆಪಿಯ ಗುಜರಾತ್ ಅಭಿವೃದ್ಧಿಯ ಮಾದರಿಯನ್ನು ಟೀಕಿಸಿರುವ ಚಿದಂಬರಂ ಅವರು, ''ಉದ್ಯೋಗವಿಲ್ಲದ ಬಗ್ಗೆ, ಹೂಡಿಕೆ ಕೊರತೆ, ಎಸ್ಎಂಇಗಳ ಕುಸಿತ, ಜಡ ರಫ್ತು ಮತ್ತು ಬೆಲೆ ಏರಿಕೆ ಬಗ್ಗೆ ಯಾಕೆ ಮಾತನಾಡಬಾರದು? ಯಾಕೆಂದರೆ ಅವರು ಹಾರ್ಡ್ ರಿಯಾಲಿಟಿಗೆ ಯಾವುದೇ ಉತ್ತರಗಳನ್ನು ಹೊಂದಿಲ್ಲ" ಎಂದಿದ್ದಾರೆ.
ಸೋಮವಾರ ಪ್ರಧಾನ ಮಂತ್ರಿ ಮೋದಿ ಅವರು ಭುಜ್ ಮತ್ತು ರಾಜ್ಕೋಟ್ ಸೇರಿದಂತೆ ಗುಜರಾತ್ನ ಹಲವೆಡೆ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ, ಕಾಂಗ್ರೆಸ್ ತನ್ನ ಪಕ್ಷದ ಮೂಲ ಕಾಂಗ್ರೆಸಿಗರನ್ನು ಗೇಲಿ ಮಾಡಬಾರದೆಂದು ಹೇಳಿದ್ದರು.
ಗುಜರಾತ್ ಚುನಾವಣೆಯು ಎರಡೂ ಪಕ್ಷಗಳಿಗೂ ಪ್ರತಿಷ್ಠೆಯ ವಿಷಯವಾಗಿದ್ದು, ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತೀವ್ರ ದಾಳಿ-ಪ್ರತಿದಾಳಿಗಳನ್ನು ಪ್ರಾರಂಭಿಸಿವೆ.
ಗುಜರಾತ್ ಚುನಾವಣೆಯು ಡಿಸೆಂಬರ್ 9 ಮತ್ತು 14 ರಂದು ನಡೆಯಲಿದ್ದು, ಡಿಸೆಂಬರ್ 18 ರಂದು ಮತ ಎಣಿಕೆ ನಡೆಯಲಿದೆ.