ಅಪಾಯದ ಮಟ್ಟ ಮೀರಿದ ಝೀಲಂ ನದಿ; ಪ್ರವಾಹ ಭೀತಿಯಲ್ಲಿ ಕಾಶ್ಮೀರ ಕಣಿವೆ

ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ಸಹಕಾರ ನೀಡುವುದಾಗಿ ರಾಜನಾಥ್ ಸಿಂಗ್  ಭರವಸೆ ನೀಡಿದ್ದಾರೆ.

Last Updated : Jul 1, 2018, 12:58 PM IST
ಅಪಾಯದ ಮಟ್ಟ ಮೀರಿದ ಝೀಲಂ ನದಿ; ಪ್ರವಾಹ ಭೀತಿಯಲ್ಲಿ ಕಾಶ್ಮೀರ ಕಣಿವೆ title=

ಶ್ರೀನಗರ: ಝೀಲಂ ನದಿಯು ಅಪಾಯದ ಮಟ್ಟವನ್ನೂ ಮೀರಿ ಹರಿಯುತ್ತಿರುವ ಪರಿಣಾಮ ಕಾಶ್ಮೀರ ಕಣಿವೆಯು ಪ್ರವಾಹದ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಶನಿವಾರ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಪ್ರವಾಹದ ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು-ಕಾಶ್ಮೀರ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ ಪ್ರವಾಹ ಮುನ್ನೆಚ್ಚರಿಕಾ ಕ್ರಮಕ್ಕೆ ಸಂಬಂಧಿಸಿದಂತೆ ಭಾನುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜಮ್ಮು-ಕಾಶ್ಮೀರ ರಾಜ್ಯಪಾಲ ಎನ್.ಎನ್.ವೋಹ್ರ ಅವರೊಂದಿಗೆ ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಅಲ್ಲದೆ, ಪ್ರವಾಹ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಬೆಂಬಲ ಮತ್ತು ಸಹಕಾರ ನೀಡುವುದಾಗಿ ರಾಜನಾಥ್ ಸಿಂಗ್  ಭರವಸೆ ನೀಡಿದ್ದಾರೆ ಎನ್ನಲಾಗಿದೆ. 

ಏತನ್ಮಧ್ಯೆ, ಕಾಶ್ಮೀರ ಕಣಿವೆಯಲ್ಲಿರುವ ಎರಡು ಬೇಸ್ ಕ್ಯಾಂಪ್ಗಳಿಂದ ಯಾತ್ರಿಕರು ಅಮರನಾಥ ದೇವಾಲಯಕ್ಕೆ ತೆರಳಲು ಅನುಮತಿ ನೀಡಲಾಗಿದೆ. ಹೀಗಾಗಿ ಮಳೆಯ ಕಾರಣದಿಂದ ಮೂರು ದಿನಗಳ ಹಿಂದೆ ಸ್ಥಗಿತಗೊಂಡಿದ್ದ ವಾರ್ಷಿಕ ಅಮರನಾಥ ಯಾತ್ರೆ ಪುನರಾರಂಭವಾಗಿದೆ. 

ಝೀಲಂ ನದಿ ಮತ್ತು ಹೊಳೆಗಳ ಸಮೀಪದಲ್ಲಿ ಮತ್ತು ಮಧ್ಯ ಕಾಶ್ಮೀರದ ಪ್ರದೇಶಗಳಲ್ಲಿ ವಾಸಿಸುವ ಜನರು ಜಾಗರೂಕರಾಗಿರಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅಲ್ಲದೆ, ಪ್ರವಾಹದಿಂದ ಎದುರಾಗಬಹುದಾದ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಸಂಬಂಧ ಗವರ್ನರ್ ಎನ್.ಎನ್. ವೋಹ್ರಾ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಸಭೆ ನಡೆಸಿದ್ದು, ವಿಪತ್ತು ನಿರ್ವಹಣಾ ತಂಡದ ಸ್ವಯಂ ಸೇವಕರು ಮತ್ತು ಪೊಲೀಸ್ ಅಧಿಕಾರಿಗಳನ್ನು ಪರಿಸ್ಥತಿ ಎದುರಿಸಲು ಸಿದ್ಧರಾಗಿರುವಂತೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. 

Trending News