ಕೊಚ್ಚಿ : ಇಡೀ ಕೇರಳ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಚಿನ್ನದ ಕಳ್ಳ ಸಾಗಾಣೆ (Gold smuggling)ಪ್ರಕರಣಕ್ಕೆ ಸಂಬಂಧ ಪಟ್ಟಂತೆ, ಪ್ರಕರಣದ ಮತ್ತೋರ್ವ ಆರೋಪಿ ಎಂ ಶಿವಶಂಕರ್ ( M Shivashankar)ಅವರನ್ನು 7 ದಿನಗಳ ಕಾಲ ಇಡಿ ವಶಕ್ಕೆ (ED custody)ಒಪ್ಪಿಸಲಾಗಿದೆ.
ಗುರುವಾರ ಕೊಚ್ಚಿ ವಿಶೇಷ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಯಿತು.ಈ ಸಂದರ್ಭದಲ್ಲಿ ನ್ಯಾಯಾಲಯವು ಎಂ ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಿ ಆದೇಶ ನೀಡಿತು.
ಎಂ ಶಿವಶಂಕರ್ ಐಎಎಸ್ ಅಧಿಕಾರಿಯಾಗಿದ್ದು, ಕೇರಳ ಮುಖ್ಯಮಂತ್ರಿಯವರ ಮಾಜಿ ಕಾರ್ಯದರ್ಶಿಯಾಗಿದ್ದರು. ಶಿವಶಂಕರ್ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿತ್ತು. ಇದಕ್ಕೂ ಮೊದಲು ಕೇರಳ ಹೈಕೋರ್ಟ್ (Kerala high court)ಶಿವಶಂಕರ್ ನಿರೀಕ್ಷಣಾ ಜಾಮೀನು ಅರ್ಜಿ ಯನ್ನು ತಿರಸ್ಕರಿಸಿತ್ತು. ಜುಲೈ 5ರಂದು ಕಳ್ಳಸಾಗಾಣೆ ನಡೆಯುತ್ತಿದ್ದ ವೇಳೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು.
ಚಿನ್ನದ ಕಳ್ಳ ಸಾಗಣೆ ಮಾಡುವಲ್ಲಿ ಕಸ್ಟಮ್ಸ್ ಇಲಾಖೆಯನ್ನು ಸಂಪರ್ಕಿಸಲು ಪ್ರಕರಣ ಮತ್ತೊಬ್ಬ ಆರೋಪಿ ಸ್ವಪ್ನ ಸುರೇಶ್ ಗೆ ಶಿವಶಂಕರ್ ಸಹಕರಿಸಿದ್ದರು ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯದ ಆರೋಪದ ಪ್ರಕಾರ ಶಿವಶಂಕರ್ ಕಳೆದ ವರ್ಷ ಸೇರಿದಂತೆ ಒಟ್ಟು 21 ಬಾರಿ ಚಿನ್ನ ಕಳ್ಳಸಾಗಣೆ ಮಾಡಲು ಸಹಕರಿಸಿದ್ದರು. ವಿಚಾರಣೆ ವೇಳೆ ಸ್ವಪ್ನ ಸುರೇಶ್ (Swapna Suresh)ಕೂಡಾ ಈ ಅಂಶವನ್ನು ಒಪ್ಪಿಕೊಂಡಿದ್ದರು.
ಶಿವಶಂಕರ್ ವಿಚಾರಣೆ ವೇಳೆ ನೀಡಿರುವ ಹೇಳಿಕೆಯಲ್ಲಿ ಸ್ವಪ್ನ ಸುರೇಶ್ ಗೆ ಸಹಕರಿಸಿರುವುದಾಗಿ ಹೇಳಿಕೆ ನೀಡಿದ್ದರು. ಸ್ವಪ್ನಸುರೇಶ್ ಗೆ ಸಹಾಯ ಮಾಡುವ ಉದ್ದೇಶದಿಂದ ಕಸ್ಟಮ್ಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದಾಗಿ ಹೇಳಿದ್ದರು. ಹಾಗಾಗಿ ಶಿವಶಂಕರ್ ಅಧಿಕಾರ ದುರುಪಯೋಗ ಮತ್ತು ಇತರ ಇಲಾಖೆಗಳ ಕಾರ್ಯಗಳಲ್ಲೂ ಹಸ್ತಕ್ಷೇಪ ನಡೆಸಿರುವುದು ಸಾಬೀತಾಗಿತ್ತು.
ಆರೋಪಿಯನ್ನು ಇಡಿ ವಶಕ್ಕೆ ನೀಡುವ ಮುನ್ನ ಕರೋನಾ ಪರೀಕ್ಷೆಗೆ ಒಳಪಡಿಸಲಾಯಿತು. ಕರೋನಾ ಪರೀಕ್ಷೆಯ ವರದಿ ನೆಗೆಟಿವ್ ಬಂದಿದ್ದು ಆರೋಪಿಯನ್ನು 7 ದಿನಗಳ ಕಾಲ ಮುಂದಿನ ತನಿಖೆಗೆ ಜಾರಿ ನಿರ್ದೇಶನಾಲಯದ ವಶಕ್ಕೆ ಒಪ್ಪಿಸಲಾಗಿದೆ.
Aa