ನ್ಯೂಯಾರ್ಕ್: ಜನರಿಗೆ ಸುಲಭವಾಗಿ ಪಾಸ್ಪೋರ್ಟ್ ಸೇವೆ ಒದಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ.ಸಿಂಗ್ ಹೇಳಿದರು.
ಎಲ್ಲಾ 543 ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ
ಅಮೆರಿಕದ ಭಾರತೀಯ ರಾಯಭಾರ ಕಚೇರಿಯಲ್ಲಿ ಪಾಸ್ಪೋರ್ಟ್ ಸೇವೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಎಲ್ಲಾ 543 ಲೋಕಸಭಾ ಕ್ಷೇತ್ರಗಳಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ಸ್ಥಾಪನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಭಾರತದಲ್ಲಷ್ಟೇ ಅಲ್ಲದೆ, ವಿದೇಶದಲ್ಲಿಯೂ ಭಾರತೀಯರಿಗೆ ಪಾಸ್ಪೋರ್ಟ್ ಸೇವೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.
ಭಾರತದಲ್ಲಿ ಪಾಸ್ಪೋರ್ಟ್ ಸೇವಾ ಕಾರ್ಯಕ್ರಮದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು, ಪಾಸ್ಪೋರ್ಟ್ ವಿತರಣೆ ಸರಳಗೊಳಿಸಲಾಗಿದೆ. ಈ ಯೋಜನೆಯು ವಿದೇಶದಲ್ಲಿರುವ ಭಾರತೀಯರಿಗೆ ಉತ್ತಮ ಸೇವೆಗಳನ್ನು ಒದಗಿಸಲಿದೆ. ಈ ಸೇವೆ ಭಾರತದ ನೈಜ ನಾಗರಿಕರಿಗೆ ಮಾತ್ರ ದೊರೆಯಲಿದೆ. ಈ ನೂತನ ಕಾರ್ಯಕ್ರಮದಡಿ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಕೆ ಸುಲಭವಾಗಿದ್ದು, ವಿತರಣೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ವಿ.ಕೆ.ಸಿಂಗ್ ಹೇಳಿದರು.
2019ರ ಮಾರ್ಚ್ ಒಳಗೆ ಪಾಸ್ಪೋರ್ಟ್ ಸೇವಾ ಕೇಂದ್ರಗಳ ಆರಂಭ
ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ 2019ರ ಮಾರ್ಚ್ ಒಳಗೆ ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ಆರಂಭಿಸುವ ಗುರಿ ಹೊಂದಿದ್ದು, ಎಲ್ಲಾ ಮುಖಿ ಅಂಚೆ ಕಚೇರಿಗಳಲ್ಲಿ ಪಾಸ್ಪೋರ್ಟ್ ಸೇವೆ ಒದಗಿಸುವ ಯೋಜನೆಯಿದೆ. ಹೀಗಾಗಿ ಪಾಸ್ಪೋರ್ಟ್ ಸೇವೆಗಾಗಿ ನಾಗರಿಕರು 50-60 ಕಿ.ಮೀ. ದೂರ ಹೋಗುವ ಅಗತ್ಯವಿಲ್ಲ ಎಂದರು.