ಹೈದರಾಬಾದ್ : ಬಹುನಿರೀಕ್ಷಿತ ಹೈದರಾಬಾದ್ ಮೆಟ್ರೋ ರೈಲು ಯೋಜನೆಯ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದರು.
ಇಂದು ಮಧ್ಯಾಹ್ನ ಮಿಯಾಪುರ್ ರೈಲು ನಿಲ್ದಾಣದಲ್ಲಿ ಪ್ರಧಾನಿ ಮೋದಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ಮೆಟ್ರೋ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು. ಬಳಿಕ ಇಬ್ಬರೂ ನಾಯಕರು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು.
ಇನ್ನುಳಿದಂತೆ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಪಾಲರಾದ ಇ ಎಸ್ ಎಲ್ ನರಸಿಂಹನ್, ಕೇಂದ್ರೀಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ, ತೆಲಂಗಾಣ ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್ ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥ ಕೆ.ಲಕ್ಷ್ಮಣ್ ಪ್ರಧಾನಿ ಅವರೊಂದಿಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿದರು.
ನಾಳೆ (ಬುಧವಾರ) ಬೆಳಗ್ಗೆ 6 ಗಂಟೆಯಿಂದಲೇ ಸಾರ್ವಜನಿಕ ಸೇವೆಗೆ ಮೆಟ್ರೋ ರೈಲು ಅಣಿಯಾಗಲಿದೆ. ಮೊದಲ ಹಂತದ 30 ಕಿ.ಮೀ. ಮೆಟ್ರೋ ಸಂಚಾರ ಇದಾಗಿದ್ದು, ಒಂದೇ ದಿನದಲ್ಲಿ ಚಾಲನೆ ಸಿಗಲಿರುವ ದೇಶದ ಅತಿ ದೊಡ್ಡ ಮೆಟ್ರೋ ಸಂಚಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನಗರದ ನಾಗೋಲ್‌ನಿಂದ ಮಿಯಾಪುರ್‌ವರೆಗೂ ಮೆಟ್ರೋ ಸಂಚಾರ ನಡೆಸಲಿದೆ.
ಕನಿಷ್ಠ 10ರೂ.ದಿಂದ 60 ರೂ.ವರೆಗೂ ಮೆಟ್ರೋ ಪ್ರಯಾಣ ದರ ನಿಗದಿ ಮಾಡಲಾಗಿದೆ. ನಾಗೋಲ್ ಹಾಗೂ ಮಿಯಾಪುರ್ ಮಧ್ಯೆ ಒಟ್ಟು 24 ನಿಲ್ದಾಣಗಳನ್ನು ನಿರ್ಮಿಸಲಾಗಿದೆ.
ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಬಳಸಿ ಹೈದರಾಬಾದ್ ಮೆಟ್ರೋನಲ್ಲಿ ಪ್ರಯಾಣಿಸಬಹುದಾಗಿದ್ದು, ಸ್ಮಾರ್ಟ್ ಕಾರ್ಡ್ ಮಾರಾಟವು ಬೆಳಿಗ್ಗೆ 10.00 ರಿಂದ ಸಂಜೆ 5.00 ಗಂಟೆವೆರೆಗೆ ನಗೋಲ್, ತರ್ನಕಾ, ಪ್ರಕಾಶ್ ನಗರ ಮತ್ತು ಎಸ್.ಆರ್.ನಗರ ಮುಂತಾದ ಮೆಟ್ರೊ ನಿಲ್ದಾಣಗಳಲ್ಲಿ ಈಗಾಗಲೇ ಪ್ರಾರಂಭವಾಗಿದೆ.
ಸ್ಮಾರ್ಟ್ ಕಾರ್ಡ್ಗಳನ್ನು ಖರೀದಿಸಲು, ಪ್ರಯಾಣಿಕರಿಗೆ ಪ್ರತಿ 200 ರೂಪಾಯಿಗಳಿಗೆ ರೂ. 100 ಜೊತೆಗೆ ಪ್ರಯಾಣಕ್ಕೆ ಆರಂಭಿಕ ಮೇಲ್ಭಾಗದ ಮೊತ್ತ ಮತ್ತು ಭದ್ರತಾ ಠೇವಣಿಗೆ 100 ರೂ. ಹಾಗೂ ಸ್ಮಾರ್ಟ್ ಕಾರ್ಡ್ ಬಳಕೆದಾರರಿಗೆ L & T ನಿಂದ ವಿಶೇಷ 5% ರಿಯಾಯಿತಿ ನೀಡಲಾಗುವುದು.
ಇದಲ್ಲದೆ, ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳ ಸೌಲಭ್ಯವೂ ಇದ್ದು, ಜನರು ಟಿಕೆಟ್ಗಾಗಿ ಕೌಂಟರ್ಗಳಲ್ಲಿ ಕ್ಯೂನಲ್ಲಿ ನಿಲ್ಲುವ ಅಗತ್ಯವಿಲ್ಲ. ಜೊತೆಗೆ ಶೌಚಾಲಯಗಳು, ಸಾರ್ವಜನಿಕ ಸಲಹೆ ಮತ್ತು ಮಾಹಿತಿ ವ್ಯವಸ್ಥೆ, ಇತರ ನಿಲ್ದಾಣಗಳ ದೂರವಾಣಿ ಸೇವೆಗಳು ನಿಲ್ದಾಣದಲ್ಲಿ ಲಭ್ಯವಿದೆ.