ವಿಶ್ವ ಯೋಗ ದಿನ: ರಾಂಚಿಯಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ಸಿದ್ಧವಾಗ್ತಿದೆ ಪ್ರಭಾತ್ ತಾರಾ ಮೈದಾನ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತ ಬಿಗಿ ಭದ್ರತೆ ಕೈಗೊಂಡಿದೆ.

Last Updated : Jun 20, 2019, 10:26 AM IST
ವಿಶ್ವ ಯೋಗ ದಿನ: ರಾಂಚಿಯಲ್ಲಿ ಪ್ರಧಾನಿ ಮೋದಿ ಸ್ವಾಗತಕ್ಕೆ ಸಿದ್ಧವಾಗ್ತಿದೆ ಪ್ರಭಾತ್ ತಾರಾ ಮೈದಾನ  title=
File Image

ರಾಂಚಿ: ಅಂತರಾಷ್ಟ್ರೀಯ ಯೋಗ ದಿನವಾದ ಜೂನ್ 21ರಂದು ಜಾರ್ಖಂಡ್ ರಾಜಧಾನಿ ರಾಂಚಿಯ ಪ್ರಭಾತ್ ತಾರಾ ಮೈದಾನ ನೂತನ ಇತಿಹಾಸ ದಾಖಲಿಸಲು ಸಜ್ಜಾಗಿದೆ. ಈ  ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಂಚಿಯಲ್ಲಿ ಸಾವಿರಾರು ಜನರೊಂದಿಗೆ ಯೋಗ ಪ್ರದರ್ಶಿಸುವುದನ್ನು ಕಾಣಬಹುದು.

ರಾಂಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಆಡಳಿತವು ನಗರದ ಸುತ್ತ ಬಿಗಿ ಭದ್ರತೆ ಕೈಗೊಂಡಿದೆ. ರಾಂಚಿ ಪೊಲೀಸರಿಗೆ ಈ ಬಗ್ಗೆ ಸೂಚನೆ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಸಮಯದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕಟ್ಟೆಚ್ಚರ ವಹಿಸಲು ನಗರದ ಬೀದಿಗಳಲ್ಲಿ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ. ಎತ್ತರದ ಕಟ್ಟಡಗಳ ಮೇಲೂ ನಿಗಾ ಇಡಲು ಆಡಳಿತ ನಿರ್ಧರಿಸಿದ್ದು ಅದಕ್ಕಾಗಿ150 ಕ್ಕೂ ಹೆಚ್ಚು ಕಟ್ಟಡಗಳನ್ನು ಗುರುತಿಸಲಾಗಿದೆ.

ಪ್ರಧಾನಿಯವರ ಭೇಟಿ ಸಂದರ್ಭದಲ್ಲಿ ಸೆಲ್ಫಿ ತೆಗೆದುಕೊಳ್ಳದಂತೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ. ದೋಂಡಾ, ಜಗನ್ನಾಥಪುರ, ಧುರ್ವಾ, ಅರ್ಗೋರಾ, ಸುಖದೇವ್ ನಗರ ಮತ್ತು ಕೊಟ್ವಾಲಿ ಪೊಲೀಸ್ ಠಾಣೆಗಳಿಗೆ ವಿಶೇಷ ಮಾರ್ಗಸೂಚಿ ನೀಡಲಾಗಿದೆ. ಭದ್ರತಾ ವ್ಯವಸ್ಥೆಗಾಗಿ 12 ಬೈಕು ಗಸ್ತು ತಂಡಗಳನ್ನು ರಚಿಸಲಾಗಿದೆ. ಪಿಎಂ ಮೋದಿಯವರ ಕಾರ್ಯಕ್ರಮದ ವೇಳೆ ಯಾವುದೇ ವಾಹನಗಳು ಈ ಮಾರ್ಗದಲ್ಲಿ ಸಂಚರಿಸದಂತೆ ನೋಡಿಕೊಳ್ಳಲು ವಿಶೇಷ ಮಾರ್ಗಸೂಚಿ ನೀಡಲಾಗಿದೆ. 

ಪ್ರಧಾನಮಂತ್ರಿಯನ್ನು ಸ್ವಾಗತಿಸಲು ನಗರಕ್ಕೆ ಪ್ರಭಾತ್ ತಾರಾ ಮೈದಾನ ಸಿದ್ಧವಾಗಿದೆ. ಭದ್ರತಾ ವ್ಯವಸ್ಥೆಗಳನ್ನು ಗಮನದಲ್ಲಿಟ್ಟುಕೊಂಡು ಜನಸಾಮಾನ್ಯರು ಬೆಳಿಗ್ಗೆಯೇ ತಮ್ಮ ಸ್ಥಳದಲ್ಲಿ  ಆಸೀನರಾಗುವಂತೆ ಕೋರಲಾಗಿದೆ.

Trending News