ತ್ರಿಪುರಾ: ತ್ರಿಪುರಾ ಪೂರ್ವ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 18ರಂದು ನಡೆಯಬೇಕಿದ್ದ ಮತದಾನವನ್ನು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಿಂದಾಗಿ ಏಪ್ರಿಲ್ 23ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮತ್ತು ವಿಶೇಷ ಪೊಲೀಸ್ ವೀಕ್ಷಕರ ವರದಿಗಳ ಪ್ರಕಾರ, "ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯು ಮುಕ್ತ ನ್ಯಾಯಸಮ್ಮತ ಮತದಾನಕ್ಕೆ ಅನುಕೂಲಕರವಾಗಿಲ್ಲ" ಎಂದು ಅಭಿಪ್ರಾಯಪಡಲಾಗಿದೆ.
ಕ್ಷೇತ್ರದಲ್ಲಿ ಮತದಾನ ಪ್ರಕ್ರಿಯೆಗೆ ಕೆಲವು ದುಷ್ಕರ್ಮಿಗಳು ತೊಂದರೆ ಮಾಡಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದರು. ಅಂತೆಯೇ ಗುಪ್ತಚರ ವರದಿಗಳ ಆಧಾರದ ಮೇಲೆ ಅವರು ಹೆಚ್ಚುವರಿ ಕೇಂದ್ರೀಯ ಪೊಲೀಸ್ ಪಡೆಕ್ಕೆ ಕೋರಿದ್ದರು.
ಈ ಹಿನ್ನೆಲೆಯಲ್ಲಿ ಮತದಾನವನ್ನು ಏಪ್ರಿಲ್ 23ಕ್ಕೆ ಮುಂದೂಡಲಾಗಿದ್ದು, ಆ ವೇಳೆಗೆ ಕ್ಷೇತ್ರದಲ್ಲಿ ಕಾನೂನು ಪರಿಸ್ಥಿತಿ ಸುಧಾರಣೆಯಾಗಿರುತ್ತದೆ ಮತ್ತು ಮುಕ್ತ ಹಾಗೂ ನ್ಯಾಯೋಚಿತ ಚುನಾವಣೆ ಸಾಧ್ಯವಾಗಲಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಸೋಮವಾರವಷ್ಟೇ ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿ ಲೋಕಸಭಾ ಚುನಾವಣೆಯ ಸಿದ್ಧತೆಗಳ ಬಗ್ಗೆ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ಪರಿಶೀಲನೆ ನಡೆಸಿದ್ದರು.