ಲೋಕಸಭಾ ಚುನಾವಣೆ 2019: ಸಾಧ್ವಿ ಪ್ರಗ್ಯಾಗೆ ಚೊಚ್ಚಲ ಜಯ; ದಿಗ್ವಿಜಯ್ ಸಿಂಗ್‌ಗೆ ಸೋಲು

ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಸಾಧ್ವಿ ಪ್ರಗ್ಯಾ 8,66,482 ಮತಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.

Last Updated : May 24, 2019, 06:38 AM IST
ಲೋಕಸಭಾ ಚುನಾವಣೆ 2019: ಸಾಧ್ವಿ ಪ್ರಗ್ಯಾಗೆ ಚೊಚ್ಚಲ ಜಯ; ದಿಗ್ವಿಜಯ್ ಸಿಂಗ್‌ಗೆ ಸೋಲು title=
Pic Courtesy: ANI

ಭೋಪಾಲ್: ಲೋಕಸಭಾ ಚುನಾವಣೆಯಲ್ಲಿ ಮೊದಲ ಭಾರಿಗೆ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಪ್ರಜ್ಞಾ ಸಿಂಗ್ ಠಾಕೂರ್ 3,64,822 ಲಕ್ಷ ಮತಗಳ ಅಂತರದಿಂದ ಶುಕ್ರವಾರ ಭರ್ಜರಿ ಜಯಗಳಿಸಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಸಾಧ್ವಿ ಪ್ರಗ್ಯಾ 8,66,482 ಮತಗಳನ್ನು ಗಳಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ. ದಿಗ್ವಿಜಯ್ ಸಿಂಗ್ ಕೇವಲ 5,01279 ಮತಗಳನ್ನು ಗಳಿಸುವ ಮೂಲಕ ಪರಾಭವಗೊಂಡಿದ್ದಾರೆ. ಅಲ್ಲದೆ, ಬಹುಜನ ಸಮಾಜ ಪಕ್ಷದ ಮಧೋ ಸಿಂಗ್ ಅಹಿರ್ವಾರ್ 11,250 ಮತಗಳನ್ನು ಪಡೆದಿದ್ದಾರೆ.

2014ರಲ್ಲಿ ಭೋಪಾಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ನಾಯಕ ಅಲೋಕ್ ಸಂಜರ್ 3,70,696 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಈ ಗೆಲುವು ಬಿಜೆಪಿ ಅಭ್ಯರ್ಥಿ ಪರವಾಗಿದೆ. 

ಕ್ನವನೆಯಲ್ಲಿ ಗೆಲುವು ಸಾಧಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಗ್ಯಾ ಸಿಂಗ್, "ನಾನು ಜನರ ವಿಶ್ವಾಸವನ್ನು ಗಳಿಸಿದ್ದೇನೆ. ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಪ್ರಗತಿ ಸಾಧಿಸಲಿದೆ" ಎಂದರು. ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಭ್ಯರತಿ ದಿಗ್ವಿಜಯ್ ಸಿಂಗ್, ಜನಾದೆಶವನ್ನು ಸ್ವೀಕರಿಸುವುದಾಗಿ ಹೇಳಿದ್ದಾರೆ.

ಮುಂಜಾನೆ 3.20ರಲ್ಲಿ ರಾಷ್ಟ್ರೀಯ ಚುನಾವಣಾ ಆಯೋಗದ ವೆಬ್ ಸೈಟ್ ಅಪ್ಡೇಟ್ ಪ್ರಕಾರ, ದೇಶಾದ್ಯಂತ ಭಾರತೀಯ ಜನತಾ ಪಕ್ಷ 281 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 22 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 

ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ 'ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಮ್ ಗೋಡ್ಸೆ ಒಬ್ಬ ದೇಶ ಭಕ್ತ' ಎಂದು ಹೇಳುವ ಮೂಲಕ ಭಾರೀ ವಿವಾದಕ್ಕೆ ಪ್ರಗ್ಯ ಗುರಿಯಾಗಿದ್ದರು. ಅಲ್ಲದೆ, ಚುನಾವಣಾ ಆಯೋಗ ಅವರ ವಿವಾದಾತ್ಮಕ ಹೇಳಿಕೆಗಳಿಂದಾಗಿ ಹಲವು ಗಂಟೆಗಳ ಕಾಲ ಪ್ರಚಾರದಲ್ಲಿ ಭಾಗವಹಿಸದಂತೆ ನಿಷೇಧವನ್ನೂ ಹೇರಿತ್ತು. ಬಳಿಕ 'ಗೋಡ್ಸೆ ದೇಶಭಕ್ತ' ಹೇಳಿಕೆಗಾಗಿ ಪ್ರಗ್ಯಾ ಸಿಂಗ್ ಕ್ಷಮೆಯಾಚಿಸಿದ ಬಳಿಕವೂ, ಪ್ರಧಾನಿ ನರೇಂದ್ರ ಮೋದಿ ಅವರು 'ಯಾವುದೇ ಕಾರಣಕ್ಕೂ ಪ್ರಗ್ಯಾರನ್ನು ಕ್ಷಮಿಸುವುದಿಲ್ಲ' ಎಂದು ಹೇಳಿದ್ದರು. 

ಮತ್ತೊಂದೆಡೆ, ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ಹೇಮಂತ್ ಕರ್ಕರೆ ಕುರಿತು ನಿಂದನಾತ್ಮಕ ಹೇಳಿಕೆ ನೀಡಿ ಖಂಡನೆ ವ್ಯಕ್ತವಾದೊಡನೆ ಪ್ರಗ್ಯಾ ಕ್ಷಮೆ ಯಾಚಿಸಿದ್ದರು. ಮುಂಬೈ ಉಗ್ರ ದಾಳಿಯಲ್ಲಿ ಭಯೋತ್ಪಾದಕರಿಂದ ಹತರಾಗಿದ್ದ ಹೇಮಂತ್ ಕರ್ಕರೆಯ ಸಾವು ತನ್ನ ಶಾಪದಿಂದ ಆಗಿದ್ದು ಎಂದು ಸಾಧ್ವಿ ಪ್ರಗ್ಯಾಸಿಂಗ್ ಹೇಳಿದ್ದು ವ್ಯಾಪಕ ಖಂಡನೆಗೆ ಒಳಗಾಗಿತ್ತು.

2008ರ ಮಲೆಂಗಾವ್ ಸ್ಫೋಟ ಪ್ರಕರಣದ ಏಳು ಮಂದಿ ಆರೋಪಿಗಳಲ್ಲಿ ಒಬ್ಬರಾಗಿರುವ ಪ್ರಗ್ಯಾ ಸಿಂಗ್ ಠಾಕೂರ್, ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯಿದೆ ಅಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಸ್ತುತ ಜಾಮೀನು ಪಡೆದು ಪ್ರಗ್ಯಾ ಹೊರಗಿದ್ದಾರೆ. 2008 ರ ಸೆಪ್ಟೆಂಬರ್ 29 ರಂದು ಉತ್ತರ ಮಹಾರಾಷ್ಟ್ರದ ಮಾಲೆಗಾಂವ್ನಲ್ಲಿ ನಡೆದ ಸ್ಫೋಟದಲ್ಲಿ ಆರು ಜನರು ಮೃತಪಟ್ಟಿದ್ದರು. ಇದಕ್ಕೆ ಎಟಿಎಸ್  ತನಿಖಾ ಸಂಸ್ಥೆ ಈ ಘಟನೆ ಹಿಂದೆ  ಹಿಂದೂ ಉಗ್ರಗಾಮಿಗಳ ಗುಂಪಿನ ಕೈವಾಡವಿದೆ ಎಂದು ಆರೋಪಿಸಿತ್ತು.

Trending News