ನವದೆಹಲಿ: ಇಡೀ ದೇಶದಲ್ಲಿ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣೆ 2019ರ ಫಲಿತಾಂಶ ಬಹುತೇಕ ಪ್ರಕಟಗೊಂಡಿದೆ. ಮೋದಿ ಅಲೆಯಲ್ಲಿ ತೇಲಿದ ಬಿಜೆಪಿಗೆ ಮತ್ತೆ ಐದು ವರ್ಷ ಅಧಿಕಾರ ದೊರೆತಿದ್ದು, 'ಫಿರ್ ಏಕ್ ಬಾರ್ ಮೋದಿ ಸರ್ಕಾರ್' ರಚನೆಯಾಗಲಿದೆ. ಇನ್ನೊಂದೆಡೆ, ಚೌಕಿದಾರ್ ಚೋರ್ ಎಂದು ಪ್ರಧಾನಿಯನ್ನು ಮೂದಲಿಸಿದರೂ ಕಾಂಗ್ರೆಸ್ಗೆ ಯಾವುದೇ ಪ್ರಯೋಜನವಾಗಿಲ್ಲ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭದ್ರಕೋಟೆ ಅಮೇಥಿಯಲ್ಲಿ ಚುನಾವಣೆ ಕಳೆದುಕೊಂಡಿದ್ದಾರೆ. ಆದರೂ, ವಯನಾಡ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಸತ್ ತಲುಪಿದ್ದಾರೆ. ಆದರೂ ರಾಹುಲ್ ಸಂಸತ್ನಲ್ಲಿ 'ಒಂಟಿ'ಯಾದ್ರ? ಸಂಸತ್ನಲ್ಲಿ ರಾಹುಲ್ ಗಾಂಧಿಗೆ ಒಂಟಿತನ ಬಾಧಿಸಲಿದೆ ಎನ್ನಲಾಗುತ್ತಿದೆ. ಕಾರಣ ಇಷ್ಟೇ ಈ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಕಾಂಗ್ರೆಸ್ ನಲ್ಲಿ ರಾಹುಲ್ನ 5 ಖಾಸಾ ದೋಸ್ತ್ಗಳೂ ಸೇರಿದ್ದಾರೆ. ರಾಹುಲ್ನ ಆ ಖಾಸಾ ದೋಸ್ತ್ಗಳು ಯಾರೆಂದು ಯೋಚಿಸುತ್ತಿದ್ದೀರಾ...
ಜ್ಯೋತಿರಾದಿತ್ಯ ಸಿಂಧಿಯಾ:
ಮಧ್ಯಪ್ರದೇಶದ ಗುನಾ ಲೋಕಸಭೆ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಸಂಸದರಾಗಿ ಚುನಾಯಿತರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮೊದಲ ಬಾರಿಗೆ ಸೋಲು ಅನುಭವಿಸಿದ್ದಾರೆ. ಸಿಂಧಿಯಾ ಬಿಜೆಪಿ ಅಭ್ಯರ್ಥಿ ಕೃಷನ್ ಪಾಲ್ ಯಾದವ್ ಅವರಿಂದ 1,25,549 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರ ಕುಟುಂಬ ಸೋಲನ್ನು ಕಂಡಿದೆ.
ಸಿಂಧಿಯಾ ಅವರ ಮೂರು ತಲೆಮಾರಿನ ರಾಜ್ ಭರ್ನಿ ಕುಟುಂಬವನ್ನು ಗುನಾ ಲೋಕಸಭಾ ಕ್ಷೇತ್ರದಿಂದ 14 ಬಾರಿ ಸಂಸತ್ ಗೆ ಕಳುಹಿಸಲಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ ಅವರ ಅಜ್ಜಿ ವಿಜಯರಾಜೆ ಸಿಂಧಿಯಾ 6 ಬಾರಿ ಗುನಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅವರ ತಂದೆ ಮಾಧವರಾವ್ ನಾಲ್ಕು ಬಾರಿ ಇದೇ ಕ್ಷೇತ್ರದಿಂದ ಸಂಸದರಾಗಿದ್ದರು. ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಈ ಕ್ಷೇತ್ರದಿಂದ 4 ಬಾರಿ ಸಂಸದರಾಗಿ ಪ್ರತಿನಿಧಿಸಿದ್ದಾರೆ.
ದೀಪೇಂದರ್ ಸಿಂಗ್ ಹೂಡಾ:
ಹರಿಯಾಣದ ರೋಥಕ್ ಲೋಕಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಸಂಸದರಾಗಿದ್ದ ದೀಪೇಂದರ್ ಸಿಂಗ್ ಹೂಡಾ ಈ ಬಾರಿ ಸೋತಿದ್ದಾರೆ. ಬಿಜೆಪಿ ಅಭ್ಯರ್ಥಿ ಅರವಿಂದ್ ಕುಮಾರ್ ಶರ್ಮಾ ಅವರು ಹೂಡಾ ಅವರನ್ನು 7,503 ಮತಗಳಿಂದ ಸೋಲನುಭವಿಸಿದ್ದಾರೆ. ರೋಹ್ಟಕ್ನಲ್ಲಿ, ಲೋಕಸಭಾ ಚುನಾವಣೆ 16 ಬಾರಿ ನಡೆದಿತ್ತು, ಇದರಲ್ಲಿ ಕಾಂಗ್ರೆಸ್ 11 ಬಾರಿ ಗೆದ್ದಿದೆ.
ಜಿತಿನ್ ಪ್ರಸಾದ್:
ಉತ್ತರಪ್ರದೇಶದ ಧೌರಾ ಲೋಕಸಭಾ ಕ್ಷೇತ್ರದ ಮಾಜಿಸಂಸದ ಜಿತಿನ್ ಪ್ರಸಾದ್ ಈ ಬಾರಿ ಸಂಸತ್ ಮೆಟ್ಟಿಲೇರಲು ಸಾಧ್ಯವಾಗಲಿಲ್ಲ. ಬಿಜೆಪಿ ಅಭ್ಯರ್ಥಿ ರೇಖಾ ವರ್ಮಾ ಧೌರಾ ಕ್ಷೇತ್ರವನ್ನು ಗೆದ್ದಿದ್ದಾರೆ. ಅದೇ ಸಮಯದಲ್ಲಿ, ಜಿತಿನ್ ಪ್ರಸಾದ್ ಈ ಸೀಟಿನಲ್ಲಿ ಸೋಲಿನೊಂದಿಗೆ ಮೂರನೇ ಸ್ಥಾನಕ್ಕಿಳಿದಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಕ್ಷೇತ್ರದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಅಭ್ಯರ್ಥಿ ಅರ್ಷದ್ ಇಲ್ಯಾಸ್ ಸಿದ್ದಿಕಿ ಎರಡನೆಯ ಸ್ಥಾನದಲ್ಲಿದ್ದಾರೆ.
ಸುಶ್ಮಿತಾ ದೇವ್:
ಕಾಂಗ್ರೆಸ್ ಅಭ್ಯರ್ಥಿ ಸುಶ್ಮಿತಾ ದೇವ್ ಅವರು ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡಿದ್ದಾರೆ. ಸುಷ್ಮಿತಾ ದೇವ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು ಎನ್ನಲಾಗುತ್ತದೆ. ಸುಷ್ಮಿತಾ ದೇವ್ ಬಿಜೆಪಿ ಅಭ್ಯರ್ಥಿ ರಾಜೀಪ್ ರಾಯ್ ಅವರಿಂದ 81,596 ಮತಗಳಿಂದ ಸೋತಿದ್ದಾರೆ.
ಮಿಲಿಂದ್ ದೇವೋರಾ:
ಮಹಾರಾಷ್ಟ್ರದ ದಕ್ಷಿಣ ಮುಂಬಯಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದೇವೋರಾ ಅವರು ಈ ಬಾರಿಯ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಮಿಲಿಂದ್ ದೇವೋರಾ ಅವರು ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟದ ಅಭ್ಯರ್ಥಿ ಅರವಿಂದ್ ಗಣಪತ್ ಸಾವಂತ್ ಎದುರು 1,00,067 ಮತಗಳಿಂದ ಸೋಲನುಭವಿಸಿದ್ದಾರೆ.