ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನದಿಂದ Sachin Pilotರನ್ನು ಕೈಬಿಟ್ಟ ಕಾಂಗ್ರೆಸ್, ಸತ್ಯ ಸೋಲುವುದಿಲ್ಲ ಎಂದ ಪೈಲಟ್

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇರವಾಗಿ ರಾಜ್ ಭವನಕ್ಕೆ ತಲುಪಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

Updated: Jul 14, 2020 , 02:54 PM IST
ರಾಜಸ್ಥಾನ ಉಪಮುಖ್ಯಮಂತ್ರಿ ಸ್ಥಾನದಿಂದ Sachin Pilotರನ್ನು ಕೈಬಿಟ್ಟ ಕಾಂಗ್ರೆಸ್, ಸತ್ಯ ಸೋಲುವುದಿಲ್ಲ ಎಂದ ಪೈಲಟ್

ಜೈಪುರ್: ರಾಜಸ್ಥಾನದ ಗೆಹ್ಲೋಟ್ ಸರ್ಕಾರದ ಮೇಲಿನ ಬಿಕ್ಕಟ್ಟುಇದೀಗ ಮತ್ತಷ್ಟು ಉಲ್ಭಣಿಸಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗ ಶಾಸಕರು ಅನುಪಸ್ಥಿತರಾಗಿದ್ದಾರೆ. ಈ ಹಿನ್ನೆಲೆ ಗಂಭೀರ ಕ್ರಮ ಕೈಗೊಂಡ ಪಕ್ಷ  ಸಚಿನ್ ಪೈಲಟ್ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಿದೆ. ಅವರನ್ನು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಹುದ್ದೆಯಿಂದಲೂ ಸಹ ಕೈಬಿಡಲಾಗಿದೆ.. ಅವರ ಬೆಂಬಲಿತ ಸಚಿವರಾಗಿರುವ ವಿಶ್ವವೇಂದ್ರ ಸಿಂಗ್, ರಮೇಶ್ ಮೀಣಾ ಅವರನ್ನೂ ಕೂಡ ಸಂಪುಟದಿಂದ ವಜಾಗೊಳಿಸಲಾಗಿದೆ. ಗೋವಿಂದ್ ಸಿಂಗ್ ದೋಟಾಸರ ಅವರನ್ನು ರಾಜಸ್ಥಾನ್ ಕಾಂಗ್ರೆಸ್ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಈ ಸಭೆಯ ನಂತರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇರವಾಗಿ ರಾಜ್ ಭವನಕ್ಕೆ ತಲುಪಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಗೋವಿಂದ್ ಸಿಂಗ್ ದೋಟಾಸರ ರಾಜ್ಯಸ ಸಿಖರ್ ಜಿಲ್ಲೆಯ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ದೋಟಾಸರಾ ರಾಜಸ್ಥಾನ ಸರ್ಕಾರದಲ್ಲಿ ಶಿಕ್ಷಣ ರಾಜ್ಯ ಸಚಿವರಾಗಿದ್ದಾರೆ. ಶಾಸಕ ಗಣೇಶ ಘೋಘರಾ ಅವರನ್ನು ಯುವ ಕಾಂಗ್ರೆಸ್ ನೂತನ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಸೇವಾ ದಳದ ನೂತನ ರಾಜ್ಯ ಮುಖ್ಯ ಸಂಘಟಕರಾಗಿ ಹೆಮ್ ಸಿಂಗ್ ಶೇಖಾವತ್ ನೇಮಕಗೊಂಡಿದ್ದಾರೆ. ಈ ಮೂರು ಹುದ್ದೆಗಳ ನೇಮಕಾತಿಯನ್ನು ಮೊಟ್ಟ ಮೊದಲ ಬಾರಿಗೆ ಯಾವುದೇ ಒಂದು ಪತ್ರಿಕಾಗೋಷ್ಠಿಯ ಮೂಲಕ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ರಾಷ್ಟ್ರೀಯ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಸಮ್ಮುಖದಲ್ಲಿ ರಣದೀಪ್ ಸುರ್ಜೆವಾಲಾ ಈ ಘೋಷಣೆಗಳನ್ನು ಮಾಡಿದ್ದಾರೆ.

ಇದಕ್ಕೂ ಮೊದಲು ಕಾಂಗ್ರೆಸ್ ಸುದ್ದಿಗೋಷ್ಠಿ ನಡೆದಿದ್ದು, ಈ ಸುದ್ದಿಗೋಷ್ಠಿಯ ವೇಳೆ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.. ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸಿದೆ ಎಂದು ಸುರ್ಜೇವಲಾ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕಾಗಿ ಬಿಜೆಪಿ ಆದಾಯ ತೆರಿಗೆ ಇಲಾಖೆ, ಇಡಿಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ. ಕಾಂಗ್ರೆಸ್ ಶಾಸಕರನ್ನು ಹಣಬಲ ಮತ್ತು ತೋಳ್ಬಲದ  ದುರುಪಯೋಗದಿಂದ ಖರೀದಿಸಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ. ಸಚಿನ್ ಪೈಲಟ್ ಮತ್ತು ಕೆಲವು ಮಂತ್ರಿಗಳು ಬಿಜೆಪಿಯ ಬಲೆಗೆ ಬಿದ್ದು ತೀವ್ರ ಗೊಂದಲಕ್ಕೊಳಗಾಗಿದ್ದಾರೆ. ಇದರಿಂದಲೇ ಸಚಿನ್ ಪೈಲಟ್ ರಾಜಸ್ಥಾನ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂದು ಸುರ್ಜೆವಾಲಾ ಆರೋಪ ಮಾಡಿದ್ದಾರೆ.

ಮೂಲಗಳ ಪ್ರಕಾರ ಸಚಿನ್ ಪೈಲಟ್ ಅವರ ಮನವೊಲಿಕೆಗೆ ರಾಹುಲ್ ಗಾಂಧಿ 1 ಬಾರಿ, ಪ್ರಿಯಾಂಕಾ ಗಾಂಧಿ 4 ಬಾರಿ, ಚಿದಂಬರಂ 6 ಬಾರಿ, ಅಹ್ಮದ್ ಪಟೇಲ್ 15 ಬಾರಿ ಹಾಗೂ ಕೆ.ಸಿ ವೇಣುಗೋಪಾಲ್ 3 ಬಾರಿ ದೂರವಾಣಿ ಕರೆ ಮಾಡುವ ಮೂಲಕ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ. ಇದಕ್ಕೆ ಸಚಿನ್ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ. ಅಷ್ಟೇ ಯಾಕೆ ಪ್ರಿಯಾಂಕಾ ಗಾಂಧಿ ದೂರವಾಣಿ ಕರೆಗೆ ಶಾಸಕ ಭಂವರ್ ಲಾಲ್ ಶರ್ಮಾ ಉತ್ತರಿಸಿದ್ದಾರೆ ಎಂದೂ ಕೂಡ ಹೇಳಲಾಗಿದೆ.

ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ಕೈಗೊಂಡಿರುವ ಈ ಕ್ರಮದ ಕುರಿತು ಟ್ವೀಟ್ ಮಾಡುವ ಮೂಲಕ ತಮ್ಮ ಮೊದಲ ಪ್ರತಿಕ್ರಿಯೆ ನೀಡಿರುವ ಸಚಿನ್ ಪೈಲಟ್ "ಸತ್ಯವನ್ನು ನೀವು ತೊಂದರೆಗೆ ಈಡು ಮಾಡಬಹುದು, ಆದರೆ ಸೋಲಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.