ಬೆಂಗಳೂರು: ಇಂದು ಉನ್ನತ ಶಿಕ್ಷಣ ಪಡೆಯುವ ಯುವಜನರ ಕನಸಿಗೆ ಸಾಕಾರಗೊಳ್ಳಲು ಹೊಸ ರಾಷ್ಟ್ರೀಯ ಶಿಕ್ಷಣ ಪಾಲಿಸಿ ತಂದವರು, ಎಂಟಿಎನ್ಎಲ್ ಮೂಲಕ ಇಂದಿನ ದೂರ ಸಂಪರ್ಕ ಕ್ರಾಂತಿಗೆ ನಾಂದಿ ಹಾಡಿದ ಮಾಹಿತಿ ತಂತ್ರಜ್ಞಾನದ ಹರಿಕಾರ ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ 75ನೇ ಜನ್ಮ ದಿನಾಚರಣೆ.
ಯುವಜನರು 18ನೇ ವಯಸ್ಸಿಗೆ ಮತ ಚಲಾಯಿಸುವ ಹಕ್ಕನ್ನು ಒದಗಿಸಿದ ಧೀಮಂತ ನಾಯಕ, ಭಾರತ ದೇಶವನ್ನು ಆರ್ಥಿಕವಾಗಿ ಉನ್ನತ ಶಿಖರಕ್ಕೆ ಕೊಂಡೊಯ್ಯುವ ಕನಸು ಕಂಡಿದ್ದ ಮಹಾನ್ ನಾಯಕ ರಾಜೀವ್ ಗಾಂಧಿ ಅವರ 75ನೇ ಜಯಂತಿಯನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.
ತಂದೆಯ ಜನ್ಮದಿನದ ಸಂದರ್ಭದಲ್ಲಿ ತಂದೆಯನ್ನು ನೆನೆದು ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ದೇಶಭಕ್ತ ರಾಜೀವ್ ಗಾಂಧೀಜಿಯವರ ಯೋಜನೆಗಳು ಭಾರತ ನಿರ್ಮಾಣಕ್ಕೆ ಸಹಾಯವಾದವು. ನನಗೆ ಅವರು ಪ್ರೀತಿಯ ತಂದೆ, ಯಾರನ್ನೂ ದ್ವೇಷಿಸಬೇಡ, ಕ್ಷಮಿಸಿಬಿಡು ಮತ್ತು ಎಲ್ಲರನ್ನೂ ಪ್ರೀತಿಸು ಎಂದು ನನ್ನ ತಂದೆ ಹೇಳಿಕೊಟ್ಟಿದ್ದರು ಎಂದು ಅವರ ಮಾತುಗಳನ್ನು ನೆನೆದಿದ್ದಾರೆ.
1985ರಲ್ಲಿ ರಾಜೀವ್ ಗಾಂಧಿ ನಾಯಕತ್ವದಡಿ ದೇಶದಲ್ಲಿ ಮಾಹಿತಿ ತಂತ್ರಜ್ಞಾನ ಹೇಗೆ ಹುಟ್ಟಿಕೊಂಡಿತು ಎಂದು ವಿಡಿಯೋ ಒಂದನ್ನು ರಾಹುಲ್ ಗಾಂಧಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
This week we will celebrate my father, Rajiv Gandhi Ji's 75th birth anniversary with memorial events across India.
To honour him, each day this week, I will draw attention to one of his many incredible achievements. Today, the Information Technology revolution. #RajivGandhi75 pic.twitter.com/qBjIfTVRkj
— Rahul Gandhi (@RahulGandhi) August 19, 2019
ರಾಜೀವ್ ಗಾಂಧಿ ಅವರ ಕಿರು ಪರಿಚಯ:
ಆಗಸ್ಟ್ 20, 1944 ರಂದು ಶ್ರೀಮತಿ ಇಂದಿರಾ ಗಾಂಧಿ ಹಾಗೂ ಫಿರೋಝ್ ಗಾಂಧಿ ದಂಪತಿಗಳ ಮೊದಲ ಮಗನಾಗಿ ರಾಜೀವ್ ಗಾಂಧಿ ಜನಿಸಿದರು. 1951 ರಲ್ಲಿ, ರಾಜೀವ್ ಮತ್ತು ಸಂಜಯ್ ಅವರನ್ನು ಶಿವ ನಿಕೇತಾನ್ ಶಾಲೆಯಲ್ಲಿ ದಾಖಲಿಸಲಾಯಿತು. ಅಲ್ಲಿ ಶಿಕ್ಷಕರು ರಾಜೀವ್ ಅವರನ್ನು ನಾಚಿಕೆ ಮತ್ತು ಅಂತರ್ಮುಖಿ ಸ್ವಭಾವದವರು ಎನ್ನುತ್ತಿದ್ದರು. ರಾಹುಲ್ ಚಿತ್ರಕಲೆ ಮತ್ತು ರೇಖಾಚಿತ್ರದಲ್ಲಿ ಬಹಳ ಆಸಕ್ತಿ ಹೊಂದಿದ್ದರು.
ಅವರನ್ನು 1954 ರಲ್ಲಿ ವೆಲ್ಹಾಮ್ ಬಾಯ್ಸ್ ಸ್ಕೂಲ್ ಮತ್ತು ಡೂನ್ ಶಾಲೆಗೆ ಸೇರಿಸಲಾಯಿತು. ಎ-ಲೆವೆಲ್ಸ್ ಅನ್ನು ಅಧ್ಯಯನ ಮಾಡಲು 1961 ರಲ್ಲಿ ರಾಜೀವ್ ಅವರನ್ನು ಲಂಡನ್ಗೆ ಕಳುಹಿಸಲಾಯಿತು. 1962 ರಿಂದ 1965 ರವರೆಗೆ ಕೇಂಬ್ರಿಜ್ನ ಟ್ರಿನಿಟಿ ಕಾಲೇಜಿನಲ್ಲಿ ಅವರು ಎಂಜಿನಿಯರಿಂಗ್ ಅಧ್ಯಯನ ಮಾಡಿದರು, ಆದರೆ ಪದವಿಯನ್ನು ಪಡೆಯಲಿಲ್ಲ. 1966 ಅವರು ಇಂಪೀರಿಯಲ್ ಕಾಲೇಜ್ ಲಂಡನ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಒಂದು ಕೋರ್ಸ್ ಪ್ರಾರಂಭಿಸಿದರು, ಆದರೆ ಅದನ್ನೂ ಪೂರ್ಣಗೊಳಿಸಲಿಲ್ಲ.
1966 ರಲ್ಲಿ ರಾಜೀವ್ ಗಾಂಧಿಯವರು ಭಾರತಕ್ಕೆ ಮರಳಿದರು, ಆ ಸಮಯದಲ್ಲಿ ಅವರ ತಾಯಿ ಪ್ರಧಾನ ಮಂತ್ರಿಯಾದರು. ದೆಹಲಿಗೆ ತೆರಳಿ ಫ್ಲೈಯಿಂಗ್ ಕ್ಲಬ್ನ ಸದಸ್ಯರಾದ ರಾಜೀವ್ ಅಲ್ಲಿ ಪೈಲೆಟ್ ತರಬೇತಿ ಪಡೆದರು. 1970 ರಲ್ಲಿ ಏರ್ ಇಂಡಿಯಾ ಪೈಲಟ್ ಆಗಿ ಅವರು ನೇಮಕಗೊಂಡರು.
1968 ರಲ್ಲಿ, ಮೂರು ವರ್ಷಗಳ ಪ್ರಣಯದ ನಂತರ, ಅವರು ಇಟಲಿಯ ಮೂಲದವರಾದ ಎಡ್ವಿಗೆ ಆಂಟೋನಿಯಾ ಅಲ್ಬಿನಾ ಮಿನೊ(ಸೋನಿಯ ಗಾಂಧಿ) ರನ್ನು ವಿವಾಹವಾದರು. ಅವರ ಮೊದಲ ಮಗುವಾಗಿ ಮಗ ರಾಹುಲ್ ಗಾಂಧಿ 1970 ರಲ್ಲಿ ಜನಿಸಿದರು. 1972 ರಲ್ಲಿ, ಈ ದಂಪತಿಗೆ ಪ್ರಿಯಾಂಕಾ ಗಾಂಧಿ ಜನಿಸಿದರು.
ಸಂಜಯ್ ಗಾಂಧಿಗಿಂತ ಭಿನ್ನವಾಗಿದ್ದ ರಾಜೀವ್ ರಾಜಕೀಯದಲ್ಲಿ ಆಸಕ್ತಿ ಹೊಂದಿರಲಿಲ್ಲ:
ಜೂನ್ 23, 1980 ರಂದು, ರಾಜೀವ್ ಅವರ ಕಿರಿಯ ಸಹೋದರ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಅನಿರೀಕ್ಷಿತವಾಗಿ ನಿಧನರಾದರು. ಆ ಸಮಯದಲ್ಲಿ, ತನ್ನ ವಿದೇಶ ಪ್ರವಾಸದ ಭಾಗವಾಗಿ ರಾಜೀವ್ ಗಾಂಧಿಯವರು ಲಂಡನ್ನಲ್ಲಿದ್ದರು. ಸುದ್ದಿಯನ್ನು ಕೇಳಿದ ಅವರು ದೆಹಲಿಗೆ ಮರಳಿ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು. ಸಂಜಯ್ ಗಾಂಧಿಗಿಂತ ಭಿನ್ನವಾಗಿದ್ದ ರಾಜೀವ್ ರಾಜಕೀಯದಲ್ಲಿ ಆಸಕ್ತಿ ಹೊಂದಿರಲಿಲ್ಲ. ಅಗರವಾಲ್ ಪ್ರಕಾರ, ಸಂಜಯ್ ಅವರ ಮರಣದ ನಂತರ, ಬದರಿನಾಥ್ನ ಸಂತ, ಶಂಕರಾಚಾರ್ಯ ಸ್ವಾಮಿ ಶ್ರೀ ಸ್ವಾರೋಪಾನಂದ್ ಅವರು ತಮ್ಮ ಸಂತಾಪ ಸೂಚಿಸಲು ರಾಜೀವ್ ಅವರ ಮನೆಗೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ಅವರು ಪೈಲೆಟ್ ಕನಸನ್ನು ಬಿಟ್ಟು ರಾಷ್ಟ್ರದ ಸೇವೆಗೆ ತೊಡಗಿಕೊಳ್ಳಬೇಕೆಂದು ರಾಜೀವ್ ಗಾಂಧಿ ಅವರಿಗೆ ಸಲಹೆ ನೀಡಿದರು. ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ರಾಜೀವ್ ಅವರನ್ನು ರಾಜಕೀಯಕ್ಕೆ ಪ್ರವೇಶಿಸುವಂತೆ ಒತ್ತಾಯಿಸಿದರು. ನಂತರ ರಾಜೀವ್ ಅನಿವಾರ್ಯವಾಗಿ ರಾಜಕೀಯಕ್ಕೆ ಧುಮುಕಿದರು.
80ರ ದಶಕದಲ್ಲಿ ರಾಜಕೀಯ ಪ್ರವೇಶಿಸಿದ ರಾಜೀವ್ ಗಾಂಧಿ:
ರಾಜೀವ್ ಗಾಂಧಿ 16 ಫೆಬ್ರವರಿ 1981 ರಂದು ರಾಜಕೀಯ ಪ್ರವೇಶಿಸಿದರು, ಅವರು ದೆಹಲಿಯಲ್ಲಿ ರಾಷ್ಟ್ರೀಯ ರೈತರ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು. 1981 ರ ಮೇ 4 ರಂದು, ಇಂದಿರಾ ಗಾಂಧಿಯವರು ಆಲ್ ಇಂಡಿಯಾ ಕಾಂಗ್ರೆಸ್ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿದರು. ಅಮೇಥಿ ಕ್ಷೇತ್ರದ ಅಭ್ಯರ್ಥಿಯಾಗಿ ರಾಜೀವ್ ಅವರನ್ನು ಕಣಕ್ಕಿಳಿಸುವಂತೆ ವಸಂತ್ದಾದಾ ಪಾಟೀಲ್ ಪ್ರಸ್ತಾಪಿಸಿದರು. ಸಭೆಯಲ್ಲಿ ನೆರೆದಿದ್ದ ಎಲ್ಲಾ ಸದಸ್ಯರು ಇದಕ್ಕೆ ಸಮ್ಮತಿ ಸೂಚಿಸಿದರು.
ರಾಜೀವ್ ಗಾಂಧಿ ಅಮೇಥಿಯಿಂದ ಲೋಕಸಭಾ ಅಭ್ಯರ್ಥಿ ಶರದ್ ಯಾದವ್ ಅವರನ್ನು 2,37,000 ಮತಗಳ ಅಂತರದಿಂದ ಸೋಲಿಸಿದರು. ಅವರು ಆಗಸ್ಟ್ 17 ರಂದು ಸಂಸತ್ತಿನ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.
ಶ್ರೀಮತಿ ಇಂದಿರಾಗಾಂಧಿ ಅವರ ಮರಣದ ನಂತರ ಭಾರತದ ಪ್ರಧಾನ ಮಂತ್ರಿಯಾದರು. ಇವರು ಭಾರತದ ಮೊದಲ ಯುವ (40ನೇ ವಯಸ್ಸಿನಲ್ಲಿ) ಪ್ರಧಾನಿಯಾದರು. 1948 ರ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ (404 ಸ್ಥಾನಗಳು) ಗೆದ್ದಿದ್ದರು. ಜನಮುಖಿ ಕಾರ್ಯಗಳಿಗೆ ಇಂಬು ಕೊಟ್ಟ ಇವರು ಬಹು ಬೇಗನೆ ಜನಪ್ರಿಯ ಪ್ರಧಾನ ಮಂತ್ರಿಗಳೆನಿಸಿದರು.
ಶ್ರೀಲಂಕಾದ ಎಲ್.ಟಿ.ಟಿ ಸಮಸ್ಯೆಯ ನಿಗ್ರಹಕ್ಕೋಸ್ಕರ ಅವರು, ಶ್ರೀಲಂಕಾಕ್ಕೆ ಭಾರತದ ಸೈನ್ಯವನ್ನು ಕಳುಹಿಸಿಕೊಟ್ಟ ಪರಿಣಾಮವಾಗಿ, ಅವರು ತಮ್ಮ ಜೀವವನ್ನು ತೆರಬೇಕಾಯಿತು. ತಮಿಳುನಾಡಿನ ಪೆರಂಬೂರಿಗೆ ಬಹಿರಂಗ ಚುನಾವಣಾ ಭಾಷಣವನ್ನು ಮಾಡಲು ಹೋಗಿ, ಶ್ರೀಲಂಕಾದ ಎಲ್.ಟಿ.ಟಿಯವರ ಮಾನವ ಬಾಂಬ್ ಧಾಳಿಗೆ ತುತ್ತಾದರು.