ನವದೆಹಲಿ: ಐಪಿಎಸ್ ಅಧಿಕಾರಿ ರಿಷಿ ಕುಮಾರ್ ಶುಕ್ಲರನ್ನು ಹೊಸ ಕೇಂದ್ರ ತನಿಖಾಧಿಕಾರಿ (ಸಿಬಿಐ) ನಿರ್ದೇಶಕರಾಗಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಶನಿವಾರ ತಿಳಿಸಿದೆ.
ರಿಷಿ ಕುಮಾರ್ ಶುಕ್ಲಾ ಅವರು 1983ರ ಮಧ್ಯಪ್ರದೇಶ ಕೆಡರ್ನ ಐಪಿಎಸ್ ಅಧಿಕಾರಿಯಾಗಿದ್ದು, ಆ ರಾಜ್ಯ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಸಂಸತ್ನ ನೇಮಕಾತಿ ಸಮಿತಿಯು ನೂತನ ನಿರ್ದೇಶಕರ ನೇಮಕಾತಿಗೆ ಅನುಮೋದನೆ ನೀಡಿದೆ. ಶುಕ್ಲಾ ಅವರು 2 ವರ್ಷಗಳವರೆಗೆ ಸಿಬಿಐನ ಚುಕ್ಕಾಣಿ ಹಿಡಿಯಲಿದ್ದಾರೆ.
ಅಲೋಕ್ ವರ್ಮಾ, ರಾಕೇಶ್ ಆಸ್ತಾನಾ ವಿವಾವದ ಬಳಿಕ ಈ ಹುದ್ದೆ ಖಾಲಿಯಾಗಿತ್ತು. ಕೇಂದ್ರ ಸರಕಾರವು ವಿವಾದಾತ್ಮಕ ಬೆಳವಣಿಗೆಯಲ್ಲಿ ಅಲೋಕ್ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನದಿಂದ ಕೆಳಗಿಳಿಸಿತ್ತು. ಆ ನಂತರ ಆ ಸ್ಥಾನಕ್ಕೆ 30ಕ್ಕೂ ಹೆಚ್ಚು ಜನರನ್ನು ಶಾರ್ಟ್ ಲಿಸ್ಟ್ ಮಾಡಲಾಯಿತು. ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿರುವ ಉನ್ನತಾಧಿಕಾರ ಸಮಿತಿಯು ರಿಷಿ ಕುಮಾರ್ ಶುಕ್ಲಾ ಅವರನ್ನು ನೂತನ ಸಿಬಿಐ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ವಿಶೇಷ ಸಮಿತಿ ಶುಕ್ರವಾರ ಈ ಕುರಿತಂತೆ ಸಮಿತಿ ಸಭೆ ಕರೆದಿತ್ತು. ಮೋದಿ, ಖರ್ಗೆ ಹಾಗೂ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಿಬಿಐ ನಿರ್ದೇಶಕ ಸ್ಥಾನಕ್ಕೆ ಮೂರ್ನಾಲ್ಕು ಹೆಸರುಗಳು ನಾಮ ನಿರ್ದೇಶನಗೊಂಡಿವೆ ಎನ್ನಲಾಗಿತ್ತು. ಸರಕಾರ ಪ್ರಸ್ತಾಪಿಸಿದ ಕೆಲವು ಹೆಸರುಗಳಿಗೆ ಖರ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿತ್ತು. ಪ್ರತಿಷ್ಠಿತ ಹುದ್ದೆಗೆ 1984ನೇ ಬ್ಯಾಚ್ನ ಹಿರಿಯ ಐಪಿಎಸ್ ಅಧಿಕಾರಿಗಳಾದ ಜಾವೀದ್ ಅಹ್ಮದ್, ರಜನಿ ಕಾಂತ್ ಮಿಶ್ರಾ ಹಾಗೂ ಎಸ್.ಎಸ್. ದೇಶ್ವಾಲ್ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗಿತ್ತು.