ನವದೆಹಲಿ: ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯದ ಸಿಜೆಐ ನೇತೃತ್ವದ ತ್ರಿದಸ್ಯ ಪೀಠ ಇಂದು ಯಾವುದೇ ನಿರ್ದೇಶನ ನೀಡದೆ ವಿಚಾರಣೆಯನ್ನು ನಾಳೆಗೆ ಮುಂದೂಡಿತು.
ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಪ್ರಾರಂಭವಾಗುತ್ತಿದ್ದಂತೆ ವಾದ ಮಂಡಿಸಿದ ಪಕ್ಷೇತರ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಇಂದು ಸಂಜೆ 6 ಗಂಟೆಯೊಳಗೆ ವಿಶ್ವಾಸ ಮತಕ್ಕೆ ನಿರ್ದೇಶನ ನೀಡಿ ಎಂದು ಸುಪ್ರೀಂಕೋರ್ಟ್ನಲ್ಲಿ ಮನವಿ ಮಾಡಿದರು.
'ಸದನದಲ್ಲಿ ಪ್ರತಿದಿನ ಆಗಿದ್ದೇ ಆಗುತ್ತಿದೆ. ರಾಜ್ಯಪಾಲರು ಎರಡು ಬಾರಿ ನಿರ್ದೇಶನ ನೀಡಿದ್ದರೂ ಅವರ ನಿರ್ದೇಶನ ಪಾಲಿಸಿಲ್ಲ. ಇಂದು ಸಂಜೆಯೇ ವಿಶ್ವಾಸಮತ ಯಾಚಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶಿಸಬೇಕು' ಎಂದು ರೋಹ್ಟಗಿ ಪೀಠಕ್ಕೆ ಕೋರಿದರು.
ಮುಕುಲ್ ರೋಹ್ಟಗಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, 'ವಿಧಾನಸಭೆಯಲ್ಲಿ ಚರ್ಚೆ ಆರಂಭವಾಗಿ ಕೇವಲ ನಾಲ್ಕು ದಿನಗಳಾಗಿದೆ. ಸ್ಪೀಕರ್ ನಿನ್ನೆ ಸಂಜೆಯೇ ವಿಶ್ವಾಸ ಮತ ಯಾಚಿಸುವಂತೆ ಹೇಳಿದ್ದರು' ಎಂದು ಸ್ಪೀಕರ್ ನಡೆ ಬಗ್ಗೆ ಸಮರ್ಥಿಸಿಕೊಂಡರು. ಅಲ್ಲದೆ ಇಂದು ಸಂಜೆಯೊಳಗೆ ವಿಶ್ವಾಸ ಮತ ಮುಗಿಸುವುದಾಗಿ ಸ್ಪೀಕರ್ ಹೇಳಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆ ಪ್ರಕ್ರಿಯೆ, ಕಾರ್ಯಕಲಾಪದಲ್ಲಿ ಸ್ಪೀಕರ್ ಹಸ್ತಕ್ಷೇಪ ಮಾಡುವಂತಿಲ್ಲ. ಆದರೂ ಅವರು ನಿಗದಿತ ಅವಾಧಿಯಲ್ಲಿ ಪೂರ್ಣಗೊಳಿಸುವಂತೆ ಸಭೆಗೆ ಸೂಚಿಸಿದ್ದಾರೆ ಎಂದು ನ್ಯಾಯಾಲಯದ ಗಮನ ಸೆಳೆದ ಸಿಂಘ್ವಿ, ವಾದದ ವೇಳೆ ಅರುಣಾಚಲ ಪ್ರದೇಶದ ಕೇಸ್ ಬಗ್ಗೆ ಪ್ರಸ್ತಾಪಿಸಿದರು.
'ವಿಶ್ವಾಸಮತ ಯಾವಾಗ ಮುಗಿಸುತ್ತೀರಿ' ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಂಘ್ವಿ, 'ಸದನದಲ್ಲಿ ಚರ್ಚೆ ನಡೆಯುತ್ತಿದೆ. ಚರ್ಚೆ ಮಧ್ಯೆ ಮತಕ್ಕೆ ಹಾಕಲು ಹೇಗೆ ಸಾಧ್ಯ? ಸದನದಲ್ಲಿ ಎಲ್ಲರೂ ಮಾತನಾಡಬೇಕು' ಎಂದು ತಿಳಿಸಿದರು.
'ಸ್ಪೀಕರ್ ಇಂದೇ ವಿಶ್ವಾಸಮತ ಯಾಚಿಸುವ ಭರವಸೆ ನೀಡಿದ್ದಾರೆ. ನಮಗೂ ಆಶಾಭಾವ ಇದೆ' ಎಂದು ಹೇಳಿದ ಸಿಜೆಐ ರಂಜನ್ ಗೊಗೋಯ್ ವಿಚಾರಣೆಯನ್ನು ನಾಳೆಗೆ ಮುಂದೂಡಿದರು.