ನವದೆಹಲಿ: ಸುಪ್ರೀಂಕೋರ್ಟ್ ನಾಳೆ ಶಬರಿಮಲೆ ಹಾಗೂ ರಫೆಲ್ ಒಪ್ಪಂದ ಪ್ರಕರಣಗಳಲ್ಲಿ ತನ್ನ ಆದೇಶಗಳ ವಿರುದ್ಧ ಪರಿಶೀಲನಾ ಅರ್ಜಿಗಳ ತೀರ್ಪುಗಳನ್ನು ಪ್ರಕಟಿಸಲಿದೆ.
ಶಬರಿಮಲೆ ಪ್ರಕರಣದಲ್ಲಿ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ಸದಸ್ಯರ ಪೀಠವು ಮುಟ್ಟಿನ ಮಹಿಳೆಯರಿಗೆ ಕೇರಳದ ದೇಗುಲಕ್ಕೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ತನ್ನ ಸೆಪ್ಟೆಂಬರ್ 2018 ರ ಆದೇಶವನ್ನು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಬಗ್ಗೆ ತೀರ್ಪು ನೀಡಲಿದೆ.ಇನ್ನೂ 58,000 ಕೋಟಿ ರಫೇಲ್ ಒಪ್ಪಂದ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿ ಡಿಸೆಂಬರ್‌ನಲ್ಲಿ ನೀಡಿದ ತೀರ್ಪನ್ನು ಉನ್ನತ ನ್ಯಾಯಾಲಯವು ಪರಿಶೀಲಿಸಲಿದೆ.
ಶಬರಿಮಲೆ ತೀರ್ಪನ್ನು ಮುಖ್ಯನ್ಯಾಯಮೂರ್ತಿ ರಂಜನ್ ಗೋಗಯ್, ರೋಹಿಂಗಟನ್ ನಾರಿಮನ್, ಎ.ಎಂ ಖಾನ್ವಿಲ್ಕರ್, ಡಿ.ವೈ ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಅವರು ಗುರುವಾರ ಬೆಳಗ್ಗೆ 10.30ಕ್ಕೆ ನೀಡಲಿದ್ದಾರೆ.ಇದಾದ ನಂತರ ಇನ್ನೊಂದೆಡೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್, ಸಂಜಯ್ ಕಿಶನ್ ಕೌಲ್, ಕೆ.ಎಂ,ಜೋಸೆಫ್ ಅವರು ರಾಫೆಲ್ ಒಪ್ಪಂದದ ವಿಚಾರವಾಗಿ ತೀರ್ಪು ನೀಡಲಿದ್ದಾರೆ.
10 ರಿಂದ 50 ವರ್ಷದೊಳಗಿನ ಮಹಿಳೆಯರು ಮತ್ತು ಹುಡುಗಿಯರ ಮೇಲೆ ಹೇರಿದ ಶತಮಾನಗಳಷ್ಟು ಹಳೆಯದಾದ ನಿಷೇಧವನ್ನು ಕೊನೆಗೊಳಿಸಿ ಕೇರಳದ ಶಬರಿಮಲೆದಲ್ಲಿರುವ ಪ್ರಸಿದ್ಧ ಅಯ್ಯಪ್ಪಾ ದೇಗುಲಕ್ಕೆ ಎಲ್ಲಾ ವಯಸ್ಸಿನ ಮಹಿಳೆಯರನ್ನು ಅನುಮತಿಸಬೇಕು ಎಂದು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಉನ್ನತ ನ್ಯಾಯಾಲಯ ಆದೇಶಿಸಿತ್ತು.
ರಫೇಲ್ ಒಪ್ಪಂದದ ಕುರಿತು, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಫ್ರೆಂಚ್ ಸಂಸ್ಥೆ ಡಸಾಲ್ಟ್ ಏವಿಯೇಷನ್‌ನೊಂದಿಗಿನ ರಫೇಲ್ ಫೈಟರ್ ಜೆಟ್ ಒಪ್ಪಂದದಲ್ಲಿ ಮೋದಿ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡುವ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಪರಿಶೀಲನಾ ಅರ್ಜಿಗಳ ಕುರಿತು ತೀರ್ಪು ನೀಡಲಿದೆ.