ನವದೆಹಲಿ: ದೆಹಲಿ ವಿಧಾನಸಭೆ ಚುನಾವಣಾ 2020ಕ್ಕೂ ಮೊದಲೇ ದೆಹಲಿಯ ಶಾಹೀನ್ ಬಾಗ್ ಪ್ರತಿಭಟನೆಯ ಕೇಂದ್ರ ಬಿಂದುವಾಗಿ ಮಾರ್ಪಟ್ಟಿದೆ. ಇಂತಹುದರಲ್ಲಿ BJP ಕಡೆಯಿಂದ ಸಂಸದರಾಗಿರುವ ಪ್ರವೇಶ್ ವರ್ಮಾ ಇದೀಗ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೆಹಲಿ ಚುನಾವಣೆಗಳಲ್ಲಿ ಒಂದು ವೇಳೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಂದೇ ಒಂದು ಗಂಟೆಯಲ್ಲಿ ಶಾಹೀನ್ ಬಾಗ್ ಪ್ರತಿಭಟನೆಗೆ ಅಂತ್ಯಹಾಡಲಾಗುವುದು ಎಂದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಹಾಗೂ ಅವರ ಆಮ್ ಆದ್ಮಿ ಪಕ್ಷದ ಮೇಲೆ ತೀಕ್ಷ ವಾಗ್ದಾಳಿ ನಡೆಸಿರುವ ಅವರು, ಶಾಹೀನ್ ಬಾಗ್ ನಲ್ಲಿ ಪ್ರತಿಭಟನಾಕಾರಿಗೆ ಕೆಜ್ರಿವಾಲ್ ಹಾಗೂ ಅವರ ಮುಖಂಡರು ಬೆಂಬಲ ನೀಡಿದ್ದರಿಂದ ಈ ಪ್ರತಿಭಟನೆ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಜೊತೆಗೆ "ತಮ್ಮ ಸರ್ಕಾರ ರಾಜೀವ್ ಫಿರೋಜ್ ಗಾಂಧಿ ಸರ್ಕಾರವಾಗಿರದೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಗಿದ್ದು, ಯಾರ ಹೆದರಿಕೆಗೂ ಬೆದರುವುದಿಲ್ಲ. ಶಾಹಬಾನೋ ಪ್ರಕರಣದಲ್ಲಿ ರಾಜೀವ್ ಫಿರೋಜ್ ಗಾಂಧಿ ಸರ್ಕಾರ ತನ್ನ ತೀರ್ಪು ಬದಲಿಸಿರಬಹುದು. ಆದರೆ, CAA ವಿಚಾರದಲ್ಲಿ ಮೋದಿ ಸರ್ಕಾರ ಯಾರ ಮುಂದೆಯೂ ಮಂಡಿಯೂರುವುದಿಲ್ಲ" ಎಂದು ಟಿಪ್ಪಣಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪ್ರವೇಶ ವರ್ಮಾ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದರು. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಚುನಾವಣಾ ಆಯೋಗ, ಅವರ ಪ್ರಚಾರದ ಮೇಲೆ ನಿರ್ಬಂಧ ಹೇರಿತ್ತು. ಆಯೋಗ ಅವರಿಗೆ 96 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ನಿಷೇಧ ಹೇರಿತ್ತು. ಈ ನಿಷೇಧದ ಬಳಿಕ ಅವರ ಪತ್ನಿ ಅವರು ಸ್ಪರ್ಧಿಸುತ್ತಿರುವ ವಿಧಾನಸಭಾ ಕ್ಷೇತ್ರದಲ್ಲಿ ಅವರ ಪರ ಚುನಾವಣಾ ಪ್ರಚಾರ ನಡೆಸಿದ್ದರು. ಈ ವೇಳೆ ಚುನಾವಣಾ ಆಯೋಗ ತಮ್ಮ ಮೇಲೆ ಕೈಗೊಂಡ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪ್ರವೇಶ್ ವರ್ಮಾ, ತಮ್ಮ ಬಾಯಿ ಮೇಲೆ ಬಟ್ಟೆ ಕಟ್ಟಿಕೊಳ್ಳುವ ಮೂಲಕ ತಮ್ಮ ಸರ್ಕಾರಿ ನಿವಾಸದ ಎದುರು ವಿಶಿಷ್ಟ ಧರಣಿ ಪ್ರದರ್ಶನ ನಡೆಸಿದ್ದರು.