ಆರ್.ಅಶೋಕ್ ಕಾಲಜ್ಞಾನಿ, ಸಂಖ್ಯಾಜ್ಞಾನಿ; ಬೆಕ್ಕಸ ಬೆರಗುಂಟು ಮಾಡಿದೆ ಎಂದ ಎಚ್‍ಡಿಕೆ

ಚುನಾವಣೆ ಆಗಲಿ, ಫಲಿತಾಂಶ ಬರಲಿ. ಓಡು ಮಗಾ, ಓಡು ಮಗಾ ಸರದಿ ಯಾರದ್ದೆನ್ನುವುದು ಜನಕ್ಕೇ ಗೊತ್ತಾಗುತ್ತದೆ. ಎಷ್ಟಾದರೂ ಓಡು ಮಗಾ ರೇಸ್ʼನಲ್ಲಿ ನಿಮ್ಮನ್ನು ಸರಿಗಟ್ಟುವ ವೀರರೂ ಶೂರರೂ ಕರ್ನಾಟಕದಲ್ಲಿ ಇದ್ದಾರೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Written by - Puttaraj K Alur | Last Updated : Mar 16, 2023, 05:06 PM IST
  • ನಮ್ಮ ಜೆಡಿಎಸ್ ಪಕ್ಷಕ್ಕೆ 20 ಸ್ಥಾನಗಳು ಬರುತ್ತವೆಂದು ಚಿಕ್ಕಬಳ್ಳಾಪುರದಲ್ಲಿ ಆರ್.ಅಶೋಕ್ ಗಿಣಿಭವಿಷ್ಯ ಹೇಳಿದ್ದಾರೆ
  • ಬಿಜೆಪಿ ಎಷ್ಟು ಸೀಟು ಗೆಲ್ಲುತ್ತದೆನ್ನುವುದನ್ನು ಹೇಳಲು ಮರೆತಿದ್ದಾರೆಯೋ ಅಥವಾ ಬೇಕೆಂದೇ ಹೇಳಲಿಲ್ಲವೋ?
  • ಅಶೋಕ್ ಸಾಹೇಬರು 'ವಿಜಯ ಸಂಕಲ್ಪ'ಕ್ಕೆ ಬದಲಾಗಿ 'ಸುಳ್ಳುಸಂಕಲ್ಪ' ಮಾಡಿಕೊಂಡೇ ರಾಜ್ಯ ಸುತ್ತುತ್ತಿದ್ದಾರೆ
ಆರ್.ಅಶೋಕ್ ಕಾಲಜ್ಞಾನಿ, ಸಂಖ್ಯಾಜ್ಞಾನಿ; ಬೆಕ್ಕಸ ಬೆರಗುಂಟು ಮಾಡಿದೆ ಎಂದ ಎಚ್‍ಡಿಕೆ title=
ಆರ್.ಅಶೋಕ್ ಗೆ ಕುಮಾರಸ್ವಾಮಿ ತಿರುಗೇಟು!

ಬೆಂಗಳೂರು: ‘ಸಚಿವ ಆರ್.ಅಶೋಕ್ ಭವಿಷ್ಯವನ್ನು, ಸಂಖ್ಯಾಸಾಸ್ತ್ರವನ್ನು ಹೇಳುತ್ತಾರೆಂದು ನನಗೆ ಗೊತ್ತಾಗಿದ್ದು ಈಗಲೇ. ಅವರಲ್ಲೂ ಒಬ್ಬರು 'ಕಾಲಜ್ಞಾನಿ', 'ಸಂಖ್ಯಾಜ್ಞಾನಿ' ಇದ್ದಾರೆನ್ನುವ ಸೋಜಿಗ ನನಗೆ ಬೆಕ್ಕಸ ಬೆರಗುಂಟು ಮಾಡಿದೆ. ಚುನಾವಣೆ ನಂತರ ತಮ್ಮ ದುಡಿಮೆಗೆ ದೋಖಾ ಇಲ್ಲವೆನ್ನುವ ಆತ್ಮವಿಶ್ವಾಸ ಅಶೋಕ್ ಅವರಲ್ಲಿದೆ, ಸಂತೋಷ’ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

‘ನಮ್ಮ ಜೆಡಿಎಸ್ ಪಕ್ಷಕ್ಕೆ 20 ಸ್ಥಾನಗಳು ಬರುತ್ತವೆಂದು ಚಿಕ್ಕಬಳ್ಳಾಪುರದಲ್ಲಿ ಗಿಣಿಭವಿಷ್ಯ ಹೇಳಿರುವ ಅವರು, ತಮ್ಮ ಬಿಜೆಪಿ ಅದೆಷ್ಟು ಸೀಟು ಗೆಲ್ಲುತ್ತದೆ ಎನ್ನುವುದನ್ನು ಹೇಳಲು ಮರೆತಿದ್ದಾರೆ! ಮರೆತಿದ್ದಾರೆಯೋ ಅಥವಾ ಬೇಕೆಂದೇ ಹೇಳಲಿಲ್ಲವೋ..? ಅವರೇ ಹೇಳಬೇಕು. ಎಷ್ಟೇ ಆಗಲಿ, ಅವರ ಜಾಣತನ ಜಗಜ್ಜಾಹೀರು!! ಅಶೋಕ್ ಸಾಹೇಬರು 'ವಿಜಯ ಸಂಕಲ್ಪ'ಕ್ಕೆ ಬದಲಾಗಿ 'ಸುಳ್ಳುಸಂಕಲ್ಪ' ಮಾಡಿಕೊಂಡೇ ರಾಜ್ಯವನ್ನು ಸುತ್ತುತ್ತಿದ್ದಾರೆ. ಅವರ 'ಸುಳ್ಳುಸಂಕಲ್ಪ ಯಾತ್ರೆ'ಗೆ ನನ್ನ ಶುಭಾಶಯಗಳು ಹಾಗೂ ಗಾಢ ಸಾಂತ್ವನಗಳು. ಆದರೆ ಅವರ ಕಾಮಾಲೆ ಮನಸ್ಸಿನ, ಅದರ ಅರೆಬೆಂದ ಲೆಕ್ಕದ ಬಗ್ಗೆ ನನ್ನ ಅನುಕಂಪವಿದೆ’ ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

ಇದನ್ನೂ ಓದಿ: Karnataka Assembly Election: ಸಚಿವ ವಿ. ಸೋಮಣ್ಣ ಮುನಿಸಿಗೆ ಚಾಮರಾಜನಗರ ಸಾರಥ್ಯದ ಮುಲಾಮು ಹಚ್ಚಿದ ಹೈಕಮಾಂಡ್!

‘ತಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ ಕಂಡವರ ತಟ್ಟೆಯಲ್ಲಿ ನೊಣ ಹುಡುಕುವುದು ಬಿಜೆಪಿಗೆ ಅಂಟಿದ ಜಾಡ್ಯ ಮತ್ತು ಆಜನ್ಮಪರ್ಯಂತ ಬಂದಿರುವ ಚಾಳಿ. ನಮ್ಮ ಪಕ್ಷ ಬಿಡೋರ ಮಾತು ಹಾಗಿರಲಿ, ನಿಮ್ಮ ಪಕ್ಷದಲ್ಲಿ ವಾರದೊಪ್ಪತ್ತಿನಿಂದ ನಿರಂತರವಾಗಿ ಕೇಳಿಬರುತ್ತಿರುವ ಅರುಣರಾಗ, ವಿಜಯನಾದ ಕಥನಗಳ ಕಥೆ ಎನು ಅಶೋಕ್‌ ಅವರೇ? ನಿನ್ನೆ ದಿನ ನಿಮ್ಮ ಕೇಂದ್ರ ಗೃಹ ಸಚಿವರು ಅಮಿತ್ ಶಾ ಅವರು ಮಾಡಿದ ಪಂಚಾಯಿತಿ ಕಟ್ಟೆ ಪುರಾಣದ ಅಸಲಿಯೆತ್ತೇನು? ಈ ಬಿಜೆಪಿಯ ಗೃಹಭಂಗದಿಂದ ಯಾರಿಗೆ ದುಃಖ? ಯಾರಿಗೆ ʼಸಂತೋಷʼ!? ಕೊಂಚ ಹೇಳಬಲ್ಲಿರಾ ಅಶೋಕ್‌ ಅವರೇ?’ ಎಂದು ಎಚ್‍ಡಿಕೆ ಪ್ರಶ್ನಿಸಿದ್ದಾರೆ.

‘ಇಷ್ಟೆಲ್ಲಾ ಅವಾಂತರ, ಹಗರಣಗಳ ಹೊಲಸು ಮೆತ್ತಿಕೊಂಡಿರುವ ನೀವು, ನಮ್ಮನ್ನು 20 ಸೀಟಿಗೇ ಕಟ್ಟಿ ಹಾಕಬಲ್ಲಿರಾ? ʼ40% ನಾಯಕʼರಾದ ನಿಮ್ಮಲ್ಲಿ ಆ ಧಮ್ಮುತಾಕತ್ತು ಇದೆಯಾ? ಹಾಗಿದ್ದರೆ, ವಿಶ್ವವಂದ್ಯ ಪ್ರಧಾನಿಗಳು ಅಷ್ಟು ಬಿಡುವಾಗಿ ಕರ್ನಾಟಕಕ್ಕೆ ಪದೇಪದೆ ಓಡೋಡಿ ಬರುತ್ತಾರೇಕೆ? ಅಮಿತ್ ಶಾರವರ ಅಪರಿಮಿತ ಭೇಟಿಗಳು ಯಾಕೋ?? ಪಾಪ.. ನಿಮ್ಮ ಫಜೀತಿ! ಚುನಾವಣೆ ಆಗಲಿ, ಫಲಿತಾಂಶ ಬರಲಿ. ಓಡು ಮಗಾ, ಓಡು ಮಗಾ ಸರದಿ ಯಾರದ್ದೆನ್ನುವುದು ಜನಕ್ಕೇ ಗೊತ್ತಾಗುತ್ತದೆ. ಎಷ್ಟಾದರೂ ಓಡು ಮಗಾ ರೇಸ್ʼನಲ್ಲಿ ನಿಮ್ಮನ್ನು ಸರಿಗಟ್ಟುವ ವೀರರೂ ಶೂರರೂ ಕರ್ನಾಟಕದಲ್ಲಿ ಇದ್ದಾರೆಯೇ? ʼಆಪರೇಷನ್ ಕಮಲಕಾಂಡʼದಲ್ಲಿ ನಿಮ್ಮದೂ ಒಂದು ತುಕ್ಕುಹಿಡಿದ ಅಧ್ಯಾಯವಿದೆಯಲ್ಲಾ? ಸಾಮ್ರಾಟ್ ಅಶೋಕೂ ಮತ್ತು ಆಪರೇಷನ್ ಕಮಲವೂ’ ಎಂದು ಎಚ್‍ಡಿಕೆ ಟೀಕಿಸಿದ್ದಾರೆ.

ಇದನ್ನೂ ಓದಿ: B Sriramulu : ಸಾರಿಗೆ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಶೇ.15 ರಷ್ಟು ವೇತನ ಹೆಚ್ಚಳ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News