161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಬರ ಘೋಷಣೆ ಸಂಬಂಧಿಸಿ ಸಿಎಂಗೆ ಶಿಫಾರಸು: ಕೃಷ್ಣ ಬೈರೇಗೌಡ

 ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಬರ ಘೋಷಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

Written by - Prashobh Devanahalli | Edited by - Manjunath N | Last Updated : Sep 13, 2023, 04:07 PM IST
  • ಕೇಂದ್ರದ ಮಾರ್ಗಸೂಚಿಯಂತೆ ಬರ ಘೋಷಣೆಗೆ ಅರ್ಹ ತಾಲೂಕುಗಳು
  • 34 ತಾಲೂಕುಗಳಲ್ಲಿ ಭಾಗಶಃ ಬರದ ಸ್ಥಿತಿ
  • ಬೆಳೆ ಸಮೀಕ್ಷೆ ಮತ್ತು ಗ್ರೌಂಡ್ ಟ್ರತಿಂಗ್ ವರದಿ ಆಧರಿಸಿ ಪಟ್ಟಿ ಸಿದ್ದ
  • ಸಿಎಂ ಭೇಟಿಗೆ ಅವಕಾಶ ನೀಡದ ಪ್ರಧಾನಿ: ಅಸಮಾಧಾನ
 161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ, ಬರ ಘೋಷಣೆ ಸಂಬಂಧಿಸಿ ಸಿಎಂಗೆ ಶಿಫಾರಸು: ಕೃಷ್ಣ ಬೈರೇಗೌಡ title=

ಬೆಂಗಳೂರು: ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಎದುರಾಗಿದ್ದು, ಬರ ಘೋಷಣೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆ ಚರ್ಚೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಬೆಳೆ ಸಮೀಕ್ಷೆ ಮತ್ತು ಗ್ರೌಂಡ್ ಟ್ರುತಿಂಗ್ (ಬೆಳೆ ಪರಿಶೀಲನೆ) ನಡೆಸಲಾಗಿದ್ದು, ಕೇಂದ್ರದ ಮಾರ್ಗಸೂಚಿಯಂತೆ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿದೆ. ಈ ಬಗ್ಗೆ ಇಂದು ನಡೆದ ಐದನೇ ಸಂಪುಟ ಉಪಸಮಿತಿ ಸಭೆಯಲ್ಲಿ ಸಂಬಂಧಿತ ಸಚಿವರು ಹಾಗೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಬರ ಘೋಷಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಿಫಾರಸು ಮಾಡಲಾಗಿದೆ. ಅಲ್ಲದೆ, ಈ ಕುರಿತು ಕೇಂದ್ರಕ್ಕೆ ಮನವಿ (ಮೆಮೊರಾಂಡಮ್) ಸಲ್ಲಿಸಲು ಸಿದ್ದತೆ ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಬಿಡುವ ಆದೇಶ ಹಿನ್ನೆಲೆ: ಸಿಎಂ ಅಧ್ಯಕ್ಷತೆಯಲ್ಲಿ ತುರ್ತು ಸಭೆ

“ಕಳೆದ ವಾರ ನಡೆದ ನಾಲ್ಕನೇ ಸಂಪುಟ ಉಪ ಸಮಿತಿ ಸಭೆಯಲ್ಲೇ 62 ತಾಲೂಕುಗಳು ಕೇಂದ್ರ ಮಾರ್ಗಸೂಚಿಯಂತೆ ಬರ ಘೋಷಣೆಗೆ ಅರ್ಹ ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೂ ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಇದ್ದ ಕಾರಣಕ್ಕೆ 134 ತಾಲೂಕುಗಳಲ್ಲಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆ ಹಾಗೂ ಗ್ರೌಂಡ್ ಟ್ರುತಿಂಗ್ ಗೆ ಸೂಚಿಸಲಾಗಿತ್ತು. ಎಲ್ಲಾ ತಾಲೂಕುಗಳ ವರದಿಯೂ ನಿನ್ನೆ ಕೈಸೇರಿದ್ದು ಕೇಂದ್ರ ಸರ್ಕಾರದ ಬರ ಮಾರ್ಗಸೂಚಿಯಂತೆ ಒಟ್ಟಾರೆ 161 ತಾಲೂಕುಗಳು ಬರ ಘೋಷಣೆಗೆ ಅರ್ಹವಾಗಿವೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

34 ತಾಲೂಕುಗಳಲ್ಲಿ ಭಾಗಶಃ ಬರ:

161 ತಾಲೂಕುಗಳಲ್ಲದೆ ಇನ್ನೂ 34 ತಾಲೂಕುಗಳಲ್ಲಿಯೂ ಭಾಗಶಃ ಬರದ ಪರಿಸ್ಥಿತಿ ಇದೆ. ಆದರೆ, ಈ ತಾಲೂಕುಗಳನ್ನೂ ಬರ ಪೀಡಿತ ಪ್ರದೇಶಗಳೆಂದು ಘೋಷಿಸಲು ಕೇಂದ್ರದ ಮಾರ್ಗಸೂಚಿ ಅಡ್ಡಿಯಾಗಿದೆ. ಹೀಗಾಗಿ 15 ದಿನಗಳ ನಂತರ ಸ್ಯಾಟಲೈಟ್ ಇಮೇಜ್ ಆಧರಿಸಿ ಮತ್ತೊಂದು ಸುತ್ತಿನ ಬೆಳೆ ಸಮೀಕ್ಷೆಗೆ ಸೂಚಿಸಲಾಗುವುದು. ಈ ವೇಳೆ ಸಮೀಕ್ಷೆಗೆ ಒಳಪಟ್ಟ ತಾಲೂಕು ‘ಕೇಂದ್ರದ ಬರ ಮಾರ್ಗಸೂಚಿ’ಗೆ ಅನ್ವಯಿಸಿದರೆ ಎರಡನೇ ಹಂತದಲ್ಲಿ ಬರ ಘೋಷಣೆ ಮಾಡಲಾಗುವುದು ಎಂದರು. 

34 ತಾಲೂಕುಗಳು ಮಾತ್ರವಲ್ಲದೆ ಮತ್ತೂ 41 ತಾಲೂಕುಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ. ಅಕ್ಟೋಬರ್ ಕೊನೆಯ ವರೆಗೆ ಬೆಳೆ ಸಮೀಕ್ಷೆ ನಡೆಸಿ ಬರ ಘೋಷಣೆಗೆ ಅವಕಾಶವೂ ಇದೆ. ಹೀಗಾಗಿ ಈಗ ತಿಳಿಸಿರುವ 161 ತಾಲೂಕುಗಳೇ ಅಂತಿಮವಲ್ಲ. ಬದಲಾಗಿ ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಆಧರಿಸಿ ಮತ್ತೊಂದಷ್ಟು ತಾಲೂಕುಗಳನ್ನೂ “ಬರ ಪೀಡಿತ” ಎಂದು ಘೋಷಿಸಲಾಗುವುದು. ಈ ಬಗ್ಗೆ ಕೇಂದ್ರಕ್ಕೆ ಮತ್ತೊಂದು ಮನವಿ (ಮೆಮೊರಾಂಡಮ್) ಸಲ್ಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ಬರ ಘೋಷಣೆ ನಂತರ ಪರಿಹಾರ

ಬರ ಘೋಷಣೆ ಪರಿಹಾರ ಕ್ರಮದ ಬಗ್ಗೆಯೂ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ಕೃಷ್ಣಬೈರೇಗೌಡ ಅವರು, “ಮಳೆ ಕೊರತೆಯಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಇಂದು ಬರ ಘೋಷಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿದೆ. ಬರ ಘೋಷಣೆಯ ನಂತರ ಪರಿಹಾರದ ಕ್ರಮಗಳ ಬಗ್ಗೆ ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಅಲ್ಲದೆ, ಈಗಾಗಲೇ ಪ್ರತಿ ತಾಲೂಕುಗಳಲ್ಲೂ ಟಾಸ್ಕ್ ಫೋರ್ಸ್ ರಚನೆಗೆ ಸಿದ್ದತೆ ನಡೆಸಲಾಗಿದೆ. ಅಲ್ಲದೆ, ಬರ ಘೋಷಿಸುತ್ತಿದ್ದಂತೆ, ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ 100 ದಿನಗಳ ಮಾನವ ದಿನವನ್ನು 150 ದಿನಕ್ಕೆ ಹೆಚ್ಚಿಸಲಾಗುವುದು. ಈ ಸಂಬಂಧ ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಈಗಾಗಲೇ ಚರ್ಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ನೀರಿಗೂ, ಮೇವಿಗೂ ಕೊರತೆ ಇಲ್ಲ:

ರಾಜ್ಯದಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಇಲ್ಲ. ಕುಡಿಯುವ ನೀರಿನ ಪೂರೈಕೆ ಸಲುವಾಗಿಯೇ ಎಲ್ಲಾ ಜಿಲ್ಲಾ ಪಂಚಾಯತ್ ಸಿಇಓ ಗಳ ಖಾತೆಗೆ ಈಗಾಗಲೇ ಒಂದು ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ಅಲ್ಲದೆ, ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 462 ಕೋಟಿ ಹಣ ಇದೆ. ಈ ಹಣವನ್ನು ನೀರು ಪೂರೈಕೆಗೆ ಬಳಸಲು ಸೂಚಿಸಲಾಗಿದೆ. ಮತ್ತಷ್ಟು ಹಣದ ಅಗತ್ಯ ಇದ್ದರೆ ಅದನ್ನೂ ಪೂರೈಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಗತ್ಯವಿದ್ದ ಸ್ಥಳಗಳಿಗೆ ಟ್ಯಾಂಕರ್ ಅಥವಾ ಖಾಸಗಿ ಬೋರ್ ಗಳ ಮೂಲಕ ನೀರು ಪೂರೈಕೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು. 

ಪಶುಗಳ ಮೇವಿನ ಕೊರತೆಗೆ ಸಂಬಂಧಿಸಿದ ಪತ್ರಕರ್ತರ ಪ್ರಶ್ನೆಗಳಿಗೂ ಉತ್ತರಿಸಿದ ಅವರು, ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ. ಬರ ಘೋಷಣೆಗೆ ಮುನ್ನವೇ ಅಗತ್ಯ ಮೇವಿನ ದಾಸ್ತಾನಿಗೆ ಸೂಚಿಸಲಾಗಿದೆ. ಮೇವು ಖರೀದಿ ದಾಸ್ತಾನಿಗೆ ಮಾರ್ಗಸೂಚಿ ಸಿದ್ದಪಡಿಸಿದ್ದು 20 ಕೋಟಿ ರೂ. ನೀಡಲಾಗಿದೆ. ಅಲ್ಲದೆ, ರೈತರಿಗೆ ಮೇವಿನ ಭಿತ್ತನೆ ಬೀಜಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವೈಜ್ಞಾನಿಕ ಸಂಶೋಧನೆಗೆ ಕೃಷಿ ವಿವಿಗೆ ಸೂಚನೆ

ರಾಜ್ಯದ 34 ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆ ಇದೆ. ಬೆಳೆ ಪರಿಸ್ಥಿತಿಯೂ ಆಶಾದಾಯಕವಾಗಿಲ್ಲ. ಆದರೂ, ಸ್ಯಾಟಲೈಟ್ ಇಮೇಜ್ ನಲ್ಲಿ ತೇವಾಂಶದ ಹಸಿರು ಹೊದಿಕೆ ಕಂಡುಬಂದಿದೆ. ಕೇಂದ್ರ ಸರ್ಕಾರ ಬರ ಘೋಷಣೆಗೆ ಮುನ್ನ ಈ ಸ್ಯಾಟಲೈಟ್ ಇಮೇಜ್ ಗಳನ್ನು ಪರಿಶೀಲಿಸುವುದು ವಾಡಿಕೆ. ಹೀಗಾಗಿ ಈ ಇಮೇಜ್ ಗಳು ಬರ ಘೋಷಣೆಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವಂತೆ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯ ಮತ್ತು ಒಂದು ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ಸೂಚನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಶೇ.28 ರಷ್ಟು ಮಳೆ ಕೊರತೆ

ರಾಜ್ಯದಲ್ಲಿ ಈ ವರ್ಷ ಒಟ್ಟಾರೆ ಶೇ.28 ರಷ್ಟು ಮಳೆ ಕೊರತೆ ಉಂಟಾಗಿದೆ. ಮಳೆನಾಡಿನಲ್ಲಿ ಶೇ.40 ರಷ್ಟು ಮಳೆ ಕೊರತೆಯಾಗಿದ್ದು ಆಘಾತಕಾರಿ ಅಲ್ಲದೆ, ಕಾವೇರಿ ಒಳಹರಿವು ಸಹ ಗಣನೀಯವಾಗಿ ಕಡಿಮೆಯಾಗುತ್ತಿದೆ ಎಂದು ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು. 

ಸೆಪ್ಟೆಂಬರ್ 12 ರಿಂದ 20ರ ವರೆಗೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸಾಧಾರಣ ಮಳೆಯಾದರೆ, ಉತ್ತರ ಮತ್ತು ದಕ್ಷಿಣ ಒಳನಾಡಿನ ಭಾಗದಲ್ಲಿ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಸೌಲಭ್ಯಕ್ಕಾಗಿ ಅರ್ಜಿ ಅಹ್ವಾನ

ಸಿಎಂ ಭೇಟಿಗೆ ಅವಕಾಶ ನೀಡದ ಪ್ರಧಾನಿ ಮೋದಿ!

ಕೇಂದ್ರ ಸರ್ಕಾರದ ಬರ ಮಾರ್ಗಸೂಚಿಯ ವಿರುದ್ಧ ಸಭೆಯಲ್ಲಿ ಸಚಿವ ಕೃಷ್ಣ ಬೈರೇಗೌಡ ಅವರು ಅಸಮಾಧಾನ ಹೊರಹಾಕಿದರು. ಈ ಬಗ್ಗೆ ಮಾತನಾಡಿದ ಅವರು, “ಕೇಂದ್ರ ಮಾರ್ಗಸೂಚಿಗಳು ಬರ ಘೋಷಣೆಗೆ ಅನುಕೂಲಕರವಾಗಿಲ್ಲ. ಹೀಗಾಗಿ ಹಳೆಯ ಮಾರ್ಗಸೂಚಿಯನ್ನು ಅನುಸರಿಸುವಂತೆ ಕೇಂದ್ರ ಮನವಿ ಮಾಡಲಾಗಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಪತ್ರಕ್ಕೆ ಈವರೆಗೆ ಉತ್ತರ ಬಂದಿಲ್ಲ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಯಾವಕಾಶ ಕೋರಿದ್ದಾರೆ. ಆದರೆ, ಪ್ರಧಾನಿ ಭೇಟಿಗೂ ಅವಕಾಶ ನೀಡಿಲ್ಲ. ಪರಿಣಾಮ ಬರ ಘೋಷಣೆ ಕಗ್ಗಂಟಾಗಿದ್ದು, ರೈತರು ಸಂಕಷ್ಟ ಎದುರಿಸುವಂತಾಗಿದೆ” ಎಂದು ಅವರು ಅಸಮಾಧಾನ ಹೊರಹಾಕಿದರು.

ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಕೃಷಿ ಸಚಿವರಾದ ಚಲುವರಾಯಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್ ಖರ್ಗೆ, ಸಹಕಾರ ಸಚಿವರಾದ ಎನ್ ರಾಜಣ್ಣ, ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಮುಖ್ಯ ಕಾರ್ಯದರ್ಶಿಗಳಾದ ವಿ. ರಶ್ಮಿ ಮಹೇಶ್ ಸೇರಿದಂತೆ ಸಂಬಂಧಿತ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News