ಆ್ಯಂಬಿಡೆಂಟ್​ ವಂಚನೆ​ ಪ್ರಕರಣ: ಗಣಿ-ದಣಿ ಬೆಂಗಳೂರು ಮನೆ ಜಪ್ತಿ!

ಜನಾರ್ದನ ರೆಡ್ಡಿಗೆ ಸೇರಿದ ಬೆಂಗಳೂರಿನ ಪಾರಿಜಾತ ಮನೆ ಮುಟ್ಟುಗೋಲಿಗೆ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸಿದ ಸರ್ಕಾರ.

Last Updated : Feb 13, 2019, 09:24 AM IST
ಆ್ಯಂಬಿಡೆಂಟ್​ ವಂಚನೆ​ ಪ್ರಕರಣ: ಗಣಿ-ದಣಿ ಬೆಂಗಳೂರು ಮನೆ ಜಪ್ತಿ! title=
File Image

ಬೆಂಗಳೂರು: ಆ್ಯಂಬಿಡೆಂಟ್​ ವಂಚನೆ​ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಣಿ ದಣಿ ಗಾಲಿ ಜನಾರ್ಧನ ರೆಡ್ಡಿ ಸೇರಿದಂತೆ ಎಲ್ಲಾ ಆರೋಪಿಗಳ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಸಮ್ಮತಿಸಿದೆ.

ಆ್ಯಂಬಿಡೆಂಟ್ ಕಂಪನಿ ಮಾಲೀಕ ಸೈಯದ್ ಫರೀದ್ ತನ್ನ ಸಹಚರರ ಜತೆ ಸೇರಿ ಅಧಿಕ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಆರ್​ಬಿಐ ಮಾರ್ಗಸೂಚಿ ಉಲ್ಲಂಘಿಸಿ ಗ್ರಾಹಕರಿಂದ ಹಣ ಪಡೆದು ಸ್ವಂತ ಲಾಭಕ್ಕಾಗಿ ರಿಯಲ್ ಎಸ್ಟೇಟ್, ಬೇನಾಮಿ ಆಸ್ತಿಯಲ್ಲಿ ತೊಡಗಿಸಿದ್ದ. ಈ ಸಂಬಂಧ ಹೂಡಿಕೆದಾರರ ಹಿತರಕ್ಷಣೆ ಕಾಯ್ದೆ ಸೆಕ್ಷನ್ 5ರ ಅಡಿಯಲ್ಲಿ ವಂಚಕ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಜತೆಗೆ ವಂಚನೆ ಪ್ರಕರಣವನ್ನು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಪ್ರಮುಖ ಆರೋಪಿ ಫರೀದ್, ಜನಾರ್ದನ ರೆಡ್ಡಿ ಸೇರಿ ಆರೋಪಿಗಳಿಗೆ ಸೇರಿದ ಅಂದಾಜು 100 ಕೋಟಿ ರೂ. ಆಸ್ತಿಯನ್ನು ಪತ್ತೆಹಚ್ಚಿದ್ದರು. ಇದರಲ್ಲಿ ಜನಾರ್ದನ ರೆಡ್ಡಿಗೆ ಸೇರಿದ ಬೆಂಗಳೂರಿನ ಪಾರಿಜಾತ ಮನೆಯನ್ನು ಗುರುತಿಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಸರ್ಕಾರ ಜನಾರ್ದನ ರೆಡ್ಡಿಗೆ ಸೇರಿದ ಬೆಂಗಳೂರಿನ ಪಾರಿಜಾತ ಮನೆ ಮುಟ್ಟುಗೋಲಿಗೆ ಒಪ್ಪಿಗೆ ಸೂಚಿಸಿ ಅಧಿಸೂಚನೆ ಹೊರಡಿಸಿದೆ ಎಂದು ಸರ್ಕಾರದ ವಿಶೇಷಾಧಿಕಾರಿ ಬೆಂಗಳೂರು ಉತ್ತರ ವಿಭಾಗ ಎಸಿ ಎಲ್.ನಾಗರಾಜು ತಿಳಿಸಿದ್ದಾರೆ. 

ಕಂದಾಯ ಇಲಾಖೆ ಆದೇಶದಂತೆ ಜನಾರ್ದನ ರೆಡ್ಡಿಗೆ ಸೇರಿದ 'ಪಾರಿಜಾತ' ಮನೆಯನ್ನು ಜಪ್ತಿ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರಿನ ಚಾಲುಕ್ಯ ಸರ್ಕಲ್ ಬಳಿಯಿರುವ ರೆಡ್ಡಿಯವರ ಪಾರಿಜಾತ ಮನೆ, ಆಸ್ತಿ ಮುಟ್ಟುಗೋಲು ಹಾಕಿಕೊಂಡು ಕೋರ್ಟ್‌ ಗೆ ಒಪ್ಪಿಸಲು ಕಂದಾಯ ಇಲಾಖೆ ಆಧಿಕಾರಿಗಳು ತಯಾರಿ ನಡೆಸಿಕೊಂಡಿದ್ದಾರೆ.

ಸಾವಿರಾರು ಜನರಿಂದ ಹಣ ಸಂಗ್ರಹಿಸಿ ಸುಮಾರು 400 ಕೋಟಿ ರೂ. ವಂಚನೆ ಮಾಡಲಾಗಿದ್ದು, ಆರೋಪಿಗಳ ಆಸ್ತಿ ಜಪ್ತಿ ಮಾಡಿ ಗ್ರಾಹಕರಿಗೆ ಹಣ ಹಿಂದಿರುಗಿಸಲು ತಯಾರಿ ನಡೆದಿದೆ. ಸಾರ್ವಜನಿಕರ ಹಣವನ್ನು ಹಿಂದಿರುಗಿಸುವ ಸಂಬಂಧ ರಾಜ್ಯ ಸರ್ಕಾರ ಈ ಹಿಂದೆಯೇ ಉತ್ತರ ತಾಲೂಕು ಉಪವಿಭಾಗಧಿಕಾರಿಗಳು ನೋಡೆಲ್ ಅಧಿಕಾರಿಯಾಗಿ ನೇಮಿಸಿತ್ತು. 
 

Trending News