ಬೆಂಗಳೂರು: 'ಆಪರೇಷನ್ ಕಮಲ'ದ ಮೂಲಕ ದೋಸ್ತಿ ಸರ್ಕಾರಕ್ಕೆ ಶಾಕ್ ನೀಡಲು ಹೊರಟಿದ್ದ ಬಿಜೆಪಿಗೆ ನಿರಾಸೆಯಾಗಿದ್ದು, ನಿರೀಕ್ಷೆ ಮಟ್ಟದಲ್ಲಿ 'ಕೈ' ಪಾಳಯದ ಶಾಸಕರನ್ನು ಸೆಳೆಯುವಲ್ಲಿ ವಿಫಲಗೊಂಡಿದೆ. ರಾಜ್ಯದಲ್ಲಿ ಸರ್ಕಾರ ರಚಿಸುವ ಬಿಜೆಪಿಯ ಮಹಾಕ್ರಾಂತಿ ಎಂದೇ ಬಿಂಬಿಸಲಾಗಿದ್ದ ಆಪರೇಷನ್ ಕಮಲ ಕೈ ಕೊಟ್ಟಿದೆ ಎನ್ನಲಾಗಿದೆ.
ಏತನ್ಮಧ್ಯೆ, ಗುರುಗ್ರಾಮದ ರೆಸಾರ್ಟ್ನಲ್ಲಿ ತಮ್ಮ ಪಕ್ಷದ ಶಾಸಕರೊಂದಿಗೆ ಉಳಿದುಕೊಂಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, ಯಾವುದೇ 'ಆಪರೇಷನ್ ಕಮಲ' ನಡೆದಿಲ್ಲ, ಜೆಡಿಎಸ್ ನಾಯಕರಿಂದಲೇ ಬಿಜೆಪಿ ಶಾಸಕರಿಗೆ ಆಮಿಷವೊಡ್ಡಿದ್ದಾರೆ. ಕಾಂಗ್ರೆಸ್ನವರೇ ಅನೇಕ ಬಿಜೆಪಿ ಶಾಸಕರ ಜೊತೆ ಸಂಪರ್ಕದಲ್ಲಿರುವುದಾಗಿ ಒಪ್ಪಿಕೊಂಡಿದ್ದಾರೆ. ಸ್ವತಃ ಈ ರಾಜ್ಯದ ಸಿಎಂ ಕುಮಾರಸ್ವಾಮಿಯವರೇ ನಮ್ಮ ಪಕ್ಷದ ಶಾಸಕನಿಗೆ ಮಂತ್ರಿ ಮಾಡುತ್ತೇನೆ, ದುಡ್ಡು ಕೊಡುತ್ತೇವೆ ಅಂತ ಹೇಳಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
BS Yeddyurappa, BJP: We are not indulging in any poaching. It is CM Kumaraswamy who is indulging in horse-trading, not BJP, CM himself is offering money and ministerial posts. #Karnataka pic.twitter.com/gyYZ76LZpf
— ANI (@ANI) January 17, 2019
ಬಿಜೆಪಿ ಶಾಸಕರೆಲ್ಲಾ ಒಟ್ಟಾಗಿದ್ದು, ಮುಂದಿನ ಲೋಕಸಭೆ ಚುನಾವಣೆಯ ಬಗ್ಗೆ ಸಿದ್ಧತೆ ಮಾಡುತ್ತಿದ್ದೇವೆ. ಆ ಕಾರಣಕ್ಕೆ ನಮ್ಮೆಲ್ಲ ಶಾಸಕರನ್ನು ರೆಸಾರ್ಟ್ ಗೆ ಕರೆದುಕೊಂಡು ಹೋಗಲಾಗಿತ್ತು. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಬಿಎಸ್‌ವೈ ತಿಳಿಸಿದರು.
ಸಿದ್ದಗಂಗಾ ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿರುವ ಹಿನ್ನಲೆಯಲ್ಲಿ ವೆಂಟಿಲೇಟರ್ ಮೂಲಕ ಹಳೆಯ ಮಠದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚೇತರಿಸಿಕೊಳ್ಳುವ ಭರವಸೆಯಿದೆ, ಅವರ ದರ್ಶನ ಪಡೆಯಲು ತೆರಳುತ್ತಿದ್ದೇನೆ ಎಂದು ಬಿಎಸ್‌ವೈ ಹೇಳಿದರು.