ಬೆಂಗಳೂರು: ಮಾನ್ಯ ಸಿದ್ದರಾಮಯ್ಯನವರು ಹೈಕೋರ್ಟ್ ತೀರ್ಪು ಮತ್ತು ಇವತ್ತಿನ ವಿಶೇಷ ನ್ಯಾಯಾಲಯದ ಆದೇಶವನ್ನು ಒಪ್ಪಿಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸರಿಯಾದ ರೀತಿ ತನಿಖೆಗೆ ಸಹಕಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಒತ್ತಾಯವನ್ನು ಮುಂದಿಟ್ಟರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪನವರ ಮೇಲೆ ಆರೋಪಗಳು ಬಂದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಆಗ, ‘ಅಧಿಕಾರದಲ್ಲಿ ಇರುವ ಕಾರಣ ತನಿಖೆ ಮೇಲೆ ಪ್ರಭಾವ ಆಗ್ತದೆ; ಪ್ರಭಾವ ಬೀರುವ ಸಾಧ್ಯತೆಗಳಿವೆ. ಈ ಸಾಧ್ಯತೆಗಳಿರುವ ಕಾರಣ ನ್ಯಾಯಯುತ ಮತ್ತು ನಿಷ್ಪಕ್ಷಪಾತ (ಫೇರ್ ಆಂಡ್ ಇಂಪಾರ್ಶಿಯಲ್) ತನಿಖೆ ಅಸಾಧ್ಯ. ಅದಕ್ಕೋಸ್ಕರ ಮಿಸ್ಟರ್ ಯಡಿಯೂರಪ್ಪ ಅಧಿಕಾರದಲ್ಲಿ ಇರಬಾರದು. ಹಿ ಶುಡ್ ರಿಸೈನ್ ಇಮ್ಮೀಡಿಯೆಟ್ಲಿ’ ಎಂದಿದ್ದರು ಎಂದು ತಿಳಿಸಿದರು. ಸಿದ್ದರಾಮಯ್ಯನವರ ಈ ವಿಡಿಯೋ ತುಣುಕನ್ನು ಟಿ.ವಿ. ಮೂಲಕ ಪ್ರದರ್ಶನ ಮಾಡಲಾಯಿತು.
ಇದನ್ನೂ ಓದಿ:ಸೇವಾನ್ಯೂನ್ಯತೆ: ಪರಿಹಾರ ನೀಡಲು ಗ್ರಾಹಕರ ಆಯೋಗ ಆದೇಶ
ಬಿಜೆಪಿ, ಭ್ರಷ್ಟ ಕಾಂಗ್ರೆಸ್ ಮತ್ತು ಭ್ರಷ್ಟ ಮುಖ್ಯಮಂತ್ರಿ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತ ಬಂದಿದೆ. ಬೆಂಗಳೂರಿನಿಂದ ಮೈಸೂರಿಗೆ ‘ಮೈಸೂರು ಚಲೋ’ ಪಾದಯಾತ್ರೆ ನಡೆಸಿದ್ದೆವು. ಖಾಸಗಿ ದೂರಿನ ಆಧಾರದ ಮೇಲೆ ರಾಜ್ಯಪಾಲರು ಇವತ್ತು ತನಿಖೆಗೆ ಅನುಮತಿ ನೀಡಿ, ರಾಜ್ಯಪಾಲರ ಆದೇಶವನ್ನು ರಾಜ್ಯ ಹೈಕೋರ್ಟ್ ‘ರಾಜ್ಯಪಾಲರು ನೀಡಿದ ಆದೇಶ ಕ್ರಮಬದ್ಧವಾಗಿದೆ’ ಎಂದು ಹೇಳಿದೆ. ಇದೀಗ ವಿಶೇಷ ನ್ಯಾಯಾಲಯವು ಮುಡಾ ಹಗರಣದ ತನಿಖೆಗೆ ಸೂಚಿಸಿದೆ. ಗೌರವಾನ್ವಿತ ಸಿಎಂ ಸಿದ್ದರಾಮಯ್ಯನವರು ಹಿಂದೆ ವಿಪಕ್ಷ ನಾಯಕರಾಗಿದ್ದಾಗ ಹೇಳಿದ ಮಾತನ್ನು ನೆನಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ಸಾಧ್ಯವೇ? : ಮೈಸೂರಿನ ಲೋಕಾಯುಕ್ತ ಪೊಲೀಸರಿಂದ ತನಿಖೆ ಸಾಧ್ಯವೇ? ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿರುವ ಲೋಕಾಯುಕ್ತ ಪೊಲೀಸರು, ರಾಜ್ಯದಲ್ಲಿರುವ ಲೋಕಾಯುಕ್ತ ಪೊಲೀಸರಿಂದ ಯಾವುದೇ ರೀತಿ ನ್ಯಾಯಯುತ ತನಿಖೆ ನಡೆಸಲು ಅಸಾಧ್ಯ ಎಂದು ಬಿ.ವೈ.ವಿಜಯೇಂದ್ರ ಅವರು ಅಭಿಪ್ರಾಯಪಟ್ಟರು.
ಇವತ್ತು ಕೋರ್ಟ್ ಆದೇಶ ಮಾಡಿರಬಹುದು; ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವ ಸಲುವಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ನೀಡುವ ಮುನ್ನ ಈ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆ, ಸಿಬಿಐಗೆ ವಹಿಸಬೇಕು. ಆಗ ಸಿದ್ದರಾಮಯ್ಯನವರು ಗೌರವ ಹೆಚ್ಚಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: ತನಿಖೆಗೆ ಹೆದರಲ್ಲ; ತನಿಖೆಯನ್ನು ಎದುರಿಸಲು ಸಿದ್ಧ, ಕಾನೂನಾತ್ಮಕ ಹೋರಾಟಕ್ಕೆ ಸಜ್ಜು: ಸಿಎಂ ಸಿದ್ದರಾಮಯ್ಯ
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಮತ್ತು ದೂರುದಾರ ಸ್ನೇಹಮಯಿ ಕೃಷ್ಣ ಅವರ ಅರ್ಜಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಎಂಪಿ, ಎಂಎಲ್ಎಗಳ ಸ್ಪೆಷಲ್ ಕೋರ್ಟ್) ಮುಂದೆ ಇತ್ತು. ಕಳೆದ ತಿಂಗಳು ನ್ಯಾಯಾಲಯದಲ್ಲಿ ಸಮಗ್ರವಾಗಿ ವಾದ ಮಂಡನೆಯೂ ಆಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾನ್ಯ ರಾಜ್ಯಪಾಲರ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೆಳನ್ಯಾಯಾಲಯಕ್ಕೆ ತಡೆಯೂ ಇತ್ತು. ನಿನ್ನೆ ಹೈಕೋರ್ಟ್ ತೀರ್ಪನ್ನು ಕೊಟ್ಟು ರಾಜ್ಯಪಾಲರ ನಿರ್ಣಯ ಸರಿಯಾಗಿದೆ; ಕ್ರಮಬದ್ಧವಾಗಿದೆ. ಮೈಸೂರಿನ ಮೂಡ ಹಗರಣದಲ್ಲಿ ರಾಜ್ಯಪಾಲರ ಆದೇಶ ಕ್ರಮಬದ್ಧವಿದೆ ಎಂದು ಅದು ತಿಳಿಸಿತ್ತು ಎಂದು ವಿವರಿಸಿದರು.
ವಿಶೇಷ ಕೋರ್ಟಿಗೆ ಇದ್ದ ತಡೆಯಾಜ್ಞೆಯನ್ನೂ ಹೈಕೋರ್ಟ್ ತೆರವುಗೊಳಿಸಿತ್ತು. ಇವತ್ತು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೈಸೂರಿನ ಮೂಡ ಹಗರಣದಲ್ಲಿ ಮಹತ್ವದ ಆದೇಶವನ್ನು ಪ್ರಕಟಿಸಿದೆ. ಆ ಆದೇಶದನ್ವಯ ಮೈಸೂರಿನ ಮೂಡ ಹಗರಣದಲ್ಲಿ ಸಿಎಂ ಕುಟುಂಬಕ್ಕೆ ಸಿಕ್ಕಿದ 56 ಕೋಟಿ ಮೌಲ್ಯದ 14 ನಿವೇಶನಗಳ ವಿಷಯದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಸಿದ್ದರಾಮಯ್ಯನವರ ಬಾಮೈದ ದೇವರಾಜ್ರಿಂದ ಖರೀದಿ ಮಾಡಿದ್ದ 3 ಎಕರೆ ಜಮೀನು, ದೇವರಾಜ್ ಹೆಸರಿನಲ್ಲಿ ಡಿನೋಟಿಫಿಕೇಶನ್ ಕೂಡ ಆಗಿತ್ತು. ಇವೆಲ್ಲವೂ ಕ್ರಮಬದ್ಧವಾಗಿ ಇರಲಿಲ್ಲ ಎಂಬ ಅಂಶವನ್ನು ಕೂಡ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇವತ್ತಿನ ತೀರ್ಪಿನಲ್ಲಿ ಗಮನಿಸಿದೆ. ಈ ಅಕ್ರಮದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಮುಡಾ ಮೈಸೂರಿನಲ್ಲಿ ಇರುವ ಕಾರಣ ಮೈಸೂರಿನ ಲೋಕಾಯುಕ್ತ ಪೊಲೀಸರು ಮುಡಾ ಹಗರಣದ ಕುರಿತು 3 ತಿಂಗಳಿನಲ್ಲಿ ತನಿಖೆ ನಡೆಸಲು ಸೂಚಿಸಿದೆ ಎಂದರು.
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ
ಸಾವಿರಾರು ಕೋಟಿಯ ನಿವೇಶನ ರಿಯಲ್ ಎಸ್ಟೇಟ್ ಪಾಲು.. ಮುಡಾ ಹಗರಣದ ಕುರಿತು ಬಿಜೆಪಿ ನಿಲುವು ಸ್ಪಷ್ಟವಿದೆ. ಈ ಹಗರಣ ಕೇವಲ 14 ನಿವೇಶನಗಳಿಗೆ ಸೀಮಿತವಲ್ಲ. ಒಂದೆಡೆ 14 ನಿವೇಶನಗಳಿದ್ದರೆ, ಇನ್ನೊಂದೆಡೆ 4ರಿಂದ 5 ಸಾವಿರ ಕೋಟಿ ಬೆಲೆಬಾಳುವ ನಿವೇಶನಗಳು ರಿಯಲ್ ಎಸ್ಟೇಟ್, ದಲ್ಲಾಳಿಗಳ ಪಾಲಾಗಿದೆ ಎಂದು ಬಿ.ವೈ.ವಿಜಯೇಂದ್ರ ಅವರು ಆರೋಪಿಸಿದರು.
ಇದೆಲ್ಲವುಗಳ ಸಮಗ್ರ ತನಿಖೆ ಆಗಬೇಕೆಂದರೆ ಅದು ಸಿಬಿಐನಿಂದ ಮಾತ್ರ ಸಾಧ್ಯ ಎಂದು ಅವರು ವಿಶ್ಲೇಷಿಸಿದರು.
ಸ್ನೇಹಮಯಿ ಕೃಷ್ಣ ಅವರು ಈ ಆದೇಶದ ಪ್ರತಿಯನ್ನು ನೀಡಿದ ತಕ್ಷಣ ಲೋಕಾಯುಕ್ತ ಪೊಲೀಸರು ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಬೇಕಾಗಿದೆ. ಅಲ್ಲದೆ 3 ತಿಂಗಳಿನಲ್ಲಿ ವರದಿ ಕೊಡಲು ತಿಳಿಸಿದೆ ಎಂದು ವಿವರಿಸಿದರು. ವಿಶೇಷ ನ್ಯಾಯಾಲಯದ ತೀರ್ಪು ನನ್ನ ಗಮನಕ್ಕೆ ಬಂದಿದೆ ಎಂದು ಮುಖ್ಯಮಂತ್ರಿಗಳೂ ಹೇಳಿದ್ದಾರೆ. ನಾನು ಯಾವುದೇ ತನಿಖೆಗೆ ಹೆದರುವುದಿಲ್ಲ; ತನಿಖೆ ಎದುರಿಸಲು ಸಿದ್ಧನಿದ್ದೇನೆ. ರಾಜೀನಾಮೆ ಕೊಡುವುದಿಲ್ಲ ಎಂದಿದ್ದಾರೆ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.