ಮತ್ತೆ ಜಾನಪದ ಜಾತ್ರೆ: ಅಧಿಕಾರಿಗಳಿಗೆ ಸಿಎಂ ಸೂಚನೆ

ಕರ್ನಾಟಕ ಜಾನಪದ ಕಲೆಯ ಸಿರಿ ಅಪೂರ್ವವಾದದ್ದು. ಈ ಜಾನಪದ ಜಾತ್ರೆಯನ್ನು ವೀಕ್ಷಿಸಿದಾಗ ರೋಮಾಂಚನವಾಯಿತು.

Updated: Oct 11, 2018 , 08:34 AM IST
ಮತ್ತೆ ಜಾನಪದ ಜಾತ್ರೆ: ಅಧಿಕಾರಿಗಳಿಗೆ ಸಿಎಂ ಸೂಚನೆ

ಮೈಸೂರು: ನಾಡಿನ ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡಿ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಜಾನಪದ ಜಾತ್ರೆಯನ್ನು ಪುನರಾರಂಭಿಸುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಬುಧವಾರ ಸಂಜೆ ಮೈಸೂರು ಅರಮನೆ ಆವರಣದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಜಾನಪದ ಜಾತ್ರೆ ವೀಕ್ಷಿಸಿದ ನಂತರ ಕಲಾವಿದರನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಮತ್ತೆ ಜಾನಪದ ಜಾತ್ರೆ ಪುನರಾರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕರ್ನಾಟಕ ಜಾನಪದ ಕಲೆಯ ಸಿರಿ ಅಪೂರ್ವವಾದದ್ದು. ಈ ಜಾನಪದ ಜಾತ್ರೆಯನ್ನು ವೀಕ್ಷಿಸಿದಾಗ ರೋಮಾಂಚನವಾಯಿತು. ಜಾನಪದ ಕಲಾವಿದರು ತಮ್ಮ ವರ್ಣರಂಜಿತ ಕಲಾ ಪ್ರದರ್ಶನದಿಂದ ನಮ್ಮನ್ನು ರಂಜಿಸುತ್ತಾರೆ. ಆದರೆ ವರ್ಣರಂಜಿತ ವೇಷ ಭೂಷಣಗಳ ಹಿಂದೆ ಇರುವ ಕಲಾವಿದರ ಜೀವನ ಹೇಗಿದೆ ಎಂದು ತಿಳಿದಿಲ್ಲ. ನಿಮ್ಮ ಕಲಾಪ್ರದರ್ಶನ ನೋಡಿ ಮನದುಂಬಿ ಬಂತು ಎಂದು ಗದ್ಗದಿತರಾಗಿ ನುಡಿದರು. ಅಳಿವಿನಂಚಿನಲ್ಲಿರುವ ಜಾನಪದ ಕಲೆಗಳು ಹಾಗೂ ಕಲಾವಿದರ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳುವುದು ಎಂದು ಸಿಎಂ ಭರವಸೆ ನೀಡಿದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಅಲ್ಲಿನ ಕಲೆ, ಸಂಸ್ಕೃತಿಗಳ ಪ್ರದರ್ಶನಗಳೂ ಪ್ರವಾಸೋದ್ಯಮದ ಒಂದು ಭಾಗವಾಗಿರುತ್ತವೆ. ಅದೇ ರೀತಿ ಕರ್ನಾಟಕದ ಜಾನಪದ ಕಲೆ, ಸಂಸ್ಕೃತಿಗಳನ್ನು ನಮ್ಮ ಪ್ರವಾಸೋದ್ಯಮಕ್ಕೆ ಪೂರಕವಾಗಿ ಬೆಳೆಸಲು, ಕಲಾವಿದರನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ ಎಂದ ಅವರು,  ಈ ನಿಟ್ಟಿನಲ್ಲಿ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದಕ್ಕೆ ಅಗತ್ಯ ಅನುದಾನವನ್ನು ಒದಗಿಸುವುದಾಗಿ ಅವರು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ಡಾ. ಜಯಮಾಲಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.