ರಾಯಚೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ರೈತರ ನೈತಿಕತೆ ಪ್ರಶ್ನಿಸುವ ಅಧಿಕಾರ ಕೊಟ್ಟವರ್ಯಾರು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಸಮಿತಿ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದ್ದಾರೆ.
ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಲೆ ಸಾಲ ಮಣ್ಣ ಮಾಡುವಂತೆ ಒತ್ತಾಯಿಸುವ ರೈತರಿಗೆ ನೈತಿಕತೆಯಿದೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸುತ್ತಾರೆ. ಇದು ನಿಜಕ್ಕೂ ಖಂಡನೀಯ. ಅಧಿಕಾರಕ್ಕೆ ಬರುವ ಮೊದಲು ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿ, ಇದೀಗ ಸುಳ್ಳು ಹೇಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯಿಲ್ಲ ಎಂಬುದನ್ನು ಅವರೂ ಅರ್ಥ ಮಾಡಿಕೊಳ್ಳಲಿ ಎಂದು ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು, ಬಜೆಟ್‌ನಲ್ಲಿ ಮಾಡಿದ ಎರಡು ಲಕ್ಷ ರೂ. ಸಾಲಮನ್ನಾದ ಆದೇಶವೇ ಬ್ಯಾಂಕುಗಳಿಗೆ ಇನ್ನೂ ತಲುಪಿಲ್ಲ. ರೈತರ ಬಗ್ಗೆ ಮತ್ತೊಮ್ಮೆ ಹಗುರವಾಗಿ ಮಾತನಾಡಿದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಮಾಲಿ ಪಾಟೀಲ್, ನುಡಿದಂತೆ ನಡೆಯದೆ, ಭರವಸೆಗಳನ್ನು ಅನುಷ್ಠಾನಕ್ಕೆ ತರಲಾಗದೆ ಕಣ್ಣೀರು ಹಾಕುವುದು ನಾಚಿಕೆ ಗೇಡಿನ ವಿಚಾರ ಎಂದು ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇತ್ತೀಚೆಗೆ ಚನ್ನಪಟ್ಟಣದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಕೊಪ್ಪಳದಲ್ಲಿ ರೈತರು ಸಂಪೂರ್ಣ ಸಾಲ ಮನ್ನಾ ಮಾಡಲು ಆಗ್ರಹಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸುತ್ತಾ, "ಹಣ, ಜಾತಿಯ ಆಮಿಷಕ್ಕೆ ಒಳಗಾಗಿ ಚುನಾವಣೆಯಲ್ಲಿ ಮತ ಹಾಕಿದ್ದೀರಿ. ಮತ ಹಾಕುವಾಗ ನನ್ನ ನೆನಪು ಬರಲಿಲ್ಲ, ಈಗ ಸಾಲ ಮನ್ನಾ ಮಾಡಲಿಲ್ಲ ಎಂದು ಪ್ರತಿಭಟಿಸುವ ನಿಮಗೆ ನಿಜಕ್ಕೂ ನೈತಿಕತೆ ಇದೆಯೇ" ಎಂದು ಪ್ರಶ್ನಿಸಿದ್ದರು. ಇದರಿಂದ ರೊಚ್ಚಿಗೆದ್ದಿರುವ ರೈತ ಸಂಘಟನೆಗಳು ಹೋರಾಟ ಮಾಡುವುದಾಗಿ ಸಿಎಂಗೆ ಎಚ್ಚರಿಕೆ ನೀಡಿವೆ.