ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ಸ್ವಂತ ಮನೆ ಇಲ್ಲದ ಬಡವರಿಗೆ ವಸತಿ ಭಾಗ್ಯ ಕಲ್ಪಿಸುವ ಉದ್ದೇಶದಿಂದ ಒಂದು ಲಕ್ಷ ವಸತಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿಯೇ ಘೋಷಣೆ ಮಾಡಿದ್ದರು.
ಈ ಯೋಜನೆಗೆ ಸೆಪ್ಟೆಂಬರ್ 29ರಂದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕಳೆದ 10ರಂದು ಅಧಿಕೃತ ಆದೇಶವೂ ಹೊರ ಬಿದ್ದಿದೆ. ಯೋಜನೆಯನ್ನು ತ್ವರಿತವಾಗಿ ಜಾರಿಗೆ ತರಲು ರಾಜೀವ್ಗಾಂಧಿ ವಸತಿ ನಿಗಮ ಕಾರ್ಯೋನ್ಮುಖವಾಗಿದೆ.
ಸ್ವಂತ ಸೂರು ಇಲ್ಲದೆ ಬೆಂಗಳೂರು ನಗರದಲ್ಲಿ ಹಲವಾರು ವರ್ಷಗಳಿಂದ ವಾಸಿಸುತ್ತಿರುವ ಬಡ ಕುಟುಂಬಗಳಿಗಾಗಿ ಶೀಘ್ರವೇ ಮುಖ್ಯಮಂತ್ರಿಯವರ ಒಂದು ಲಕ್ಷ ವಸತಿ ಯೋಜನೆ ಜಾರಿಗೆ ಬರಲಿದೆ. ಯೋಜನೆಗೆ ಚಾಲನೆ ನೀಡುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಇಂದು ವಸತಿ, ಕಾರ್ಮಿಕ ಸಚಿವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಈ ವರೆಗೆ ಆಗಿರುವ ಪ್ರಗತಿ ಪರಿಶೀಲಿಸಿದರು.
ಇದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ಜತೆಗೆ ಸ್ವಂತ ಮನೆ ಇಲ್ಲದ ಮಹಾನಗರದ ಬಡವರಿಗೆ ವರದಾನವಾಗಲಿದೆ. ಕೂಡಲೇ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, 24 ತಿಂಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಬಂಧ ಬ್ಯಾಂಕ್ಗಳ ಜೊತೆಗೂ ಮಾತುಕತೆ ನಡೆದಿದೆ. ಸಾಲ ಸೌಲಭ್ಯ ಒದಗಿಸಲು ಬ್ಯಾಂಕ್ ಅಧಿಕಾರಿಗಳು ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿಯವರು ವಿವರಿಸಿದರು. ವಸತಿ ಸಚಿವ ಎಂ. ಕೃಷ್ಣಪ್ಪ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಯಾ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಮತ್ತಿತರರು ಸಭೆಯಲ್ಲಿದ್ದರು.