ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಏನಂದ್ರು?

ಧನುರ್ಮಾಸ ಆರಂಭವಾಗುವ ಮೊದಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು.

Last Updated : Dec 12, 2019, 10:48 AM IST
ಸಂಪುಟ ವಿಸ್ತರಣೆ ಬಗ್ಗೆ ಸಿಎಂ ಯಡಿಯೂರಪ್ಪ ಏನಂದ್ರು? title=

ಬೆಂಗಳೂರು: ಡಿಸೆಂಬರ್ 16ರಂದು ಸಂಜೆ 4:30ರಿಂದ ಧನುರ್ಮಾಸ ಆರಂಭವಾಗಲಿದ್ದು, ಬಳಿಕ ಒಂದು ತಿಂಗಳು ಯಾವುದೇ ಒಳ್ಳೆ ಕೆಲಸ ಮಾಡಲಾಗುವುದಿಲ್ಲ. ಹೀಗಾಗಿ ಅಷ್ಟರೊಳಗೆ ಸಂಪುಟ ವಿಸ್ತರಣೆ ಮಾಡುವಂತೆ ನೂತನ ಶಾಸಕರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರಿಗೆ ಒತ್ತಡ ಹೇರಿದ್ದು, ಧನುರ್ಮಾಸ ಆರಂಭವಾಗುವ ಮೊದಲೇ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಈ ಬಗ್ಗೆ ಮಾತನಾಡಿರುವ ಸಿಎಂ ಯಡಿಯೂರಪ್ಪ, ಹೈಕಮಾಂಡ್ ಜೊತೆಗೆ ಚರ್ಚಿಸಿದ ಬಳಿಕವೇ ಸಚಿವ ಸಂಪುಟ ವಿಸ್ತರಣೆ ಎಂದು ಹೇಳಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ ಅಮಿತ್ ಶಾ(Amit Shah) ಅವರು ಪ್ರಚಾರ ಕಾರ್ಯದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಸದ್ಯಕ್ಕೆ ಅವರನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಇನ್ನು ಮೂರ್ನಾಲ್ಕು ದಿನ ನನ್ನ ಹಾಗೂ ಅವರ ಭೇಟಿ ಸಾಧ್ಯವಾಗುತ್ತಿಲ್ಲ. 4-7 ದಿನಗಳ ಬಳಿಕವಷ್ಟೇ ತಾವು ದೆಹಲಿಗೆ ತೆರಳಲಿದ್ದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಕೂಲಂಕುಷವಾಗಿ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.

ಕಾಂಗ್ರೆಸ್-ಜೆಡಿಎಸ್ ಸರ್ಕಾರದ ವಿರುದ್ಧ ಬಂಡಾಯವೆದ್ದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿದ್ದ ಶಾಸಕರು ಉಪಚುನಾವಣೆಯನ್ನು ಎದುರಿಸಿದ್ದಾರೆ. ಗಮನಾರ್ಹವಾಗಿ, ಉಪಚುನಾವಣೆಯಲ್ಲಿ ಚುನಾಯಿತರಾಗಿರುವ ಶಾಸಕರಿಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಯಡಿಯೂರಪ್ಪ ಅವರೇ ತಿಳಿಸಿದ್ದರು.

ಸಂಪುಟದಲ್ಲಿ ಸದ್ಯ 16 ಸ್ಥಾನಗಳು ಖಾಲಿ ಇದ್ದು, ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿ ಸಂಪುಟಕ್ಕೆ ಸೇರ್ಪಡೆಯಾದರೆ  5 ಸ್ಥಾನಗಳು ಮಾತ್ರ  ಬಾಕಿ ಉಳಿಯಲಿವೆ. ಖಾಲಿ ಉಳಿಯಲಿರುವ ಸ್ಥಾನಗಳನ್ನು  ಮೂಲ ಬಿಜೆಪಿಗರಿಗೆ ನೀಡಲು ಬಿಎಸ್‍ವೈ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಏತನ್ಮಧ್ಯೆ, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಸೋಲುಂಡಿರುವ ಎಂಟಿಬಿ ನಾಗರಾಜ್, ನನ್ನ ಸೋಲಿಗೆ ಬಿಜೆಪಿ ಸಂಸದ ಬಚ್ಚೇಗೌಡ ಅವರೇ ಕಾರಣ. ಅವರ ಪಕ್ಷ ವಿರೋಧಿ ಚಟುವಟಿಕೆಯಿಂದಾಗಿ ತಾವು ಸೋಲು ಅನುಭವಿಸಬೇಕಾಯಿತು. ಅವರ ಮಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಇದರ ಹಿಂದೆ ಬಚ್ಚೇಗೌಡರ ಬೆಂಬಲವಿದೆ ಎಂದು ದೂರಿದ್ದಾರೆ. ಬಚ್ಚೇಗೌಡರು ಪಕ್ಷವಿರೋಧಿ ಚಟುವಟಿಕೆ ನಡೆಸದಿದ್ದರೆ ತಾವು ಈ ಉಪಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತಿದ್ದೆ ಎಂದಿರುವ ಎಂಟಿಬಿ ತಮಗೂ ಸಚಿವ ಸ್ಥಾನ ನೀಡುವಂತೆ ದುಂಬಾಲು ಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದಲ್ಲದೆ, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿರುವ ಎಚ್. ವಿಶ್ವನಾಥ್, ಬಿಜೆಪಿ ಸರಕಾರ ಬರಲು ಪ್ರಮುಖ ಕಾರಣಿಬೂತರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿ ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ದೊರಕಲಿದೆಯೇ? ಎಂಬುದು ಸದ್ಯ ಚರ್ಚೆಗೆ ಗ್ರಾಸವಾಗಿದೆ. ಇದೀಗ ಬಿಜೆಪಿ ಸರ್ಕಾರ ರಚನೆಗಾಗಿ ಪ್ರಮುಖ ಪಾತ್ರ ವಹಿಸಿದ್ದವರ ಮುಂದಿನ ಭವಿಷ್ಯ ಸಿಎಂ ಯಡಿಯೂರಪ್ಪ ಅವರಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಸೋತವರಿಗೂ ಕೂಡ ಸಂಪುಟದಲ್ಲಿ ಸ್ಥಾನ ನೀಡಲಾಗುವುದು ಎಂದು ಈ ಹಿಂದೆ ಹೇಳಿದ್ದ ಯಡಿಯೂರಪ್ಪ, ಉಪಚುನಾವಣೆ ಫಲಿತಾಂಶದ ಬಳಿಕ ಆ ಕುರಿತು ಯಾವುದೇ ಸ್ಪಷ್ಟನೆ ನೀಡಿಲ್ಲ. ಹೀಗಿರುವಾಗ ಸರ್ಕಾರ ಸೇಫ್ ಆಗಿರುವುದರಿಂದ ಸೋತವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಸಂಪುಟಕ್ಕೆ ಸೇರಿಸಿಕೊಳ್ಳಲಿದ್ದಾರೆಯೇ? ಅಥವಾ ಪಕ್ಷ ಸಂಘಟನೆಯ ಜವಾಬ್ದಾರಿ ನೀಡುವರೋ ಎಂಬುದು ಒಂದೆಡೆಯಾದರೆ, ಒಂದೊಮ್ಮೆ ಸಚಿವ ಸ್ಥಾನ ಸಿಗದಿದ್ದರೆ ಈ ನಾಯಕರ ಮುಂದಿನ ನಡೆ ಏನೆಂಬುದು ಕುತೂಹಲಕಾರಿಯಾಗಿದೆ.
 

Trending News