ಧಾರವಾಡ ನ.26: ಸತ್ತೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಕಳೆದ ಎರಡು ದಿನಗಳಿಂದ 182 ಜನರಲ್ಲಿ ಕೋವಿಡ್ ಸೋಂಕು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಎಸ್‍ಡಿಎಂ ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಸೇವೆಗಳು ಹಾಗೂ ಹೊಸ ರೋಗಿಗಳ ಪ್ರವೇಶವನ್ನು ರವಿವಾರದವರೆಗೆ ಸ್ಥಗಿತಗೊಳಿಸಲಾಗಿದೆ. ತುರ್ತು ಚಿಕಿತ್ಸಾ ಸೇವೆಗಳು ಮಾತ್ರ ಮುಂದುವರೆಯಲಿವೆ. ಆಸ್ಪತ್ರೆ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದ್ದಾರೆ.
ಇದನ್ನೂ ಓದಿ: ಹಂಪಿ ಕನ್ನಡ ವಿವಿ ಮೇಲಿನ ಹಗರಣಗಳ ಆರೋಪಗಳು ಅದರ ಘನತೆಯನ್ನು ಗುಡಿಸಿ ಹಾಕುತ್ತಿವೆ-ಸಿದ್ಧರಾಮಯ್ಯ
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇಂದು ಸಂಜೆ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಎಸ್‍ಡಿಎಂ ಆಸ್ಪತ್ರೆಗೆ ಧಾರವಾಡ ಹಾಗೂ ಸುತ್ತಮುತ್ತಲಿನ 6 ರಿಂದ 8 ಜಿಲ್ಲೆಗಳ ರೋಗಿಗಳು ಪ್ರತಿದಿನ ಸಾಮಾನ್ಯ ಚಿಕಿತ್ಸೆಗೆ ಬರುತ್ತಾರೆ. ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ಕಂಡುಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನ.28 ರವಿವಾರದವರೆಗೆ ಆಸ್ಪತ್ರೆಯ ಹೊರರೋಗಿಗಳ ವಿಭಾಗದ ಸೇವೆಗಳು ಹಾಗೂ ಹೊಸ ರೋಗಿಗಳ ಪ್ರವೇಶವನ್ನು ರವಿವಾರದವರೆಗೆ ಸ್ಥಗಿತಗೊಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಂಪಿಸಿದ ಭೂಮಿ..! ಆತಂಕದಲ್ಲಿ ಜನರು
ತುರ್ತು ಚಿಕಿತ್ಸಾ ಸೇವೆಗಳು ಮಾತ್ರ ಮುಂದುವರೆಯಲಿವೆ. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಾಲೇಜಿನ ಸುತ್ತಲಿನ 500 ಮೀ. ವ್ಯಾಪ್ತಿಯ ಶಾಲೆ ಕಾಲೇಜುಗಳಿಗೆ ರವಿವಾರದವರೆಗೆ ರಜೆ ಘೋಷಿಸಲಾಗಿದೆ ಎಂದರು.
ಸೋಂಕಿನ ಅನುವಂಶ ಪತ್ತೆಗೆ ಜಿನೋಮ್ ಸಿಕ್ವೆನ್ಸ್ : ಸೋಂಕಿನ ಅನುವಂಶದ ಪತ್ತೆಗಾಗಿ ಮೂಗು ಮತ್ತು ಗಂಟಲುದ್ರವದ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆದ್ಯತೆ ಮೇಲೆ ಪರೀಕ್ಷಿಸಿ ವರದಿ ನೀಡಲು ಕೋರಲಾಗಿದೆ. ಈಗ ಸೋಂಕು ದೃಢಪಟ್ಟಿರುವ 182 ಜನರಲ್ಲಿ 25 ಜನ ಕಾಲೇಜಿನ ಸಿಬ್ಬಂದಿ ಮತ್ತು ವೈದ್ಯರಿದ್ದಾರೆ. ಸೋಂಕಿತರಲ್ಲಿ 6 ಜನರಿಗೆ ಮಾತ್ರ ರೋಗದ ಲಕ್ಷಣಗಳಿವೆ ಉಳಿದವರಲ್ಲಿ ಯಾವುದೇ ಲಕ್ಷಣಗಳು ಇಲ್ಲ ಎಲ್ಲರಿಗೂ ಸೂಕ್ತ ಚಿಕಿತ್ಸೆ ದೊರೆಯುತ್ತಿದೆ. ಆಸ್ಪತ್ರೆ ಹಾಗೂ ಕಾಲೇಜಿನಲ್ಲಿ ಸೇವೆ ಸಲ್ಲಿಸುವ ಎಲ್ಲ 3500 ಜನರ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಜೊತೆಗೆ ಇಂದು 200ಕ್ಕೂ ಹೆಚ್ಚು ರೋಗಿಗಳ ಸ್ವ್ಯಾಬ್ ಸಂಗ್ರಹಿಸಲಾಗಿದೆ. ಸ್ವ್ಯಾಬ್ ಸಂಗ್ರಹಕ್ಕೆ ಹುಬ್ಬಳ್ಳಿಯ 5, ಧಾರವಾಡದ 6 ಸೇರಿ ಒಟ್ಟು 11 ತಂಡಗಳನ್ನು ಜಿಲ್ಲಾಡಳಿತ ನಿಯೋಜಿಸಿದೆ. ಎಸ್‍ಡಿಎಂ ಆಡಳಿತ ಮಂಡಳಿಯೂ ಸಹಕರಿಸುತ್ತಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದನ್ನೂ ಓದಿ: ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಸಲ್ಲಿಕೆ: ದೃಢೀಕೃತ ಪ್ರಮಾಣ ಪತ್ರಗಳು ಕಡ್ಡಾಯ
ಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ : ಎಸ್‍ಡಿಎಂ ಆಸ್ಪತ್ರೆಯ ಓಪಿಡಿ ವಿಭಾಗದ ಸೇವೆಗಳನ್ನು ಸ್ಥಗಿತಗೊಳಿಸಿರುವುದರಿಂದ ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾ ಆಸ್ಪತ್ರೆಗಳಲ್ಲಿ ಪರ್ಯಾಯ ಏರ್ಪಾಡುಗಳನ್ನು ಮಾಡಿಕೊಳ್ಳಲಾಗಿದೆ. ಭಾರತೀಯ ವೈದ್ಯಕೀಯ ಸಂಘದ ಹುಬ್ಬಳ್ಳಿ ಮತ್ತು ಧಾರವಾಡ ಘಟಕಗಳಿಗೂ ತಿಳಿಸಲಾಗಿದೆ. ಅವಳಿ ನಗರದಲ್ಲಿ ಉತ್ತಮ ಆರೋಗ್ಯ ಸೌಕರ್ಯಗಳು ಇರುವುದರಿಂದ ಯಾವುದೇ ಸಮಸ್ಯೆಗಳು ಉದ್ಭವಿಸುವುದಿಲ್ಲ. ಎಸ್‍ಡಿಎಂ ಆಸ್ಪತ್ರೆಗೆ ಶಿಫಾರಸ್ಸು ಮಾಡುವ ಸುತ್ತಲಿನ ಜಿಲ್ಲೆಗಳಿಗೂ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.
ಸರ್ಕಾರಕ್ಕೆ ನಿರಂತರ ಮಾಹಿತಿ : ಎಸ್‍ಡಿಎಂ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆ ಮುಖ್ಯಮಂತ್ರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರಿಗೆ ನಿರಂತರವಾಗಿ ಮಾಹಿತಿ ನೀಡಿ, ಮಾರ್ಗದರ್ಶನ ಪಡೆಯಲಾಗುತ್ತಿದೆ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.