ಡಿಕೆಶಿಗಿಲ್ಲ ಜಾಮೀನು, ಸೆ.17ರ ವರೆಗೆ ಇಡಿ ವಶಕ್ಕೆ

ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ನುಣುಚಿಕೊಳ್ಳುವ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದು, ಅವರ ಕಸ್ಟಡಿಯನ್ನು ಐದು ದಿನಗಳವರೆಗೆ ವಿಸ್ತರಿಸಬೇಕೆಂದು ಕೋರಿದೆ.

Updated: Sep 13, 2019 , 06:33 PM IST
ಡಿಕೆಶಿಗಿಲ್ಲ ಜಾಮೀನು, ಸೆ.17ರ ವರೆಗೆ ಇಡಿ ವಶಕ್ಕೆ

ನವದೆಹಲಿ: ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ನುಣುಚಿಕೊಳ್ಳುವ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ್ದು, ಅವರ ಕಸ್ಟಡಿಯನ್ನು ಐದು ದಿನಗಳವರೆಗೆ ವಿಸ್ತರಿಸಬೇಕೆಂದು ಕೋರಿದೆ.

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಶಿವಕುಮಾರ್ ಅವರ ಒಂಬತ್ತು ದಿನಗಳ ಜಾರಿ ನಿರ್ದೇಶನಾಲಯದ ಕಸ್ಟಡಿ ಇಂದು ಕೊನೆಗೊಂಡ ಹಿನ್ನಲೆಯಲ್ಲಿ ಇಡಿ ಕಸ್ಟಡಿ ವಿಸ್ತರಣೆಗೆ ಮನವಿ ಮಾಡಿಕೊಂಡಿದೆ. ಡಿ.ಕೆ.ಶಿವಕುಮಾರ್ ವಿರುದ್ಧದ ತನಿಖೆಯ ಪ್ರಕಾರ ಅವರು 200 ಕೋಟಿ ಮತ್ತು ರೂ. 800 ಕೋಟಿ ಮೌಲ್ಯದ ಬೆನಾಮಿ' ಆಸ್ತಿಯನ್ನು ಹೊಂದಿದ್ದಾರೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಹೇಳಿದ್ದಾರೆ.

ಇದೇ ವೇಳೆ ನ್ಯಾಯಾಲಯದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್ ತಾವು ಕಾನೂನು ಪಾಲಿಸುವ ಪ್ರಜೆ ಮತ್ತು ಅವರ ಎಲ್ಲಾ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಲು ಸಿದ್ಧರಿದ್ದಾರೆ ಎಂದು ಹೇಳಿದರು. 'ನನ್ನ ಬಳಿ ಕೇವಲ ಐದು ಖಾತೆಗಳಿವೆ, ಆದರೆ ನನ್ನ ಬಳಿ 317 ಖಾತೆಗಳಿವೆ ಎಂದು ಜಾರಿ ನಿರ್ದೇಶನಾಲಯ ಹೇಳುತ್ತಿದೆ ಎಂದು ಅವರು ನ್ಯಾಯಾಧೀಶರಿಗೆ ತಿಳಿಸಿದರು.

ಡಿ.ಕೆ.ಶಿವಕುಮಾರ್ ಅವರ ಪರವಾಗಿ ವಾದಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ಈಗಾಗಲೇ ಡಿಕೆಶಿಯವರನ್ನು ದಿನಕ್ಕೆ 10 ಗಂಟೆಗಳಂತೆ ಇದುವರೆಗೆ 100 ಗಂಟೆಗಳ ಕಾಲ ಅವರನ್ನು ಪ್ರಶ್ನಿಸಲಾಗಿದೆ, ಆದ್ದರಿಂದ ಅವರಿಗೆ ಈಗ ಜಾಮೀನು ನೀಡಬೇಕು ಎಂದು ವಾದಿಸಿದರು. 

ಇದೇ ಸಂದರ್ಭದಲ್ಲಿ ಅವರು ಜೀವಾವಧಿ ಶಿಕ್ಷೆ ಅನುಭವಿಸಿದ್ದ ಸರವಣ್ ಭವನದ ಮಾಲೀಕ ಪಿ.ರಾಜಗೋಪಾಲ್ ಅವರ ಸಾವಿನ ಉದಾಹರಣೆಯನ್ನು ಉಲ್ಲೇಖಿಸಿದ ಸಿಂಗ್ವಿ ಶಿವಕುಮಾರ್ ಅವರು ಅಧಿಕ ರಕ್ತದೊತ್ತಡದಿಂದ ಬಳಲುತಿದ್ದಾರೆ ಆದ್ದರಿಂದ ಅವರು ಈಗ ಆಸ್ಪತ್ರೆಯಲ್ಲಿ ಇರಬೇಕೆಂದು ಕೇಳಿಕೊಂಡರು.

ಈಗ ಶಿವಕುಮಾರ್ ಅವರ ಜಾಮೀನು ಅರ್ಜಿಗೆ ಸೋಮವಾರದೊಳಗೆ ಉತ್ತರಿಸುವಂತೆ ನ್ಯಾಯಾಧೀಶರು ಜಾರಿ ನಿರ್ದೇಶನಾಲಯವನ್ನು ಕೋರಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಶಿವಕುಮಾರ್ ಅವರ 23 ವರ್ಷದ ಮಗಳನ್ನು ಸಹ ಜಾರಿ ನಿರ್ದೇಶನಾಲಯ ಗುರುವಾರ ಪ್ರಶ್ನಿಸಿದೆ. ಬೆಂಗಳೂರಿನಲ್ಲಿ ವಾಸಿಸುವ ಐಶ್ವರ್ಯಾ ಅವರನ್ನು ತನಿಖಾ ಸಂಸ್ಥೆ ದೆಹಲಿಗೆ ಕರೆಸಿತು.