ಇಂದೂ ಸಿಗಲಿಲ್ಲ ಜಾಮೀನು; ಅಕ್ಟೋಬರ್ 25ರವರೆಗೆ ಡಿಕೆಶಿ ನ್ಯಾಯಾಂಗ ಬಂಧನ ವಿಸ್ತರಣೆ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಮತ್ತೆ 10 ದಿನಗಳ ಕಾಲ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಇಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

Last Updated : Oct 15, 2019, 03:28 PM IST
ಇಂದೂ ಸಿಗಲಿಲ್ಲ ಜಾಮೀನು; ಅಕ್ಟೋಬರ್ 25ರವರೆಗೆ ಡಿಕೆಶಿ ನ್ಯಾಯಾಂಗ ಬಂಧನ ವಿಸ್ತರಣೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ.‌ ಶಿವಕುಮಾರ್ ಅವರಿಗೆ ಅಕ್ಟೋಬರ್ 25ರವರೆಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಇಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಇಂದು ಡಿ.ಕೆ. ಶಿವಕುಮಾರ್ ಅವರ ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡಿದ್ದ ಹಿನ್ನೆಲೆಯಲ್ಲಿ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಆದರೆ ಮತ್ತೆ 10 ದಿನಗಳ ಕಾಲ ಡಿಕೆಶಿ ಅವರ ನ್ಯಾಯಾಂಗ ಬಂಧನ ವಿಸ್ತರಣೆಯಾಗಿರುವುದು ಡಿಕೆಶಿ ಅವರಿಗೆ ಸತತ ಮೂರನೇ ಬಾರಿಯೂ ಬಾರಿ ನಿರಾಸೆ ಉಂಟುಮಾಡಿದೆ. ಬಂಧನ ಅವಧಿಗೆ ಡಿ.ಕೆ. ಶಿವಕುಮಾರ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರಾದರೂ ನ್ಯಾಯಾಧೀಶರು ಬಂಧನ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದರು.

ಡಿಕೆಶಿ ಬೆಂಬಲಿಗರಿಂದ ತೊಂದರೆ ಆಗುತ್ತಿದೆ:
ಡಿ.ಕೆ. ಶಿವಕುಮಾರ್ ಅವರನ್ನು ನೋಡಲು ಬಹಳ ಜನ ಬರುತ್ತಿದ್ದಾರೆ. ಇದರಿಂದಾಗಿ ತೊಂದರೆ ಆಗುತ್ತಿದೆ ಎಂದು ಡಿಕೆಶಿ ಭೇಟಿಗಾಗಿ ತುಂಬಾ ಜನ ಬರುತ್ತಿರುವ ಬಗ್ಗೆ  ಇಡಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಕುಟುಂಬಸ್ಥರಿಗೆ ಮಾತ್ರ ಭೇಟಿಗೆ ಅವಕಾಶ ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು.

ಖುರ್ಚಿಗಾಗಿ ನ್ಯಾಯಾಲಯದಲ್ಲಿ ಡಿ.ಕೆ. ಶಿವಕುಮಾರ್ ಮನವಿ:
11 ಗಂಟೆಗಳ ಕಾಲ ಹೊರಗಿರಬೇಕು. ನನಗೆ ಕುಳಿತುಕೊಳ್ಳಲೂ ಅವಕಾಶ ಮಾಡಿಕೊಡುತ್ತಿಲ್ಲ. ನನಗೆ ಬೆನ್ನು ನೋವಿನ ಸಮಸ್ಯೆ ಇದೆ. ಬೆನ್ನು ನೋವಿನ ಕಾರಣದಿಂದ ಕೂರಲು ಚೇರ್ ಕೇಳಿದರೂ ಜೈಲು ಅಧಿಕಾರಿಗಳು ಕೊಡುತ್ತಿಲ್ಲ. ನಾನೂ ಕೂಡ ಜೈಲು ಮಂತ್ರಿ ಆಗಿದ್ದವನು. ನಾನು ಬೇರೆ ಯಾವ ವಿಶೇಷ ಸೌಲಭ್ಯವನ್ನೂ ಕೇಳುತ್ತಿಲ್ಲ. ಕೂರಲು ಚೇರ್ ಕೇಳುತ್ತಿದ್ದೇನೆ ಎಂದು ಡಿಕೆಶಿ ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿಗಳು ಶಿವಕುಮಾರ್ ಅವರಿಗೆ ಚೇರ್ ಕೊಡಲು ಸೂಚಿಸಿದರು.

ಇಡಿ ವಿಶೇಷ ನ್ಯಾಯಾಲಯದಲ್ಲಿಂದು ಡಿ.ಕೆ. ಶಿವಕುಮಾರ್ ಅವರನ್ನು ನೋಡಲು ಬಂದಿದ್ದ ಕಾಂಗ್ರೆಸ್ ಶಾಸಕರಾದ ಪ್ರಿಯಾಂಕ್ ಖರ್ಗೆ, ವೀರಣ್ಣ ಮತ್ತಿ ಕಟ್ಟಿ, ಲಕ್ಷ್ಮೀ ಹೆಬ್ಬಾಳ್ಕರ್, ಕಂಪ್ಲಿ ಗಣೇಶ್ ಅವರನ್ನು ಭೇಟಿಯಾದರು. ಇದೇ ಸಂದರ್ಭದಲ್ಲಿ ಡಿಕೆಶಿ ದೇಗುಲ ಮಠದ ಸ್ವಾಮಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. 

ದೆಹಲಿ ಹೈಕೋರ್ಟ್​ನಲ್ಲಿ ಜಾಮೀನು ಸಿಗುವ ನಿರೀಕ್ಷೆ:
ಏತನ್ಮಧ್ಯೆ, ಇಂದು ಮಧ್ಯಾಹ್ನ 3:30ಕ್ಕೆ ದೆಹಲಿ ಹೈಕೋರ್ಟ್​ನಲ್ಲಿ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು, ಒಂದೊಮ್ಮೆ ದೆಹಲಿ ಹೈಕೋರ್ಟ್​ನಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ದೊರೆತರೆ ಟ್ರಬಲ್​​ ಶೂಟರ್​ ನಿರಾಳವಾಗಲಿದ್ದಾರೆ.
 

More Stories

Trending News