ವರುಣನ ಕೃಪೆಯಿಂದ ಕೋರ್ಟ್ ಆದೇಶ ಪಾಲನೆ, ರೈತರ ಹಿತ ರಕ್ಷಣೆ ಸಾಧ್ಯವಾಗಿದೆ: ಡಿಸಿಎಂ ಡಿ.ಕೆ ಶಿವಕುಮಾರ್

DCM DK Shivakumar: “ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ವರುಣ ದೇವನ ಕೃಪೆಯಿಂದ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೋರ್ಟ್ ಆದೇಶ ಪಾಲನೆ ಹಾಗೂ ರಾಜ್ಯದ ರೈತರ ಹಿತ ರಕ್ಷಣೆ ಸಾಧ್ಯವಾಗುತ್ತಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

Written by - Savita M B | Last Updated : Jul 20, 2024, 03:06 PM IST
  • ಇನ್ನೆರಡು ಮೂರು ದಿನಗಳಲ್ಲಿ ಕೆಆರ್ ಎಸ್ ಅಣೆಕಟ್ಟು
  • ನಿಗಮಗಳಲ್ಲಿ ಖದೀಮರು ಸೇರಿಕೊಂಡಿದ್ದಾರೆ
ವರುಣನ ಕೃಪೆಯಿಂದ ಕೋರ್ಟ್ ಆದೇಶ ಪಾಲನೆ, ರೈತರ ಹಿತ ರಕ್ಷಣೆ ಸಾಧ್ಯವಾಗಿದೆ: ಡಿಸಿಎಂ ಡಿ.ಕೆ ಶಿವಕುಮಾರ್ title=

ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣ ಆವರಣದಲ್ಲಿ ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಶನಿವಾರ ಪ್ರತಿಕ್ರಿಯಿಸಿದರು.

“ಇನ್ನೆರಡು ಮೂರು ದಿನಗಳಲ್ಲಿ ಕೆಆರ್ ಎಸ್ ಅಣೆಕಟ್ಟು 
ತುಂಬಲಿದ್ದು, ತಮಿಳುನಾಡಿನ ಪಾಲಿನ ನೀರನ್ನು ಹರಿಸಬಹುದಾದ ಸೂಚನೆ ವ್ಯಕ್ತವಾಗಿವೆ. ಇದರ ಜತೆಗೆ ನಮ್ಮ ರೈತರ ಹಿತಕಾಯಲು ಕೆರೆ ತುಂಬಿಸುವ ಕಾರ್ಯಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಭತ್ತ ನಾಟಿ ಮಾಡುವ ಮುನ್ನ ಸ್ವಲ್ಪ ತಾಳ್ಮೆ ವಹಿಸಬೇಕು. ನೀರು ಎಷ್ಟು ಪ್ರಮಾಣದಲ್ಲಿ ಬರಲಿದೆ ಎಂಬುದು ಇನ್ನು ತಿಳಿದಿಲ್ಲ. ಹೀಗಾಗಿ ಕೃಷಿ ಇಲಾಖೆಯವರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುವುದು.

ನಾವು ಮುಂಜಾಗೃತವಾಗಿ ರಂಗನತಿಟ್ಟು ಸೇರಿದಂತೆ ಇತರೆಡೆ ದೋಣಿ ವಿಹಾರ ಸ್ಥಗಿತಗೊಳಿಸಿದ್ದು, ಹೊಳೆಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದೇವೆ. ಕರಾವಳಿ ಭಾಗದಲ್ಲಿ ಕೇರಳ ಮೂಲದ ಚಾಲಕ ವಾಹನ ಸಮೇತ, ಗುಡ್ಡ ಕುಸಿತಕ್ಕೆ ಸಿಲುಕಿದ್ದಾನೆ. ಮಳೆ ಮುಂದುವರಿದಿರುವ ಕಾರಣ ತೆರವು ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಸಚಿವರು ಶಾಸಕರು, ನಾಯಕರು ಸ್ಥಳದಲ್ಲಿದ್ದು, ಅವರ ಕರ್ತವ್ಯ ನಿಭಾಯಿಸುತ್ತಿದ್ದಾರೆ” ಎಂದು ಮಾಹಿತಿ ನೀಡಿದರು.

ಕುಮಾರಸ್ವಾಮಿ ಭೇಟಿಗೆ ಆಕ್ಷೇಪವಿಲ್ಲ
ಮಳೆ ಹಾನಿಯಾಗಿರುವ ಅಂಕೋಲಾ ಸೇರಿದಂತೆ ಇತರ ಕಡೆಗಳಿಗೆ ಕುಮಾರಸ್ವಾಮಿ ಭೇಟಿ ಬಗ್ಗೆ “ಅವರು ಯಾವ ಫೀಲ್ಡಿಗೆ ಇಳಿದಿದ್ದಾರೆ? ಅವರು ಸಿಆರ್ ಪಿಎಫ್ ಪಡೆ ಕರೆಸಿ, ತೆರವು ಕಾರ್ಯಕ್ಕೆ ನೆರವಾಗಿದ್ದರೆ, ಫೀಲ್ಡಿಗೆ ಇಳಿದಿದ್ದಾರೆ ಎಂದು ಹೇಳಬಹುದಿತ್ತು. ಅನಾಹುತ ನಡೆದ ಒಂದೇ ತಾಸಿನಲ್ಲಿ ನಮ್ಮ ಸಚಿವರನ್ನು ಸ್ಥಳಕ್ಕೆ ಕಳುಹಿಸಿದ್ದೇವೆ. ನಮ್ಮ ಸಚಿವರಾದ ಮಂಕಳಾ ವೈದ್ಯ, ಕೃಷ್ಣ ಭೈರೇಗೌಡರು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುತ್ತಿದೆ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾರೆ. ಅವರು ಭೇಟಿ ನೀಡಿರುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಈ ವಿಚಾರದಲ್ಲಿ ಈಗ ರಾಜಕಾರಣ ಮಾಡುವುದು ಬೇಡ. ಮೊದಲು ಜನರ ರಕ್ಷಣೆ ಮಾಡೋಣ” ಎಂದರು.

ನಿಗಮಗಳಲ್ಲಿ ಖದೀಮರು ಸೇರಿಕೊಂಡಿದ್ದಾರೆ:
ನಿಗಮಗಳಲ್ಲಿ ಪಾರದರ್ಶಕತೆ ತರಲು ಮುಂದಾಗಿದ್ದು, ಸರ್ಕಾರ ಎಲ್ಲಾ ನಿಗಮಗಳ ಹಣ ಹಿಂಪಡೆಯುತ್ತಿರುವ ಬಗ್ಗೆ ಕೇಳಿದಾಗ, “ನಾವು ನಮ್ಮ ಅಧ್ಯಕ್ಷರುಗಳಿಗೆ ಈ ವಿಚಾರವಾಗಿ ಹೇಳಿದ್ದೆವು.  ನಿಗಮಗಳಲ್ಲಿ ಕೆಲವು ಅಧಿಕಾರಿಗಳು ಖದೀಮರು ಸೇರಿಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲೂ ತಿಂದು ಈಗಲೂ ಸೇರಿಕೊಂಡಿದ್ದಾರೆ. ಬಿಜೆಪಿ ಅವಧಿಯಲ್ಲಿ 300 ಕೋಟಿಗೂ ಹೆಚ್ಚು ಅಕ್ರಮ ನಡೆದಿದೆ. ಅದೇ ಅಧಿಕಾರಿಗಳು ಈಗ ಇದ್ದು, ಡಿ ವರ್ಗದ ನೌಕರರನ್ನು ಎಂಡಿ ಮಾಡಿದ್ದಾರೆ. ಅಂತಹ ಪ್ರಕರಣಗಳನ್ನು ಪರಿಶೀಲನೆ ಮಾಡಲಾಗುವುದು. ಹೀಗಾಗಿ ಆರ್ಥಿಕ ಇಲಾಖೆ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಮುಂದಾಗಿದೆ” ಎಂದರು.

ಜಿಲ್ಲಾ, ಬ್ಲಾಕ್ ಅಧ್ಯಕ್ಷರ ಜತೆ ಚರ್ಚೆ
ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ಬಗ್ಗೆ ಕೇಳಿದಾಗ, “ಬ್ಲಾಕ್ ಮಟ್ಟದಲ್ಲಿ ಪಕ್ಷವನ್ನು ಪುನರ್ ರಚನೆ ಮಾಡಬೇಕಿದೆ. ಹೀಗಿರುವ ಅಧ್ಯಕ್ಷರುಗಳು ಬಹಳ ವರ್ಷಗಳಿಂದ ಪಕ್ಷಕ್ಕೆ ದುಡಿದಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕಿದೆ. ಕೆಲವರಿಗೆ ಬಡ್ತಿ ನೀಡಬೇಕು. ಮತ್ತೆ ಕೆಲವರಿಗೆ ಜವಾಬ್ದಾರಿ ನೀಡಬೇಕಿದೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಗೆ ನ್ಯಾಯಾಲಯ ಯಾವಾಗ ಬೇಕಾದರೂ ಸೂಚನೆ ನೀಡಬಹುದು. ಅವುಗಳಿಗೆ ತಯಾರಿ ಮಾಡಿಕೊಳ್ಳಬೇಕು. ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ. ಈ ಎಲ್ಲಾ ವಿಚಾರಗಳನ್ನು ಚರ್ಚೆ ಮಾಡಿ, ಮಾರ್ಗದರ್ಶನ ನೀಡಲು ಇಂದು ಜಿಲ್ಲಾ ಹಾಗೂ ಬ್ಲಾಕ್ ಮಟ್ಟದ ಅಧ್ಯಕ್ಷರ ಸಭೆ ಕರೆದಿದ್ದೇವೆ” ಎಂದು ತಿಳಿಸಿದರು.

ನಿಷ್ಕ್ರಿಯರಾಗಿರುವವರ ಬದಲಾವಣೆ ಖಚಿತ:
ಕಾರ್ಯೋನ್ಮುಖರಾಗದವರ ಬದಲಾವಣೆ ಮಾಡುವ ಬಗ್ಗೆ ಕೇಳಿದಾಗ, “ಯಾರು ಕಾರ್ಯೋನ್ಮುಖರಾಗಿಲ್ಲ ಅಂತಹವರನ್ನು ಖಂಡಿತವಾಗಿ ಬದಲಾಯಿಸಲಾಗುವುದು. ಇತ್ತೀಚೆಗೆ ನಡೆದ ಸಿಎಲ್ ಪಿ ಸಭೆಯಲ್ಲೂ ನಾನು ಈ ವಿಚಾರ ಹೇಳಿದ್ದೇನೆ. ಕಾಂಗ್ರೆಸ್ ಕಚೇರಿ ಕಡ್ಡಾಯವಾಗಿ ಇರಬೇಕು. ಶಾಸಕರ ಮನೆಯಲ್ಲಿ ಪಕ್ಷದ ಸಭೆ ಮಾಡುವಂತಿಲ್ಲ. ಮನೆಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿ. ಆದರೆ ಪಕ್ಷದ ಸಭೆಗಳು ಪಕ್ಷದ ಕಚೇರಿಯಲ್ಲೇ ಆಗಬೇಕು. ಇನ್ನು ಅಧಿವೇಶನದ ಬಳಿಕ ಇಬ್ಬರು ಮಂತ್ರಿಗಳು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ” ಎಂದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News