ವಿದ್ಯಾವಂತರೇ ಹೆಚ್ಚು ಜಾತಿವಾದ, ಮೌಢ್ಯದ ಆರಾಧಕರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ

ನಮ್ಮ ಯುವ ಸಮೂಹದ ಶಕ್ತಿ ಮತ್ತು ಚೈತನ್ಯ ದುರುಪಯೋಗವಾಗಬಾರದು. ಜಾತಿ-ಧರ್ಮದ ಹೆಸರಲ್ಲಿ ಗಲಭೆಗಳಿಗೆ ಯುವ ಸಮೂಹ ದುರ್ಬಳಕೆ ಆಗುವುದನ್ನು ತಪ್ಪಿಸುವ ರೀತಿಯಲ್ಲಿ ನಮ್ಮ ಸರ್ಕಾರ ನೀತಿ ರೂಪಿಸಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Written by - Puttaraj K Alur | Last Updated : Jul 8, 2023, 07:57 PM IST
  • ಮಕ್ಕಳು ವಿಶ್ವಪ್ರಜ್ಞೆ ಬೆಳೆಸಿಕೊಂಡು ವೈಚಾರಿಕವಾಗಿ ಸನ್ನದ್ಧಗೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ
  • ಬೋಧಕರು ಜಾತ್ಯತೀತವಾಗಿಲ್ಲದಿದ್ದರೆ, ಶಿಕ್ಷಕರಲ್ಲೇ ವೈಚಾರಿಕತೆ ಇಲ್ಲದಿದ್ದರೆ ಮಕ್ಕಳಲ್ಲಿ ಜ್ಞಾನವಿಕಾಸ ಸಾಧ್ಯವಿಲ್ಲ
  • ಜಾಗತಿಕ ಮಟ್ಟದ ಬಂಡವಾಳ ಆಕರ್ಷಿಕಸಬೇಕೆಂದರೆ ಶಾಂತಿ-ಸುವ್ಯವಸ್ಥೆ & ಉದ್ಯಮ ಸ್ನೇಹಿ ವಾತಾವರಣವಿರಬೇಕು

Trending Photos

ವಿದ್ಯಾವಂತರೇ ಹೆಚ್ಚು ಜಾತಿವಾದ, ಮೌಢ್ಯದ ಆರಾಧಕರಾಗಿದ್ದಾರೆ: ಸಿಎಂ ಸಿದ್ದರಾಮಯ್ಯ   title=
ಜನಮನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ವಿದ್ಯಾವಂತರೇ ಹೆಚ್ಚು ಜಾತಿವಾದ ಮತ್ತು ಮೌಢ್ಯದ ಆರಾಧಕರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ. ಜನಮನ ಪ್ರತಿಷ್ಠಾನ ಮತ್ತು ಸಮತಾ ಅಧ್ಯಯನ ಕೇಂದ್ರವು ದೇವರಾಜ ಅರಸು ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಬುದ್ಧ ಕರ್ನಾಟಕ ಜನಮನ ಸಮಾವೇಶದ ಸಂವಾದದಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸಿ ಅವರು ಮಾತನಾಡಿದರು.

‘ಮಕ್ಕಳು ವಿಶ್ವಪ್ರಜ್ಞೆ ಬೆಳೆಸಿಕೊಂಡು ವೈಚಾರಿಕವಾಗಿ ಸನ್ನದ್ಧಗೊಳ್ಳುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ಬೋಧಕರು ಜಾತ್ಯತೀತವಾಗಿಲ್ಲದಿದ್ದರೆ, ಶಿಕ್ಷಕರಲ್ಲೇ ವೈಚಾರಿಕತೆ ಇಲ್ಲದಿದ್ದರೆ ಮಕ್ಕಳಲ್ಲಿ ಜ್ಞಾನದ ವಿಕಾಸ ಸಾಧ್ಯವಾಗುವುದಿಲ್ಲ. ಜಾಗತಿಕ ಮಟ್ಟದ ಬಂಡವಾಳವನ್ನು ಆಕರ್ಷಿಕಸಬೇಕು ಎಂದರೆ ಶಾಂತಿ-ಸುವ್ಯವಸ್ಥೆ ಮತ್ತು ಉದ್ಯಮ ಸ್ನೇಹಿ ವಾತಾವರಣವಿರಬೇಕು. ಬಂಡವಾಳ ಹೂಡಿಕೆಯಿಂದ ಉದ್ಯೋಗ ಸೃಷ್ಟಿಯಾಗಿ ಜಿಡಿಪಿ ಹೆಚ್ಚುತ್ತದೆ. ಹೀಗಾಗಿ ಜಾತಿ-ಧರ್ಮದ ಸಂಘರ್ಷವಿಲ್ಲದ ಶಾಂತಿಯುತ ಸಮಾಜ ಇರಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: 108 ಸಿಬ್ಬಂದಿಯ ಬಾಕಿ ವೇತನ ಪಾವತಿಗೆ ಕ್ರಮ : ಮುಷ್ಕರ ನಡೆಸದಂತೆ ಸಚಿವ ದಿನೇಶ್ ಗುಂಡೂರಾವ್ ಕರೆ

‘ನಮ್ಮ ಯುವ ಸಮೂಹದ ಶಕ್ತಿ ಮತ್ತು ಚೈತನ್ಯ ದುರುಪಯೋಗವಾಗಬಾರದು. ಜಾತಿ-ಧರ್ಮದ ಹೆಸರಲ್ಲಿ ಗಲಭೆಗಳಿಗೆ ಯುವ ಸಮೂಹ ದುರ್ಬಳಕೆ ಆಗುವುದನ್ನು ತಪ್ಪಿಸುವ ರೀತಿಯಲ್ಲಿ ನಮ್ಮ ಸರ್ಕಾರ ನೀತಿ ರೂಪಿಸಿದೆ. ಇದಕ್ಕಾಗಿ ಕೌಶಲ್ಯ ತರಬೇತಿ ಜೊತೆಗೆ ನಿರುದ್ಯೋಗಿ ಯುವ ಸಮೂಹಕ್ಕೆ 24 ತಿಂಗಳ ಕಾಲ ಯುವನಿಧಿ ನೀಡಲು ನಿರ್ಧರಿಸಿದ್ದೇವೆ. ರಾಜ್ಯ ಸರ್ಕಾರದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನಾವು ಪ್ರಣಾಳಿಕೆಯಲ್ಲಿ ಹೇಳಿದ್ದೇವು. ಅದರಂತೆ ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳುತ್ತೇವೆ. ಅಲ್ಲಿಯವರೆಗೂ ಹೊರ ಗುತ್ತಿಗೆ ನೇಮಕಾತಿಗಳಲ್ಲೂ ಮೀಸಲಾತಿ ತರುವ ಉದ್ದೇಶ ಹೊಂದಿದ್ದೇವೆ’ ಅಂತಾ ಸಿದ್ದರಾಮಯ್ಯ ತಿಳಿಸಿದರು.

‘ಕೈಗಾರಿಕೋದ್ಯಮಿಗಳ ಜೊತೆ ಸಭೆ ಮಾಡಿದ್ದೇನೆ. ಅವರಿಗೆ ಯಾವ ರೀತಿಯ ಕೌಶಲ್ಯದ ವಿದ್ಯಾರ್ಥಿಗಳ ಅಗತ್ಯವಿದೆ ಎನ್ನುವ ಬಗ್ಗೆ ಚರ್ಚಿಸಿದ್ದೇನೆ. ಅದಕ್ಕೆ ತಕ್ಕಂತೆ ಶಿಕ್ಷಣವನ್ನು ರೂಪಿಸುವ, ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಅರ್ಹರನ್ನು ಸೃಷ್ಟಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸಜ್ಜುಗೊಳಿಸುತ್ತೇವೆ. ಶರಾವತಿ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ನೀಡಲು ನಾವು ಬದ್ಧರಿದ್ದೇವೆ. ಮಲೆನಾಡಿನ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ಇರುವ ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಸಿಎಂ ಹೇಳಿದ್ದಾರೆ.

ಇದನ್ನೂ ಓದಿ: ಶರಾವತಿ ಸಂತ್ರಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ-ಸಿಎಂ ಸಿದ್ದರಾಮಯ್ಯ

‘ಹಿಂದಿನ ಸರ್ಕಾರದಲ್ಲಿ ಅನೈತಿಕ ಪೊಲೀಸ್ ಗಿರಿ ಅತ್ಯಂತ ನಿರ್ಲಜ್ಜತನದಿಂದ ಆಚರಿಸಲ್ಪಡುತ್ತಿತ್ತು. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಅನೈತಿಕ ಪೊಲೀಸ್ ಗಿರಿಗೆ ಬರೆ ಎಳೆದಿದ್ದೇವೆ. ಸಮ ಸಮಾಜ ನಿರ್ಮಾಣವಾಗದ ಹೊರತು ದಲಿತರ, ಅಲ್ಪ ಸಂಖ್ಯಾತರ, ಹಿಂದುಳಿದವರ ಮೇಲೆ ದೌರ್ಜನ್ಯ ನಿಲ್ಲುವುದಿಲ್ಲ. ಹೀಗಾಗಿ ಕುವೆಂಪು ಅವರ ಮಾತಿನಂತೆ ರಾಜ್ಯವನ್ನು ಶಾಂತಿಯ ತೋಟ ಮಾಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಅಕಾಡೆಮಿ, ಪ್ರಾಧಿಕಾರಗಳಿಗೆ ನೇಮಕ ಮಾಡಲು ಒಂದು ಆಯ್ಕೆ ಸಮಿತಿ ಮಾಡುತ್ತೇವೆ. ಈ ಆಯ್ಕೆ ಸಮಿತಿ ಮತಾಂಧ ಮತ್ತು ಸಮಾಜ ವಿಭಜಿಸುವ ಮನಸ್ಥಿತಿಯವರು ಒಳಗೆ ಪ್ರವೇಶಿಸದಂತೆ ಸ್ಕ್ರೀನಿಂಗ್ ನಡೆಸುತ್ತಾರೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News