ಬೆಂಗಳೂರು: ನಿತ್ಯವೂ ತಮಿಳುನಾಡಿಗೆ 5,000 ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂದು ಕರ್ನಾಟಕಕ್ಕೆ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಕೊಟ್ಟಿರುವ ನಿರ್ದೇಶನ ಆಘಾತಕಾರಿ. ಯಾವ ಕಾರಣಕ್ಕೂ ರಾಜ್ಯ ಸರಕಾರ ನೀರು ಹರಿಸಬಾರದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ (ಈ ಹಿಂದಿನ ಟ್ವಿಟರ್) ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, “ಸಂಕಷ್ಟ ಸೂತ್ರವೇ ಇಲ್ಲ, ಕರ್ನಾಟಕಕ್ಕಷ್ಟೇ ಸಂಕಷ್ಟವೇ? ತಮಿಳುನಾಡಿಗೆ ಯಾವ ಸಂಕಷ್ಟವೂ ಇಲ್ಲ. ಆದೇಶ ಪಾಲನೆಗಷ್ಟೇ ಕರ್ನಾಟಕ, ಅನುಭವಿಸಲಿಕ್ಕೆ ತಮಿಳುನಾಡು, ಹೀಗಿದೆ ನಮ್ಮ ಸ್ಥಿತಿ. ಆ ರಾಜ್ಯವು ಎಷ್ಟು ವಿಸ್ತೀರ್ಣದಲ್ಲಿ ಬೆಳೆ ಬೆಳೆಯುತ್ತಿದೆ ಎಂಬ ಅಂಕಿ-ಅಂಶದ ಬಗ್ಗೆ ಸಮಿತಿಯಲ್ಲಿ ಚರ್ಚಿಸಿಲ್ಲ ಎನ್ನುವುದಕ್ಕೆ ಆ ಸಮಿತಿಯ ಆದೇಶವೇ ಸಾಕ್ಷಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾವೇರಿ ಕಿಚ್ಚು: ಕಡ್ಲೆಪುರಿ ಎರಚಿ, ಬಾಯಿ ಬಡಿದುಕೊಂಡು ಚಾಮರಾಜನಗರದಲ್ಲಿ ಆಕ್ರೋಶ
“ಸಮಿತಿ ಮತ್ತು ಪ್ರಾಧಿಕಾರದ ಸಭೆಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ. ಆ ಸಭೆಗಳಿಗೆ ಅಧಿಕಾರಿಗಳು ಆನ್ʼಲೈನ್ʼನಲ್ಲಿ ಹಾಜರಾದರೆ, ನೆರೆರಾಜ್ಯದವರು ಖುದ್ದು ಹಾಜರಿದ್ದು ಅಂಕಿ-ಅಂಶ ಸಮೇತ ವಾದ ಮಂಡಿಸುತ್ತಾರೆ. ಹೀಗಾದರೆ, ರಾಜ್ಯದ ಹಿತರಕ್ಷಣೆ ಹೇಗೆ ಸಾಧ್ಯ? ನೆಲ,ಜಲ,ಭಾಷೆ ಬಗ್ಗೆ ತಮಿಳುನಾಡಿನವರಿಗೆ ಇರುವ ಬದ್ಧತೆ ನಮ್ಮವರಿಗಿಲ್ಲ. ಇದು ದುರಂತ” ಎಂದಿದ್ದಾರೆ.
“ನಮ್ಮವರಲ್ಲಿ ಉಪೇಕ್ಷೆ, ಉಡಾಫೆ ಹೆಚ್ಚು. ಟ್ರಿಬ್ಯುನಲ್ ಆದೇಶ ಉಲ್ಲಂಘಿಸಿರುವ ತಮಿಳುನಾಡು ವಿರುದ್ಧ ಸಮರ್ಥ ವಾದ ಮಂಡಿಸಲು ಏಕೆ ಸಾಧ್ಯವಾಗಿಲ್ಲ? ನೀರಾವರಿ ಪ್ರದೇಶವನ್ನು ನೆರೆರಾಜ್ಯ ಅಕ್ರಮವಾಗಿ ವಿಸ್ತರಣೆ ಮಾಡಿಕೊಂಡಿರುವುದನ್ನು ಹೇಳಲೇಬೇಕಿತ್ತು. ಮೊದಲು ಸಂಕಷ್ಟಸೂತ್ರ ರೂಪಿಸಿ ಎಂದು ಪಟ್ಟು ಹಿಡಿಯಬೇಕಿತ್ತು” ಎಂದು ಹೇಳಿದ್ದಾರೆ.
“ಜಲ ನಿರ್ವಹಣೆ ಪ್ರಾಧಿಕಾರ, ಜಲ ನಿಯಂತ್ರಣ ಸಮಿತಿ ಏನು ಮಾಡುತ್ತಿವೆ? ಟ್ರಿಬ್ಯುನಲ್ ಆದೇಶ ಉಲ್ಲಂಘಿಸಿ, ನೀರಾವರಿ ಪ್ರದೇಶ ಹೆಚ್ಚಿಸಿಕೊಂಡಿರುವ ತಮಿಳುನಾಡು ಬಗ್ಗೆ ಇವುಗಳಿಗೆ ಮಾಹಿತಿ ಇಲ್ಲವೇ? ರಾಜ್ಯಗಳ ನೈಜಸ್ಥಿತಿ ಅರಿಯುವ ಕರ್ತವ್ಯ ಅವುಗಳಿಗೆ ಇಲ್ಲವೇ? ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ನೀತಿ ಯಾಕೆ?” ಎಂದು ಪ್ರಶ್ನಿಸಿದ್ದಾರೆ.
“ನಮ್ಮ ರೈತರಿಗೇ ನೀರಿಲ್ಲದಿದ್ದರೂ, ಅವರು ಬೆಳೆಯನ್ನೇ ಬೆಳೆಯದಿದ್ದರೂ ನೀರು ಬಿಡಲು ಸರಕಾರ ಒಪ್ಪಿದೆ. ಈ ವಿಷಯದಲ್ಲಿ ರಾಜ್ಯ ಸರಕಾರ ಪೂರ್ಣ ವಿಫಲವಾಗಿದೆ. ರೈತರ ತಾಳ್ಮೆಯನ್ನೂ ದುರುಪಯೋಗ ಮಾಡಿಕೊಂಡಿದೆ. ಸುಪ್ರೀಂ ಕೋರ್ಟ್ ಏನು ಹೇಳುತ್ತದೋ ಅಲ್ಲಿಯವರೆಗೆ ಕಾಯಬೇಕಿತ್ತು. ಪ್ರಾಧಿಕಾರ, ಸಮಿತಿ ಹೇಳಿದವೆಂದು ನೀರು ಬಿಟ್ಟಿದ್ದು ತಪ್ಪು” ಎಂದು ಹೇಳಿದ್ದಾರೆ.
“ರೈತರ ಬಗ್ಗೆ ಕಾಳಜಿ, ಬೆಂಗಳೂರಿನ ಜನರ ಕುಡಿಯುವ ನೀರಿನ ಬಗ್ಗೆ ಆತಂಕ ಇದ್ದಿದ್ದರೆ ಸರಕಾರ ನೀರು ಹರಿಸುತ್ತಿರಲಿಲ್ಲ. ಬೆಂಗಳೂರಿಗರ ಮೌನ ನನಗೆ ಅಚ್ಚರಿ ತಂದಿದೆ. ನೆರೆ ರಾಜ್ಯಗಳಿಂದ ವಲಸೆ ಬಂದು ನಮ್ಮ ನೆಲ, ಜಲ, ಆರ್ಥಿಕತೆಯ ಆಸರೆಯಲ್ಲಿ ನೆಮ್ಮದಿಯಾಗಿರುವವರು ಕೂಡ ಕಾವೇರಿ ಬಗ್ಗೆ ದನಿ ಎತ್ತಬೇಕು. ಇವರಾರಿಗೂ ಕಾವೇರಿ ನೀರಿನ ಚಿಂತೆಯೇ ಇಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸದ್ಯದಲ್ಲೇ ತೆರೆಯ ಮೇಲೆ "ಗರುಡ ಪುರಾಣ"...!
“ಸರಕಾರ ಹೆಜ್ಜೆಹೆಜ್ಜೆಗೂ ಎಡವಿದೆ. ತಮಿಳುನಾಡು ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದಾಕ್ಷಣ ರಾಜ್ಯ ಸರಕಾರವೂ ತಕ್ಷಣವೇ ಆಕ್ಷೇಪ ಸಲ್ಲಿಸಬೇಕಿತ್ತು. ವಾಸ್ತವ ಸ್ಥಿತಿಯ ಬಗ್ಗೆ ದಾಖಲೆಗಳನ್ನು ಒದಗಿಸಿ, ಸಮರ್ಥವಾಗಿ ಎದುರಿಸಬೇಕಿತ್ತು. ಕಾಲಹರಣ ಮಾಡಿದ್ದಲ್ಲದೆ, ಈಗ ಕಾವೇರಿ ಬಗ್ಗೆ ಮೊಸಳೆ ಕಣ್ಣೀರು ಹಾಕಿದರೆ ಕನ್ನಡಿಗರು ನಂಬಬೇಕಾ?” ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ