ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಶಿಶುಗಳ ಸಾವು: ಸಚಿವ ಸುಧಾಕರ್ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ

ಜಿಲ್ಲಾಸ್ಪತ್ರೆಯಲ್ಲೇ ಇಂತಹ ದುಃಸ್ಥಿತಿ ಇದ್ದರೆ ತಾಲೂಕು, ಅದಕ್ಕೂ ಕೆಳಹಂತದ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Written by - Puttaraj K Alur | Last Updated : Nov 5, 2022, 10:34 AM IST
  • ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಸಾವುಗಳ ಬಗ್ಗೆ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ?
  • ಸಾವುಗೇಡಿ ಸರ್ಕಾರದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತಿಸಿದ ಕೀರ್ತಿ ನಿಮ್ಮದು
  • ಸಚಿವ ಡಾ.ಕೆ.ಸುಧಾಕರ್ ಕೂಡಲೇ ರಾಜೀನಾಮೆ ನೀಡಬೇಕೆಂದು ಎಚ್‍.ಡಿ.ಕುಮಾರಸ್ವಾಮಿ ಆಗ್ರಹ
ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ, ಶಿಶುಗಳ ಸಾವು: ಸಚಿವ ಸುಧಾಕರ್ ರಾಜೀನಾಮೆಗೆ ಎಚ್‌ಡಿಕೆ ಆಗ್ರಹ   title=
ಡಾ.ಕೆ.ಸುಧಾಕರ್ ವಿರುದ್ಧ ಕುಮಾರಸ್ವಾಮಿ ಕಿಡಿ

ಬೆಂಗಳೂರು: ತುಮಕೂರು ಆಸ್ಪತ್ರೆ ಮತ್ತು ವೈದ್ಯೆಯ ದರ್ಪದಿಂದ ಆದ 3 ಅಮಾನುಷ ಸಾವುಗಳ ಬಗ್ಗೆ ನಿಮಗೆ ಕೊನೆಪಕ್ಷ ಪಶ್ಚಾತ್ತಾಪ, ಪಾಪಪ್ರಜ್ಞೆ ಬೇಡವೇ? ಎಂದು ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಮಾಜಿ ಸಿಎಂ ಎಚ್‍.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ. ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಸುಧಾಕರ್ ಅವರೇ ಸಾವು, ಕ್ರೌರ್ಯವನ್ನೇ ಸಂಭ್ರಮಿಸುವ ‘ಸಾವುಗೇಡಿ ಸರ್ಕಾರʼದ ಆಡಳಿತದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಸಾವಿನಕೂಪಗಳನ್ನಾಗಿ ಪರಿವರ್ತನೆ ಮಾಡಿದ ಕೀರ್ತಿ ನಿಮ್ಮದು’ ಎಂದು ಟೀಕಿಸಿದ್ದಾರೆ.

ಡಾ.ಸುಧಾಕರ್‌ ಅವರೇ ನಾನು ಎತ್ತಿದ ಪ್ರಶ್ನೆ ಏನು? ನೀವು ಕೊಟ್ಟ ಉತ್ತರವೇನು? ಮನುಷ್ಯತ್ವ ಇದೆಯಾ ನಿಮಗೆ? ನಿಮ್ಮ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ ಎಂದರೆ; ಆ ಬಾಣಂತಿ, ಆಕೆಯ 2 ನವಜಾತ ಶಿಶುಗಳ ಧಾರುಣ ಸಾವನ್ನೂ ಸಂಭ್ರಮಿಸುತ್ತಿದ್ದೀರಿ ಎಂದೇ ಅರ್ಥ. ನಿಮ್ಮ ವಿಕೃತ ಮನಃಸ್ಥಿತಿಗೆ ನನ್ನ ಧಿಕ್ಕಾರವಿದೆ’ವೆಂದು ಎಚ್‍ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತುಮಕೂರು ಆಸ್ಪತ್ರೆಯಲ್ಲಿ ನಡೆದದ್ದೇನು? ಆ ವೈದ್ಯೆ & ಸಿಬ್ಬಂದಿಯ ನಿರ್ದಯ, ಕ್ರೌರ್ಯದ ವರ್ತನೆ, ಆಕೆಯನ್ನು ಆಸ್ಪತ್ರೆಗೆ ಕರೆತಂದ ಮಹಿಳೆಗೆ ಈಗ ಪೊಲೀಸರಿಂದ ಬೆದರಿಕೆ ಹಾಕಿಸುತ್ತಿರುವ ಬಗ್ಗೆ ನನಗೆ ಮಾಹಿತಿ ಇದೆ. ಅಧಿಕಾರ ಇದೆ ಎಂದು ಏನು ಬೇಕಾದರೂ ಮಾಡಬಹುದಾ? ಇನ್ನು ಆರೇ ತಿಂಗಳು, ನಿಮ್ಮ ಅಧಿಕಾರದ ಅಮಲು ಇಳಿಯುತ್ತದೆ. ಇಂತಹ ಧಾರುಣ ಸಾವುಗಳಾದ ಮೇಲೆಯಾದರೂ ಹದಗೆಟ್ಟ ವ್ಯವಸ್ಥೆ ಸರಿಪಡಿಸುವ ಬದಲು ಅದನ್ನೇ ಸಮರ್ಥಿಸಿಕೊಳ್ಳುವುದು ಎಂದರೆ ವಿಕಾರವಲ್ಲದೆ ಮತ್ತೇನು? ಜಿಲ್ಲಾಸ್ಪತ್ರೆಯಲ್ಲೇ ಇಂತಹ ದುಃಸ್ಥಿತಿ ಇದ್ದರೆ ತಾಲೂಕು, ಅದಕ್ಕೂ ಕೆಳಹಂತದ ಆರೋಗ್ಯ ಕೇಂದ್ರಗಳ ಪಾಡೇನು? ಹೇಳಿ ಸಚಿವರೇ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: "ನಮ್ಮ ಪಕ್ಷದ ಕಾರ್ಯಕರ್ತರಿಂದ ಹಣ ಸಂಗ್ರಹಿಸಿದರೆ ಬಿಜೆಪಿಯವರಿಗೇನು ನೋವು"?

‘ಆಸ್ಪತ್ರೆಯಿಂದ ನಿರ್ದಯವಾಗಿ ಹೊರಹಾಕಲ್ಪಟ್ಟ ಆ ತಾಯಿ, 4 ಗೋಡೆಗಳ ನಡುವೆ ಇಡೀ ರಾತ್ರಿಯೆಲ್ಲಾ ನರಳಿ ಜೀವ ಚೆಲ್ಲಿದ್ದಾರೆ. ಜನಿಸಿದ ಕ್ಷಣದಲ್ಲೇ ಉಸಿರುಬಿಟ್ಟ ಆ 2 ಕಂದಮ್ಮಗಳ ಮರಣ ನಿಮ್ಮ ಆತಃಕರಣವನ್ನು ಕಲಕಿಲ್ಲವೇ ಸಚಿವರೇ? ಕರ್ನಾಟಕ ಕಂಡ ಅತ್ಯಂತ ಕರಾಳ ಕ್ರೌರ್ಯವಿದು. ಅದನ್ನು ನಾನು ಪ್ರಶ್ನಿಸಿದ್ದೇ ತಪ್ಪಾ? ನನ್ನ ಸರ್ಕಾರವಿದ್ದಾಗ ಚಾಮರಾಜನಗರದ ಸುಳವಾಡಿಯ ದೇಗುಲದಲ್ಲಿ ನಡೆದ ವಿಷಪ್ರಸಾದ ಪ್ರಕರಣಕ್ಕೂ ಇದಕ್ಕೂ ಸಂಬಂಧವೇನು? ಆ ಘಟನೆ ನಡೆದಾಗ ನಾನು ಚೆನ್ನೈನಲ್ಲಿ ಅಧಿಕೃತ ಪ್ರವಾಸದಲ್ಲಿದ್ದೆ. ವಿಷಯ ಗೊತ್ತಾದ ಕೂಡಲೇ ಹಿಂದಿರುಗಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಅದಕ್ಕೂ ಇದಕ್ಕೂ ಸಂಬಂಧವೇನು? ಅಲ್ಲಿ ನಡೆದಿದ್ದು ಷಡ್ಯಂತ್ರ,ಇಲ್ಲಿ ನಡೆದದ್ದು ಕ್ರೌರ್ಯ’ವೆಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

‘ಅದೇ ಚಾಮರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್‌ ದುರಂತದಿಂದ 36 ಜನರ ಸಾವಿಗೆ ಕಾರಣರಾಗಿದ್ದು ಯಾರು? ನಿಮ್ಮ ವೈಫಲ್ಯವಲ್ಲವೇ? ರಾಜ್ಯದ ಉದ್ದಗಲಕ್ಕೂ ನಡೆದ ಸಾವುಗಳ ರಣಕೇಕೆ ನಿಮ್ಮ ಕಿವಿಗೆ ಇಂಪಾಗಿತ್ತಾ? ಕೋವಿಡ್‌ ಹೆಸರಿನಲ್ಲಿ ನಡೆದ ಕೊಳ್ಳೆ ಬಗ್ಗೆ ನನಗಿಂತ ನಿಮ್ಮ ಪಕ್ಷದವರಿಗೇ ಚೆನ್ನಾಗಿ ಗೊತ್ತು. ಕಾಸಿಗಾಗಿ ಹುದ್ದೆ; ಇದು ನಿಮ್ಮ ಸುಲಿಗೆ ನೀತಿ. ವೈದ್ಯರು, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳನ್ನು ಬಿಕರಿಗಿಟ್ಟಿದ್ದೀರಿ. ಅವರ 1 ವರ್ಷದ ವೇತನ ನೀವು ನಿಗದಿ ಮಾಡಿರುವ ದರ. ಬೆಕ್ಕು ಕಣ್ಮುಚ್ಚಿ ಹಾಲು ಕುಡಿಯುತ್ತಿದೆ ಎಂದರೆ ಲೋಕಕ್ಕೆ ಕಾಣುವುದಿಲ್ಲವೇ? ಕಳ್ಳಬೆಕ್ಕಿನ ಆಟ ಕಾಲದುದ್ದಕ್ಕೂ ನಡೆಯುವುದಿಲ್ಲ, ನೆನಪಿರಲಿ ಸಚಿವರೇ!’ ಎಂದು ಎಚ್‍ಡಿಕೆ ಎಚ್ಚರಿಸಿದ್ದಾರೆ.

‘ನಿಮ್ಮ ಪರ್ಸಂಟೇಜ್‌ ವ್ಯವಹಾರದ ಬಗ್ಗೆ ಮಾತನಾಡಿದ ಗುತ್ತಿಗೆದಾರರಾದ ಕೆಂಪಣ್ಣನವರು ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದಕ್ಕೆ ಬರಬೇಕಿತ್ತು. ಅವರನ್ನು ಬರದಂತೆ ತಡೆಯಲು ಏನೆಲ್ಲಾ ಹೈಡ್ರಾಮಾ ನಡೆಸಿದಿರಿ, ಯಾರ ಕಾಲು ಹಿಡಿದಿರಿ ಎನ್ನುವ ಮಾಹಿತಿ ನನಗೂ ಇದೆ. ‘ಗಾಜಿನ ಮನೆಯಲ್ಲಿ ಕೂತು ಗೋಲಿಯಾಟ ಆಡುವುದು ಕ್ಷೇಮವಲ್ಲʼ ಸಚಿವರೇ. ತುಮಕೂರು ಘಟನೆಗೆ ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ನೀಡಲೇಬೇಕು. ಆ ನೈತಿಕತೆ ನಿಮಗೆ ಇಲ್ಲದಿದ್ದರೆ, ಅದನ್ನು ಕೊನೆಪಕ್ಷ ನಿಮ್ಮ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಾದರೂ ಪ್ರದರ್ಶಿಸಬೇಕು. ನಿಮ್ಮನ್ನು ಸಂಪುಟದಿಂದ ಕಿತ್ತೊಗೆಯಲೇಬೇಕು. ನಿಮ್ಮ ಪಕ್ಷಕ್ಕೂ ಅಂತಹ ನೈತಿಕತೆ ಬಿಜೆಪಿ ಸರ್ಕಾರಕ್ಕೆ ಇದೆಯಾ?’ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: B.Sriramulu : 'ಸಿದ್ದರಾಮಯ್ಯ ಪರದೇಶಿ ಗಿರಾಕಿ ತರ ಕ್ಷೇತ್ರ ಹುಡುಕಿಕೊಂಡು ಹೋಗ್ತಿದ್ದಾರೆ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News