ಬೆಂಗಳೂರು : ನಾಡಗೀತೆಗೆ ನಿರ್ದಿಷ್ಟ ಸಮಯ ಹಾಗೂ ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ದಶಕಗಳಿಂದ ಇದ್ದ ಗೊಂದಲಕ್ಕೆ ರಾಜ್ಯ ಸರಕಾರ ಇದೀಗ ಪೂರ್ಣ ವಿರಾಮ ಹಾಡಿದೆ. ಖ್ಯಾತ ರಾಗ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ದಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಈಗ ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ.
ಯಾವುದೇ ಆಲಾಪ ಹಾಗೂ ಪುನರಾವರ್ತನೆ ಇಲ್ಲದಂತೆ ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಲ್ಲಿ ನಾಡಗೀತೆಯನ್ನು ಹಾಡಲು ಸಾಧ್ಯ ಎಂದು ತಜ್ಞರು ನೀಡಿದ ವರದಿ ಆಧರಿಸಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅನುಮೋದನೆ ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ರಾಷ್ಟ್ರಕವಿ ಕುವೆಂಪು ರಚಿಸಿರುವ "ಜಯಭಾರತ ಜನನಿಯ ತನುಜಾತೆ" ಕವನವು ನಾಡಗೀತೆಯಾಗಿ ಅಂಗೀಕೃತಗೊಂಡ ರೂಪದಲ್ಲೇ ಹಿಂದಿನ ಒಂದಕ್ಷರವನ್ನೂ ಬಿಡದಂತೆ ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ ದಾಟಿಯಲ್ಲೇ ಹಾಡಲಾಗುತ್ತದೆ ಎಂದು ಕನ್ನಡ - ಇಂಧನ ಮತ್ತು ಇಂಧನ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ದಶಕಗಳಿಂದ ಇದ್ದ ಗೊಂದಲಕ್ಕೆ ಕೊನೆಗೂ ತೆರೆ ಎಳೆದ ರಾಜ್ಯ ಸರ್ಕಾರದ ದಿಟ್ಟ ನಡೆಗೆ ನಾಡಿನ ಸಾಂಸ್ಕೃತಿಕ ವಲಯದಿಂದ ಈಗ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Narendra Modi: 'ಪಂಡಿತ್ ನೆಹರು ಆರಂಭಿಸಿದ ಕೆಲಸ ನನ್ನ ಅವಧಿಯಲ್ಲಿ ಪೂರ್ಣಗೊಂಡಿದೆ'
ಏನಿದು ವಿವಾದ : ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವ ವಿಚಾರ 2005 ರಿಂದಲೂ ನನೆಗುದಿಗೆ ಬಿದ್ದಿತ್ತು. ಕೆಲವು ಕಾರ್ಯಕ್ರಮಗಳಲ್ಲಿ ಏಳರಿಂದು ಎಂಟು ನಿಮಿಷಗಳ ಕಾಲ ನಾಡಗೀತೆ ಹಾಡುತ್ತಿದ್ದರು. ಇದು ಅಶಕ್ತರು, ವಿಕಲಚೇತನರಿಗೆ ಅನನುಕೂಲವಾಗುತ್ತಿತ್ತು. ಹೀಗಾಗಿ ದಾಟಿ ಹಾಗೂ ಕಾಲ ಮಿತಿಯ ಬಗ್ಗೆ ಸ್ಪಷ್ಟತೆ ತರಬೇಕೆಂಬ ಒತ್ತಾಯ ಸರ್ಕಾರದ ಮುಂದೆ ಇತ್ತು. 2006 ರಲ್ಲಿ ಸಾಹಿತಿ ವಸಂತ ಕನಕಾಪುರೆ ನೇತೃತ್ವದಲ್ಲಿ ಸರ್ಕಾರ ಒಂದು ಸಮಿತಿ ರಚಿಸಿತ್ತು. ಆದರೆ ಅವರ ಅಕಾಲಿಕ ಮರಣ ಹಿನ್ನೆಲೆಯಲ್ಲಿ ಚನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸರಕಾರ ಮತ್ತೊಂದು ಸಮಿತಿ ರಚನೆ ಮಾಡಿತ್ತು. ಆದರೆ ಈ ಸಮಿತಿಯ ಸದಸ್ಯರಲ್ಲೇ ಸ್ಪಷ್ಟತೆ ಇರಲಿಲ್ಲ.
ಈ ಹಿನ್ನೆಲೆಯಲ್ಲಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ವಿ ಸುನೀಲ್ ಕುಮಾರ್ ನಾಡಗೀತೆಗೆ ದಾಟಿ ಹಾಗೂ ಕಾಲಮಿತಿ ನಿಗದಿ ಮಾಡುವಂತೆ ಹಿರಿಯ ಸಂಗೀತ ವಿದೂಷಿ ಎಸ್.ಆರ್.ಲೀಲಾವತಿ ಅಧ್ಯಕ್ಷತೆಯಲ್ಲಿ ಹದಿನೆಂಟು ಜನರ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಲ್ಲಿ ನಾಡಗೀತೆ ಹಾಡಬೇಕೆಂದು ನೀಡಿದ್ದ ಶಿಫಾರಸು ಇದೀಗ ಅಧಿಕೃತಗೊಂಡಿದೆ.
ಕೋಟ್ : ಬಹು ವರ್ಷಗಳಿಂದ ಬಾಕಿ ಉಳಿದಿದ್ದ ಪ್ರಸ್ತಾಪವನ್ನು ಸರಕಾರ ಇತ್ಯರ್ಥಗೊಳಿಸಿದೆ. ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ, ದಿ.ಮೈಸೂರು ಅನಂತಸ್ವಾಮಿ ರಾಗಸಂಯೋಜನೆಯಲ್ಲಿ ಎರಡು ನಿಮಿಷ ಮೂವತ್ತು ಸೆಕೆಂಡ್ ಗೀತೆ ಹಾಡುವ ಪ್ರಸ್ತಾಪಕ್ಕೆ ಸಮ್ಮತಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.