ಮೈಸೂರು: 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮಣಿಸಿ ಚಾಮುಂಡೇಶ್ವರಿ ಕ್ಷೇತ್ರದಿಂದ ಆಯ್ಕೆಯಾಗಿರುವ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿರುವ ಮಾಜಿ ಸಚಿವ ಜಿ.ಟಿ. ದೇವೇಗೌಡ, ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆದು ಜನರ ಸೇವೆ ಮಾಡಿಕೊಂಡು ನೆಮ್ಮದಿಯಿಂದ ಇರುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ತಮ್ಮ ಪುತ್ರ ರಾಜಕೀಯ ಪ್ರವೇಶಿಸುವ ಬಗ್ಗೆ ಸುಳಿವು ನೀಡಿದ ಜಿಟಿಡಿ, ನನ್ನ ಮಗ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ಬೇಕಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಲಿ ಎಂದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ನನಗೆ ಉನ್ನತ ಶಿಕ್ಷಣ ಸಚಿವ ಖಾತೆ ಬೇಡ ಎಂದು ಎಷ್ಟು ಹೇಳಿದರೂ ಕೇಳಲಿಲ್ಲ. ಇದರಿಂದ ನಾನು ಕ್ಷಣ ಕ್ಷಣಕ್ಕೂ ಅವಮಾನ ಅನುಭವಿಸಿದ್ದೇನೆ. ನಾನಾಗಿಯೇ ಸಚಿವ ಸ್ಥಾನ ಬಿಟ್ಟು ಹೋಗಲಿ ಎಂಬ ಕಾರಣಕ್ಕೆ ಆ ಸ್ಥಾನ ನೀಡಿದ್ದರು ಎಂದು ಅಸಮಾಧಾನ ಹೊರಹಾಕಿದರು.
ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಬೇಕೆಂದು ನಾನು ಬಯಸಿದ್ದೆ, ಅವರು ಸಿಎಂ ಆಗಿರಬೇಕೆಂದು ಅಂತಿಮ ಹಂತದವರೆಗೂ ಪ್ರಯತ್ನ ಪಟ್ಟೆವು, ಆದರೂ ಫಲಿಸಲಿಲ್ಲ ಎಂದು ಜಿಟಿಡಿ ಬೇಸರ ವ್ಯಕ್ತಪಡಿಸಿದರು.