ಬೆಂಗಳೂರು: COVID-19 ವೈರಸ್ ಕಾರಣಕ್ಕೆ ಈ ಬಾರಿ ಶಾಲೆಗಳನ್ನು ತೆರೆಯಲಾಗುತ್ತದೆಯೋ ಇಲ್ಲವೋ ಎಂಬುದು ಇನ್ನೂ ಗೊಂದಲವಾಗಿಯೇ ಉಳಿದಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ನಾಳೆ ಮಹತ್ವದ ಸಭೆ ನಡೆಸುತ್ತಿದ್ದು ಶಾಲೆಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಿದೆ.
ಶಾಲಾ-ಕಾಲೇಜುಗಳ ಆರಂಭ ಮತ್ತು SSLC ಪರೀಕ್ಷೆ ನಡೆಸುವುದು ಆಯಾ ರಾಜ್ಯಗಳಿಗೆ ಬಿಟ್ಟಿದ್ದು ಎಂದು ಕೇಂದ್ರ ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಜಿಜ್ಞಾಸೆಗೆ ಸಿಲುಕಿದ್ದ ರಾಜ್ಯ ಸರ್ಕಾರ ಪೋಷಕರ ತೀವ್ರ ವಿರೋಧದ ನಡುವೆಯೂ SSLC ಪರೀಕ್ಷೆ ನಡೆಸಿತ್ತು. ಈಗ ಮತ್ತೆ ಶಾಲಾ-ಕಾಲೇಜುಗಳ ಆರಂಭಿಸುವ ಬಗ್ಗೆ ಗೊಂದಲ ಉಂಟಾಗಿದ್ದು ನಾಳೆ ಬಗೆಹರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ: ಕರೋನಾವೈರಸ್ ನಡುವೆಯೂ ಈ ರಾಜ್ಯದಲ್ಲಿ ಜನವರಿ 1ರಿಂದ ತೆರೆಯಲಿವೆ ಶಾಲೆಗಳು
ಶಾಲಾ ಪುನಾರಂಭ ವಿಚಾರ ಬಗ್ಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ಸಭೆ ನಡೆಯಲಿದೆ. ಸಂಬಂಧಪಟ್ಟ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಿಎಂ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ. ಸಭೆಯ ಬಳಿಕ ಶಾಲೆ ಆರಂಭದ ಬಗ್ಗೆ ಸರ್ಕಾರದಿಂದ ಅಧಿಕೃತ ನಿರ್ಧಾರ ಘೋಷಣೆ ಸಾಧ್ಯತೆ ಇದೆ.
ಸಭೆಯಲ್ಲಿ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಸಮಾಜ ಕಲ್ಯಾಣ, ಗೃಹ ಇಲಾಖೆಗಳಿಂದ ಹಾಗೂ ಶಾಲೆಗಳನ್ನು ಆರಂಭಿಸುವ ವಿಷಯಕ್ಕೆ ಸಂಬಂಧಿಸಿದಂತೆ ರಚಿಸಿರುವ ತಾಂತ್ರಿಕ ಸಮಿತಿಯ ಸಲಹೆಗಳನ್ನು ಪರಿಶೀಲಿಸಲಾಗುತ್ತದೆ.
ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಈ ವಾರದಿಂದಲೇ ಶಾಲೆ ತೆರೆಯಲು ನಡೆದಿದೆ ಸಿದ್ಧತೆ
ಶಾಲೆಗಳನ್ನು ಆರಂಭಿಸುವ (Schools Reopen) ಸಾಧ್ಯಾಸಾಧ್ಯತೆಗಳನ್ನು ಪರಿಶೀಲಿಸುತ್ತಿರುವ ಶಿಕ್ಷಣ ಇಲಾಖೆಯು ಆರೋಗ್ಯ ಇಲಾಖೆಯ ಸಲಹೆಯನ್ನೂ ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯು ಜನವರಿ 1ರಿಂದ ಶಾಲೆಗಳನ್ನು ಆರಂಭಿಸಬಹುದು ಎಂದು ತಿಳಿಸಿದೆ. ತಾಂತ್ರಿಕ ಸಮಿತಿಯ ಸಲಹೆ ಮೇರೆಗೆ ಆರೋಗ್ಯ ಇಲಾಖೆ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಪತ್ರ ಬರೆದಿದ್ದು ಆರೋಗ್ಯ ಇಲಾಖೆ ವತಿಯಿಂದ ಶಾಲೆಗಳನ್ನು ಆರಂಭಿಸುವ ಬಗ್ಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಪತ್ರದಲ್ಲಿ 9, 10 ಮತ್ತು 12ನೇ ತರಗತಿಗಳನ್ನು ಆರಂಭಿಸಬಹುದು ಆದರೆ COVID-19 ಮಾರ್ಗಸೂಚಿಯನ್ನು ಚಾಚೂ ತಪ್ಪದೆ ಅನುಸರಿಸರಿಸಬೇಕು ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಆರೋಗ್ಯ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕಿರುವುದರಿಂದ ನಾಳೆ 9, 10 ಮತ್ತು 12ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಬಹುತೇಕ ಜನವರಿ 1ರಿಂದ ಶಾಲೆಗಳನ್ನು ಆರಂಭಿಸಲು ಸಿಎಂ ನೇತೃತ್ವದ ಸಭೆ ಒಪ್ಪಿಗೆ ಸೂಚಿಸುವ ಸಾಧ್ಯತೆಗಳು ಕಂಡುಬರುತ್ತಿವೆ.