"ಹುಬ್ಬಳ್ಳಿ ಘಟನೆ: ಪ್ರಚೋದನಾತ್ಮಕ ಪೋಸ್ಟ್ ಮಾಡಿದ ತಿಳಿಗೇಡಿ ಯುವಕನಿಗೆ ಕುಮ್ಮಕ್ಕು ಕೊಟ್ಟವರು ಯಾರು?"

ಹುಬ್ಬಳ್ಳಿ ನಗರದಲ್ಲಿ ಕಳೆದ ರಾತ್ರಿ ನಡೆದಿರುವ ಗಲಾಟೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಡೀ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯ ಮಾಡಿದ್ದಾರೆ.

Written by - Prashobh Devanahalli | Edited by - Manjunath N | Last Updated : Apr 17, 2022, 04:45 PM IST
  • ಆಸ್ಪತ್ರೆ, ಪೊಲೀಸ್ ಠಾಣೆ, ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ.ಇದೆಲ್ಲ ನೋಡಿದರೆ ಯಾರೋ ಸಂಚು ರೂಪಿಸಿದ್ದಾರೆ ಎನ್ನುವ ಅನುಮಾನ ಬರುತ್ತದೆ ಎಂದರು.
"ಹುಬ್ಬಳ್ಳಿ ಘಟನೆ: ಪ್ರಚೋದನಾತ್ಮಕ ಪೋಸ್ಟ್ ಮಾಡಿದ ತಿಳಿಗೇಡಿ ಯುವಕನಿಗೆ ಕುಮ್ಮಕ್ಕು ಕೊಟ್ಟವರು ಯಾರು?" title=

ಬೆಂಗಳೂರು: ಹುಬ್ಬಳ್ಳಿ ನಗರದಲ್ಲಿ ಕಳೆದ ರಾತ್ರಿ ನಡೆದಿರುವ ಗಲಾಟೆಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಇಡೀ ಪ್ರಕರಣದ ಹಿಂದೆ ಯಾರಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯ ಮಾಡಿದ್ದಾರೆ.

ಜೆಡಿಎಸ್ ರಾಜ್ಯ ಅಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಅವರು ಅಧಿಕಾರ ವಹಿಸಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು; ರಾಜ್ಯದಲ್ಲಿ ಈಗ ಒಂದಲ್ಲ ಒಂದು ಘಟನೆ ನಡೆಯುತ್ತಲೇ ಇವೆ. ಹುಬ್ಬಳ್ಳಿ ನಗರದಲ್ಲಿ 15 -20 ವರ್ಷ ಕಾಲ ನೆತ್ತರ ಹೋಕುಳಿ ಆಡುತ್ತಿದ್ದರು.1994ರಲ್ಲಿ ದೇವೇಗೌಡರು ಅದನ್ನು ತಹಬದಿಗೆ ತಂದಿದ್ದರು. ಆದರೆ ನಿನ್ನೆ ರಾತ್ರಿ‌ ಮತ್ತೆ ಬೆಂಕಿ ಹಚ್ಚುವ ಕೆಲಸ ಆಗಿದೆ ಎಂದರು.

ಕೆಲ ತಿಳಿಗೇಡಿಗಳು ಮುಸ್ಲಿಂ ಜನಾಂಗವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಯಾರೂ ಬಲಿಯಾಗಬೇಡಿ ಎಂದು ಮುಸ್ಲಿಂ ಬಾಂದವರಿಗೆ ಹೇಳಲು ಬಯಸುತ್ತೇನೆ. ಹೀಗೆ ಬೆಂಕಿ ಹಚ್ಚೋದ್ರಿಂದ ಯಾವುದೇ ಪ್ರಯೋಜನ ಇಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

ಇದನ್ನೂ ಓದಿ: ಕಾಲಭೈರವ ಎದ್ದು ಕುಣಿಯುವ ಸಮಯ ಬಂದಿದೆ : ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ

ಬೆಂಗಳೂರಿನ ಡಿಜೆ.ಹಳ್ಳಿ, ಕೆಜೆ ಹಳ್ಳಿ ಕಥೆ ನೋಡಿದ್ದೇವೆ. ಬೆಂಕಿ ಹಚ್ಚಿದ ಕಾರಣಕ್ಕೆ ಅನೇಕ ಆಸ್ತಿ ಪಾಸ್ತಿ ಹಾಳಾದವು. ಆ ಘಟನೆ ಮರೆಯುವ ಮುನ್ನವೇ ಹುಬ್ಬಳ್ಳಿಯಲ್ಲಿ ಗಲಾಟೆ ಆಗಿದೆ.ಪ್ರಚೋದನಾತ್ಮಕ ಪೋಸ್ಟ್ ಮಾಡಿದವನ ಹಿಂದೆ ಯಾರು ಇದ್ದಾರೆ? ಅವನು ಯಾರ ಚಿತಾವಣೆಯಿಂದ ಪೋಸ್ಟ್ ಮಾಡಿದ್ದಾನೆ? ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.

ಆಸ್ಪತ್ರೆ, ಪೊಲೀಸ್ ಠಾಣೆ, ದೇವಸ್ಥಾನಕ್ಕೆ ಬೆಂಕಿ ಹಚ್ಚಿದ್ದಾರೆ.ಇದೆಲ್ಲ ನೋಡಿದರೆ ಯಾರೋ ಸಂಚು ರೂಪಿಸಿದ್ದಾರೆ ಎನ್ನುವ ಅನುಮಾನ ಬರುತ್ತದೆ ಎಂದರು.

ರಾಜ್ಯದಲ್ಲಿ ಇಂಥ ಘಟನೆಗಳು ಜಾಸ್ತಿ ಆಗುತ್ತಿವೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ? ಕಾಂಗ್ರೆಸ್ ನಾಯಕರು ಉರಿಯುವ ಬೆಂಕಿಗೆ ಪೆಟ್ರೋಲ್ ಹಾಕಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ನಂಬಿ ಮುಸ್ಲಿಂ ಜನಾಂಗ ಎಚ್ಚರ ತಪ್ಪಬಾರದು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.

ಇದನ್ನೂ ಓದಿ : "ಚುನಾವಣೆ ಗೆಲ್ಲಲು ಮೋದಿ ಮಂತ್ರ ಸಾಲೋದಿಲ್ಲ : ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ"

ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಈ ಶಾಂತಿಯ ತೋಟಕ್ಕೆ ಬೆಂಕಿ ಹಾಕುವ ಕೆಲಸ ಆಗುತ್ತಿದೆ. ಈ ಬೆಂಕಿಯನ್ನು ನಂದಿಸುವ ಕೆಲಸ ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದ ಅವರು, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ನಾಯಕರು ಮಾತನಾಡಿರುವುದನ್ನು ಗಮನಿಸಿದ್ದೇನೆ. ಮುಂದಿನ ಚುನಾವಣೆ ಗೆಲ್ಲಲು ಬಿಜೆಪಿಯವರು ರೂಪುರೇಷೆ ರೆಡಿ ಮಾಡಿದ್ದಾರೆಯೇ ಹೊರತು ಜನರ ಸಮಸ್ಯೆ ಬಗೆಹರಿಸುವ ಹಾಗೂ ರಾಜ್ಯದಲ್ಲಿ ಶಾಂತಿ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಚರ್ಚೆ ಮಾಡಿಲ್ಲ. ಬಿಜೆಪಿಗೆ 2023ಕ್ಕೆ ಅಧಿಕಾರ ಹಿಡಿಬೇಕು ಎನ್ನುವ ಧಾವಂತ ಇದೆ ಎಂದು ಕುಮಾರಸ್ವಾಮಿ ಅವರು ಟೀಕಾ ಪ್ರಹಾರ ನಡೆಸಿದರು.

ಇತ್ತ ಕಾಂಗ್ರೆಸ್ ಗೆ ಬೇರೆ ಜನಪರ ವಿಚಾರಗಳು, ಅಭಿವೃದ್ಧಿ ವಿಚಾರಗಳು ಇಲ್ಲದೇ 40 ಪರ್ಸೆಂಟ್ ವಿಷಯವನ್ನು ಇಟ್ಟುಕೊಂಡಿದ್ದಾರೆ. ಕೇಂದ್ರದಲ್ಲಿ ಸರಕಾರ ಮಾಡುವ ಹಗಲು ಕನಸು ಕಾಣುತ್ತಿದ್ದಾರೆ. ಅದು ಈಡೇರಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ನುಡಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News