ಬೆಂಗಳೂರು: ನಾನು ಮಹಾಭಾರತದ ಕರ್ಣನಂತೆ ಸಾಂದರ್ಭಿಕ ಶಿಶು. ನಾನು ಮತ್ತು ಕರ್ಣ ಇಬ್ಬರೂ ಒಂದೇ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯದ ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡನೆಯಾದ ಎರಡು ದಿನಗಳ ನಂತರ ಸದನದಲ್ಲಿ ಗುರುವಾರದಿಂದ ಆರಂಭವಾಗಿರುವ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದ ನಾಯಕರು ಈ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಆದ ನನಗೆ ಅಪ್ಪ-ಅಮ್ಮ ಇಲ್ಲವೆಂದು ಹೀಯಾಳಿಸುತ್ತಿದ್ದಾರೆ. ಆದರೆ ನಂಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಅಪ್ಪ, ಅಮ್ಮನ ಸ್ಥಾನದಲ್ಲಿದ್ದಾರೆ. ದೇವರು ಕೊಟ್ಟ ಆಶೀರ್ವಾದ, ಕಾಂಗ್ರೆಸ್ ಶಾಸಕರ ಸಹಕಾರದಿಂದ ಮುಖ್ಯಮಂತ್ರಿ ಆಗಿದ್ದೇನೆ. ನಾನು ಮಹಾಭಾರತದ ಕರ್ಣನಂತೆ ಸಾಂದರ್ಭಿಕ ಶಿಶುವೇ ಹೊರತು ಅನಾಥ ಶಿಶು ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ವಿರೋಧ ಪಕ್ಷದವರು ಪದೇ ಪದೇ ಸಮ್ಮಿಶ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಆದರೆ ಇದು 37 ಜನ ಶಾಸಕರಿರುವ ಸರ್ಕಾರ ಅಲ್ಲ. ೧೨೦ ಜನ ಶಾಸಕರಿರುವ ಸರ್ಕಾರ. 12 ವರ್ಷಗಳ ಹಿಂದೆಯೂ ನಂಗೆ 38 ಶಾಸಕರೇ ಇದ್ದುದು. ಆಗ ಬಿಜೆಪಿಯ 84 ಶಾಸಕರು ಬೆಂಬಲ ಕೊಟ್ಟಾಗ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲವೇ? ಈಗ ಕಾಂಗ್ರೆಸ್ ಪಕ್ಷ ಬೆಂಬಲ ಕೊಟ್ಟರೆ ಅಪವಿತ್ರ ಸರಕಾರವೇ? ಒಂದು ವೇಳೆ ಇದನ್ನು ಅಪವಿತ್ರ ಸರ್ಕಾರ ಎನ್ನುವುದಾದರೆ, ಅಂದು ಬಿಜೆಪಿಯವರು ನಮಗೆ ಬೆಂಬಲ ಕೊಟ್ಟಿದ್ದೇಕೆ ಎಂದು ಸಿಎಂ ಪ್ರಶ್ನಿಸಿದರು.