ರಾಜ್ಯದ ಜನತೆಯಿಂದ ನಾನು ಸಿಎಂ ಆಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ: ಸಿದ್ದರಾಮಯ್ಯ

ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ: ಹೆಚ್‌ಡಿಕೆಗೆ ಸಿದ್ದು

Last Updated : Sep 25, 2019, 07:51 AM IST
ರಾಜ್ಯದ ಜನತೆಯಿಂದ ನಾನು ಸಿಎಂ ಆಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ: ಸಿದ್ದರಾಮಯ್ಯ title=
File Image

ಬೆಂಗಳೂರು: ರಾಜ್ಯದ ಇಬ್ಬರು ಮುಖ್ಯಮಂತ್ರಿಗಳ ನಡುವಿನ ವಾಕ್ಸಮರ ಮುಂದುವರೆದಿದೆ. ಹದ್ದು-ಗಿಣಿ ಟ್ವೀಟ್ ಸಮರ ಮುಂದುವರೆದಿದ್ದು, ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿಯವರೇ ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಂಗಳವಾರ ಬೆಳಿಗ್ಗೆಯಷ್ಟೇ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ, "ನಾನೇ ನಂಬಿದ ಗಿಣಿಗಳು ಹದ್ದಾಗಿ ಕಾಡಿದ್ದು ನಿಜ. ಹದ್ದನ್ನು ಗಿಣಿಯೆಂದು ಭ್ರಮಿಸಿ ಮೈತ್ರಿ ಮಾಡಿಕೊಂಡಿದ್ದು ನನ್ನದೇ ತಪ್ಪು" ಎಂದಿದ್ದರು. ಈ ಬಗ್ಗೆ ರಾಮನಗರದಲ್ಲಿ ತಿರುಗೇಟು ನೀಡಿದ್ದ ಹೆಚ್‌ಡಿಕೆ, "ನಾನು ಸಿದ್ದರಾಮಯ್ಯ ಸಾಕಿರುವ ಗಿಣಿಯಲ್ಲ. ನನ್ನನ್ನು ರಾಮನಗರ ಜಿಲ್ಲೆಯ ಜನರು ಸಾಕಿದ್ದಾರೆ. ಈ ಜಿಲ್ಲೆಯ ಜನ ಕೊಟ್ಟಿರುವಂತಹ ಶಕ್ತಿ ಉಪಯೋಗಿಸಿಕೊಂಡು ಈ ರಾಜ್ಯದ ರಾಜಕಾರಣದಲ್ಲಿ ಬೆಳೆದಿದ್ದೇನೆ. ಅಲ್ಲದೆ, ನಮ್ಮಪ್ಪ ದೇವೇಗೌಡರು ಸಿದ್ದರಾಮಯ್ಯ ಅವರಂತಹ ಅನೇಕ ಗಿಣಿಗಳನ್ನು ಸಾಕಿ ಬೆಳೆಸಿದ್ದಾರೆ. ಅವುಗಳು ನಮ್ಮನ್ನು ಯಾವ ರೀತಿಯಲ್ಲಿ ಕುಕ್ಕುತ್ತಿವೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ" ಎಂದು ಹೇಳಿದ್ದರು.

ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ, ಈ ಬಗ್ಗೆ ಬಿಎಸ್‌ವೈ ಅವರನ್ನು ಕೇಳಿ:
ಇದಕ್ಕೆ ಮತ್ತೆ ಟ್ವೀಟ್ ಮೂಲಕವೇ ಟಾಂಗ್ ನೀಡಿರುವ ಸಿದ್ದರಾಮಯ್ಯ, ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ಅವರೇ, ನಿಮ್ಮನ್ನು ನಾನು ಸಾಕಿದ್ದೇನೆ ಎಂದು ಎಲ್ಲಿ ಹೇಳಿದ್ದೆ? ನಿಮ್ಮನ್ನು ಸಾಕಿದ್ದು ದೇವೇಗೌಡರು (@H_D_Devegowda), ಬಳಸಿಕೊಂಡದ್ದು ಮಾತ್ರ ನಮ್ಮಂತಹವರನ್ನು. ಬಳಸಿ ಬಿಸಾಡುವ ಪಾಠವನ್ನು ನೀವು ಬಹುಬೇಗ ಕಲಿತುಬಿಟ್ಟಿರಿ. ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಅವರನ್ನು ಕೇಳಿ, ಹೇಳ್ತಾರೆ ಎಂದಿದ್ದಾರೆ.

ಯಾವುದೇ ಹದ್ದು-ಗಿಣಿಗಳ ಹಂಗಿನಿಂದ ಮುಖ್ಯಮಂತ್ರಿಯಾಗಿರಲಿಲ್ಲ:
ಸನ್ಮಾನ್ಯ ಹೆಚ್.ಡಿ. ಕುಮಾರಸ್ವಾಮಿ ಅವರೇ, ನನ್ನನ್ನು ಕೂಡಾ ಬೆಳೆಸಿದ್ದು ರಾಜ್ಯದ ಜನತೆ. ನಮ್ಮ ಪಕ್ಷಕ್ಕೆ ಜನ ನೀಡಿದ ಆಶೀರ್ವಾದದ ಬಲದಿಂದ ನಾನು 5 ವರ್ಷ ಮುಖ್ಯಮಂತ್ರಿಯಾಗಿದ್ದೇ ಹೊರತು ಯಾವುದೇ ಹದ್ದು-ಗಿಣಿಗಳ ಹಂಗಿನಿಂದಲ್ಲ ಎಂದು ಸಿದ್ದರಾಮಯ್ಯ ಗುಡುಗಿದ್ದಾರೆ.

ಸ್ವಂತ ಬಲದಿಂದ ಸಿಎಂ ಆಗಲು ಸಾಧ್ಯವೇ? ಹೆಚ್‌ಡಿಕೆಗೆ ಸಿದ್ದರಾಮಯ್ಯ ಸವಾಲು
ಬೇರೆ ಪಕ್ಷಗಳ ಹೆಗಲ ಮೇಲೆ ಕೂತು ಮುಖ್ಯಮಂತ್ರಿಯಾದ‌ ಹೆಚ್.ಡಿ. ಕುಮಾರಸ್ವಾಮಿ ಅವರೇ, ನೀವು ಸ್ವಂತ ಬಲದಿಂದ ಮುಖ್ಯಮಂತ್ರಿಯಾಗಲೂ ಎಂದಾದರೂ ಸಾಧ್ಯವೇ? ಎಂದು ಮತ್ತೊಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಹೆಚ್‌ಡಿಕೆಗೆ ಸವಾಲು ಹಾಕಿದ್ದಾರೆ.
 

Trending News