ಕಟ್ಟಡ ಕುಸಿತ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ; ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಚಿಕಿತ್ಸೆಗೆ ಅಗತ್ಯವಿರುವವರಿಗೆ 1 ಲಕ್ಷ ರೂ. ಪರಿಹಾರವನ್ನು ಜಿಲ್ಲಾಧಿಕಾರಿಗಳು ತಕ್ಷಣ ನೀಡಲಿದ್ದಾರೆ. ಹೆಚ್ಚಿನ ಪರಿಹಾರ ಘೋಷಿಸುವ ಅಧಿಕಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.

Last Updated : Mar 22, 2019, 08:16 AM IST
ಕಟ್ಟಡ ಕುಸಿತ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ; ಸಿಎಂ ಹೆಚ್.ಡಿ. ಕುಮಾರಸ್ವಾಮಿ title=

ಧಾರವಾಡ: ಧಾರವಾಡ ಕುಮಾರೇಶ್ವರ ನಗರದಲ್ಲಿ ಮಂಗಳವಾರ ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ ವಾಣಿಜ್ಯ ಕಟ್ಟಡವೊಂದು ಕುಸಿದ ತಕ್ಷಣ ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ಆರಂಭಿಸಿ ಇದುವರೆಗೆ 54 ಜನರ ಜೀವ ರಕ್ಷಣೆ ಮಾಡಲಾಗಿದೆ. 13 ಜನ ಮೃತಪಟ್ಟಿದ್ದಾರೆ ಅವಶೇಷಗಳಡಿ ಇನ್ನೂ ಸುಮಾರು 12 ರಿಂದ 14 ಜನ ಇರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ಮುಂದುವರೆಯಲಿದೆ. ಘಟನೆ ಕುರಿತು ಮ್ಯಾಜಿಸ್ಟ್ರೇಟ್ ಹಂತದ ತನಿಖೆ ನಡೆಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಇನ್ನೂ ಉನ್ನತ ತನಿಖೆಗೂ ಸರ್ಕಾರ ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಅವಶೇಷಗಳಡಿ ಸಿಲುಕಿರುವ ಸಂತ್ರಸ್ತರ ಬಂಧುಗಳೊಂದಿಗೆ ಮಾತುಕತೆ ನಡೆಸಿ, ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧಾರವಾಡದಲ್ಲಿ ನಡೆದ ಈ ಘಟನೆ ಆಘಾತಕಾರಿಯಾಗಿದೆ. ಘಟನೆ ಸಂಭವಿಸಿದ ತಕ್ಷಣ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಹಾಗೂ ಚಿಕಿತ್ಸೆಗೆ ಅಗತ್ಯವಿರುವವರಿಗೆ 1 ಲಕ್ಷ ರೂ. ಪರಿಹಾರವನ್ನು ಜಿಲ್ಲಾಧಿಕಾರಿಗಳು ತಕ್ಷಣ ನೀಡಲಿದ್ದಾರೆ. ಹೆಚ್ಚಿನ ಪರಿಹಾರ ಘೋಷಿಸುವ ಅಧಿಕಾರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ. ಘಟನೆಯನ್ನು ಈಗಾಗಲೇ ಮ್ಯಾಜಿಸ್ಟ್ರೇಟ್ ಹಂತದ ತನಿಖೆಗೆ ವಹಿಸಲಾಗಿದೆ. ಅಗತ್ಯಬಿದ್ದರೆ ನ್ಯಾಯಮೂರ್ತಿಗಳು ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲು ಕೂಡಾ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆಯಿಂದ ಎಷ್ಟು ಅಂತಸ್ತಿನ ಕಟ್ಟಡದ ಪರವಾನಿಗೆ ಪಡೆಯಲಾಗಿತ್ತು ಎಂಬುದು ಹಾಗೂ ಅದನ್ನು ಮೀರಿ ಕಟ್ಟಡ ನಿರ್ಮಿಸಿದ್ದರೆ ಹಾಗೂ ಕಟ್ಟಡದ ಭದ್ರತೆ ಪರಿಶೀಲಿಸಿ ನಿರಾಪೇಕ್ಷಣ ಪತ್ರ ನೀಡಿದ ಕ್ರಮವನ್ನು ತನಿಖೆಗೆ ಸೂಚಿಸಲಾಗಿದೆ.  ಕಾನೂನು ಬಾಹಿರವಾಗಿ  ಕಳಪೆ ಕಾಮಗಾರಿ ಮಾಡಿದವರಿಗೆ ಸರ್ಕಾರದ ಅಧಿಕಾರಿಗಳು, ಇಂಜಿನೀಯರ್‌ಗಳು ಪರವಾನಿಗೆ ನೀಡಿದ್ದರೆ ಆ ಕುರಿತು ಕೂಡಾ ಸಮಗ್ರ ತನಿಖೆ ನಡೆಸಲಾಗುವುದು ಎಂದರು. 

ನವಲಗುಂದ ತಾಲೂಕಿನ ಜಾವೂರ ಗ್ರಾಮದ ಸಿದ್ದಪ್ಪ ಎಂಬ ಅಗ್ನಿಶಾಮಕ ಸೇವೆಯ ಇಲಾಖೆಯ ಸಿಬ್ಬಂದಿ ಜೀವದ ಹಂಗು ತೊರೆದು, ಕುಸಿದ ಕಟ್ಟಡದ ಒಳನುಗ್ಗಿ ಸುಮಾರು ಎಂಟು ಜನರ ಪ್ರಾಣವನ್ನು ರಕ್ಷಿಸಿದ್ದಾರೆ. ಪೊಲೀಸ್ ಮತ್ತು ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಗಳ ಅನೇಕ ಸಿಬ್ಬಂದಿ ಪ್ರಾಮಾಣಿಕವಾಗಿ ಸೇವೆ ಮಾಡಿದ್ದಾರೆ. ಇಂತಹ ಶೌರ್ಯ, ಸಾಹಸಿಗಳನ್ನು ಒಳಗೊಂಡು ಎನ್‌ಡಿಆರ್‌ಎಫ್ ಮಾದರಿಯಲ್ಲಿ ರಾಜ್ಯದ 4 ಕಂದಾಯ ವಿಭಾಗಗಳಲ್ಲಿ ಎಸ್‌ಡಿಆರ್‌ಎಫ್ ತಂಡಗಳನ್ನು ರಚಿಸಲು ಉದ್ದೇಶಿಸಲಾಗಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಡಿಜಿಪಿ ಎಂ.ಎನ್. ರೆಡ್ಡಿ ಅವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. 

ಧಾರವಾಡದ ದುರ್ಘಟನೆ ತೀವ್ರ ನೋವು ತಂದಿದೆ. ಕುಟುಂಬದ ದುಡಿಮೆಯ ಆಧಾರವಾಗಿದ್ದ ವ್ಯಕ್ತಿಗಳನ್ನೇ ಹಲವಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳು ಈ ಘಟನೆಯಲ್ಲಿ ಕಳೆದುಕೊಂಡಿವೆ. ಈ ಬಗ್ಗೆ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡ ಬಳಿಕ ವಿವಿಧ ಇಲಾಖೆಗಳ ಮುಖ್ಯಸ್ಥರ ಉನ್ನತ ಮಟ್ಟದ ಸಭೆ ಕರೆದು ಮುಂದಿನ ಕ್ರಮಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. 

ಈ ಘಟನೆಯ ನಂತರ ಕಟ್ಟಡ ಪರವಾನಿಗೆ ನೀಡುವಲ್ಲಿ ಆಗಿರುವ ಅಕ್ರಮಗಳ ಕುರಿತು ಎಲ್ಲ ಕಡೆಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ. ಧಾರವಾಡದ ಈ ಕಟ್ಟಡ ಕುಸಿತಗೊಂಡ ಕೂಡಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೊಂದಿಗೆ ಮಾತನಾಡಿ, ತ್ವರಿತ ಪರಿಹಾರ ಕಾರ್ಯಗಳನ್ನು ಪ್ರಾರಂಭಿಸಲು ಸೂಚಿಸಲಾಯಿತು. ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಜಿಲ್ಲಾಧಿಕಾರಿಗಳು, ಪೊಲೀಸ್‌ರು, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಮಯೋಚಿತವಾಗಿ ಕಾರ್ಯನಿರ್ವಹಿಸಿದರು. 

ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವವರು:
ಘಾಜಿಯಾಬಾದ್ ಎನ್‌ಡಿಆರ್‌ಎಫ್ ನ 72, ಬೆಂಗಳೂರು  ಎನ್‌ಡಿಆರ್‌ಎಫ್ 40, ಎಸ್‌ಡಿಆರ್‌ಎಫ್-40, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ 240, ಗಡಿಭದ್ರತಾ ಪಡೆಯಲ್ಲಿ 120, ವಿವಿಧ ಪೊಲೀಸ್ ಮತ್ತು ಆರ್‌ಟಿಓ ಸುಮಾರು 800, ಸ್ವಯಂ ಸೇವಕರು 100 ಕ್ಕೂ ಹೆಚ್ಚು, ಪಿಡಬ್ಲೂಡಿ ಯ 12 ತಜ್ಞ ಇಂಜಿನಿಯರ್‌ಗಳು, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ 120 ಕ್ಕೂ ಹೆಚ್ಚು ಸಿಬ್ಬಂದಿ, ಕಂದಾಯ-60, ಗೃಹರಕ್ಷಕ ದಳ-80, ಆರೋಗ್ಯ ಇಲಾಖೆಯ 150 ಕ್ಕೂ ಹೆಚ್ಚು, ಅಂಬ್ಯುಲೆನ್ಸ್-30 ರಿಂದ 40, ಜೆಸಿಬಿ 10, ಕ್ರೇನ್–6 ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದರು. ಮುಖ್ಯಮಂತ್ರಿಗಳು ಜಿಲ್ಲಾ ಆಸ್ಪತ್ರೆ ಮತ್ತು ಸತ್ತೂರಿನ ಎಸ್.ಡಿ.ಎಂ. ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗಳಿಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

Trending News