"ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫಲ ದೊರಕದಿರುವುದು ವಿಪರ್ಯಾಸ"

ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫಲ ದೊರಕದಿರುವುದು ವಿಪರ್ಯಾಸ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Last Updated : Jan 20, 2024, 04:18 PM IST
  • ನಗರಗಳು, ಒಂದು ರಾಜ್ಯದ ಅಭಿವೃದ್ಧಿಯ ಕೇಂದ್ರಗಳು, ಅದರಲ್ಲಿಯೂ ಬೆಂಗಳೂರಿನಂತಹ ನಗರಕ್ಕೆ ಮೂಲಸೌಕರ್ಯದ ವೃದ್ಧಿ ಅತ್ಯವಶ್ಯವಾಗಿದೆ.
  • ರಾಜ್ಯದ ಆದಾಯದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ಸುಸ್ಥಿರ ಬೆಳವಣಿಗೆಗೆ ಸೂಕ್ತ ಸಹಕಾರವನ್ನು ನೀಡುವುದು ರಾಜ್ಯದ ಆದ್ಯತೆಯಾಗಿದೆ.
  • ಸಬಲೀಕೃತ ಸಮಿತಿಗಳ ಅಂದಾಜು ಬಳಸಿ ಮಾಡುವ ಒಟ್ಟು ಪ್ರಯತ್ನದ ಹೊರತಾಗಿಯೂ ರಾಜ್ಯ ಸತತವಾದ ಪ್ರಾದೇಶಿಕ ಅಸಮತೋಲನವನ್ನು ಎದುರಿಸುತ್ತಿದೆ.
 "ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫಲ ದೊರಕದಿರುವುದು ವಿಪರ್ಯಾಸ" title=

ಬೆಂಗಳೂರು: ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫಲ ದೊರಕದಿರುವುದು ವಿಪರ್ಯಾಸ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಅವರು ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಆರ್ಥಿಕ ಸಂಯುಕ್ತ ತತ್ವ: 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

16ನೇ ಹಣಕಾಸು ಆಯೋಗ ರಚನೆಯಾಗಿರುವ ಸಂದರ್ಭದಲ್ಲಿ ಎಂ.ಎಸ್.ರಾಮಯ್ಯ ಅನ್ವಯಿಕ ವಿಜ್ಞಾನಗಳ ವಿಶ್ವವಿದ್ಯಾಲಯ, ವಿತ್ತೀಯ ನೀತಿ ಸಂಸ್ಥೆ ಹಾಗೂ ಆರ್ಥಿಕ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ"ಆರ್ಥಿಕ ಸಂಯುಕ್ತ ತತ್ವ : 16 ನೇ ಹಣಕಾಸು ಆಯೋಗದ ಮುಂದಿರುವ ಸವಾಲುಗಳು" ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಅತ್ಯಂತ ಸಮಯೋಚಿತವಾಗಿದೆ.

ಸಂಯುಕ್ತ ಆರ್ಥಿಕ ವರ್ಗಾವಣೆಯಲ್ಲಿನ ವೈಪರೀತ್ಯಗಳನ್ನು ಪರಿಶೀಲಿಸಲು ಕರ್ನಾಟಕ ಗಟ್ಟಿಯಾಗಿ ಪ್ರಾತಿನಿಧ್ಯವನ್ನು ವಹಿಸಬೇಕಿದೆ. ದಕ್ಷತೆಯ ಜೊತೆಗೆ ನೀತಿಗೆ ಸಂಬಂಧಿಸಿದಂತೆ ವರ್ಗಾವಣೆಯ ಅರ್ಹತೆಗಳ ಬಗ್ಗೆ ಸಾಕಷ್ಟು ಒತ್ತು ನೀಡಲು ಇದು ಸುಸಂದರ್ಭ.

ಹಿಂದಿನ ಹಣಕಾಸು ಆಯೋಗದ ಶಿಫಾರಸ್ಸುಗಳಿಂದಾಗಿ ಕರ್ನಾಟಕ ಭಾರಿ ನಷ್ಟವನ್ನು ಅನುಭವಿಸಬೇಕಾಗಿ ಬಂದಿದ್ದು, ಇದನ್ನು 16ನೇ ಹಣಕಾಸು ಆಯೋಗದ ಮುಂದೆ ಪ್ರಶ್ನಿಸಬೇಕಿದೆ.

14 ನೇ ಹಣಕಾಸು ಆಯೋಗದಡಿ ಕರ್ನಾಟಕದ ಪಾಲಿನ ತೆರಿಗೆ ಹಂಚಿಕೆಯು ಶೇ 4.713 ರಿಂದ ಶೇ. 3.647 ಕ್ಕೆ 15 ನೇ ಹಣಕಾಸು ಆಯೋಗದಿಂದಾಗಿ ಇಳಿದಿದೆ.

ರಾಜ್ಯಗಳ ಪೈಕಿ ಕರ್ನಾಟಕಕ್ಕೆ ಅತ್ಯಂತ ದೊಡ್ಡ ಮೊತ್ತ ಅಂದರೆ ಶೇ 1.066 ರಷ್ಟು ಇಳಿಕೆಯಾಗಿದೆ. ಈಗಿನ ವ್ಯವಸ್ಥೆ ಆದಾಯದ ದೂರ ವ್ಯಾಪ್ತಿಯನ್ನು ಪರಿಗಣಿಸಿಸುತ್ತಿದ್ದು, ಈ ಪ್ರಕಾರ ಕರ್ನಾಟಕವು ಅತಿ ಹೆಚ್ಚು ತಲಾ ಆದಾಯವಿರುವ ರಾಜ್ಯಕ್ಕೆ ಹೋಲಿಸಿ ಆದಾಯ ಕಡಿಮೆ ದೂರವ್ಯಾಪ್ತಿ ಇರುವ ಕಾರಣ ಸೋಲುತ್ತಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ರೂ.6,21,131ಗೂ ಹೆಚ್ಚಿನ ತಲಾ ಆದಾಯ ಮಟ್ಟವನ್ನು ಕಾಣಬಹುದಾಗಿದೆ ಎನ್ನುವುದನ್ನು ಪರಿಗಣಿಸುವುದು ಮುಖ್ಯ. ಈ ವ್ಯವಸ್ಥೆ ಕರ್ನಾಟಕಕ್ಕೆ ಕೆಲವು ಜಿಲ್ಲೆಗಳಲ್ಲಿ ಕಡಿಮೆಯಿರುವ ತಲಾ ಆದಾಯದ ಸಮಸ್ಯೆಯನ್ನು ಬಗೆಹರಿಸಲು ಸಾಕಷ್ಟು ಸಂಪನ್ಮೂಲ ವರ್ಗಾವಣೆಯಿಂದ ವಂಚಿತವಾಗಿಸಿದೆ.

ಇದನ್ನೂ ಓದಿ-Ram Kand Health Benefits:ಶ್ರೀರಾಮ 14 ವರ್ಷಗಳವರೆಗೆ ಈ ಹಣ್ಣು ಸೇವಿಸಿದ್ದನಂತೆ, ಲಾಭ ತಿಳಿದರೆ ನೀವೂ ಆಶ್ಚರ್ಯಚಕಿತರಾಗುವಿರಿ!

ಅಂತರ ರಾಜ್ಯ ತಲಾ ಆದಾಯ ವ್ಯತ್ಯಾಸಗಳಿಗೆ ಹಣಕಾಸು ಆಯೋಗಗಳು ಅಗತ್ಯವಿರುವ ಹೊಂದಾಣಿಕೆಯನ್ನು ಮಾಡಿಕೊಂಡು ಶಿಫಾರಸ್ಸುಗಳನ್ನು ಮಾಡುವಾಗ ಆದಾಯ ದೂರವ್ಯಾಪ್ತಿಯನ್ನು ಪರಿಗಣಿಸಬೇಕು.

ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯಕ್ಕೆ ತನ್ನ ಕೊಡುಗೆಗೆ ತಕ್ಕ ಪ್ರತಿಫಲ ದೊರಕದಿರುವುದು ವಿಪರ್ಯಾಸ. 16ನೇ ಹಣಕಾಸು ಆಯೋಗವು ದಕ್ಷತೆಗೆ ಪ್ರೋತ್ಸಾಹಕಗಳನ್ನು ಹಾಗೂ ವಿತ್ತೀಯ ಕಾರ್ಯಕ್ಷಮತೆಗೆ ನೀಡುವ ಬೆಲೆಯನ್ನು ಹೆಚ್ಚಿಸುವಂತೆ 16ನೇ ಹಣಕಾಸು ಆಯೋಗವನ್ನು ನಾವು ಒತ್ತಾಯಿಸುತ್ತೇವೆ.

ಅತ್ಯುತ್ತಮ ವಿತ್ತೀಯ ಕಾರ್ಯಕ್ಷಮತೆ ಹೊಂದಿರುವ ರಾಜ್ಯ ಎಂದು ದಾಖಲೆ ಹೊಂದಿರುವ ನಮ್ಮ ರಾಜ್ಯಕ್ಕೆ ಅದರ ದಕ್ಷತೆಗಾಗಿ ಯಾವುದೇ ಪ್ರೋತ್ಸಾಹಕಗಳು ದೊರೆಯುತ್ತಿಲ್ಲ. ಕರ್ನಾಟಕದ ಭಾರಿ ವಿತ್ತೀಯ ಕಾರ್ಯಕ್ಷಮತೆ ಗಮನಾರ್ಹವಾಗಿದ್ದು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು ಘೋಷಿಸಿದ ಮೊದಲ ರಾಜ್ಯವೆಂದು ಹೆಗ್ಗಳಿಕೆ ಪಡೆದಿದೆ. ಕೋವಿಡ್ ನಂತರದಲ್ಲಿ ರಾಜಸ್ವ ಕೊರತೆಗಳು ಮರುಕಳಿಸಿದ್ದನ್ನು ಹೊರತುಪಡಿಸಿ ಭಾರಿ ಗಾತ್ರದ ವಿತ್ತೀಯ ಸೂಚಕಗಳಾದ ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆ ಸದಾ ನಿಗದಿತ ವ್ಯಾಪ್ತಿಯಲ್ಲಿಯೇ ಇವೆ.

ಭಾರತದ ರಾಜ್ಯ ಸರ್ಕಾರಗಳಿಗೆ ಪ್ರಮುಖ ವೆಚ್ಚ ಹೊಣೆಗಾರಿಕೆಗಳಿದ್ದು, ಬಹುತೇಕ ಸಂದರ್ಭದಲ್ಲಿ ಅಗತ್ಯ ರಾಜಸ್ವ ಸಂಪನ್ಮೂಲಗಳ ಲಭ್ಯತೆ ಇರುವುದಿಲ್ಲ. ವಿತ್ತೀಯ ಸ್ವಾಯತ್ತತೆಯನ್ನು ಉಳಿಸಿಕೊಳ್ಳುತ್ತಲೇ ರಾಜ್ಯ ಮಟ್ಟದಲ್ಲಿ ವೆಚ್ಚ ಹೊಣೆಗಾರಿಕೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಸಂದಭದಲ್ಲಿ ಹಣಕಾಸು ಆಯೋಗಗಳ ಸಂಪನ್ಮೂಲ ವರ್ಗಾವಣೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ.

ಆರ್ಥಿಕ ಬೆಳವಣಿಗೆಯನ್ನು ಸಮತೋಲಿತ ಹಾಗೂ ಒಳಗೊಳ್ಳುವಿಕೆಯನ್ನು ಖಾತ್ರಿ ಪಡಿಸಿಕೊಳ್ಳುತ್ತಲೇ ಅದನ್ನು ಸುಸ್ಥಿರಗೊಳಿಸಲು ರಾಜ್ಯಕ್ಕೆ ಅನೇಕ ಸವಾಲುಗಳಿವೆ. ಇದರೊಂದಿಗೆ, ಕೇಂದ್ರ ಪ್ರಾಯೋಜಿತ ಯೋಜನೆಗಳ ಆಯವ್ಯಯ ಪರಿಣಾಮಗಳನ್ನೂ ರಾಜ್ಯ ಸರಿದೂಗಿಸಬೇಕಾಗಿದೆ.

ರಾಜ್ಯದ ಆರ್ಥಿಕ ಹಾಗೂ ಮಾನವ ಸಂಪನ್ಮೂಲದ ಅಭಿವೃದ್ಧಿಗೆ ಮಾನವ ಮತ್ತು ಭೌತಿಕ ಮೂಲಸೌಲಭ್ಯಗಳ ಮೇಲೆ ಗಮನಾರ್ಹ ಹೂಡಿಕೆಯ ಅಗತ್ಯವಿದೆ. ಕರ್ನಾಟಕ ತನ್ನ ಸ್ವಂತ ತೆರಿಗೆ ಸಂಗ್ರಹದಲ್ಲಿ ಉತ್ತಮ ಪ್ರದರ್ಶನವನ್ನು ಸಾಧಿಸಿದ್ದರೂ, ರಾಜ್ಯದ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಲು ಹಾಗೂ 2032ರ ವೇಳೆಗೆ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ನ ಜಿಎಸ್‌ಡಿಪಿ ಸಾಧಿಸಲು ನಮ್ಮಲ್ಲಿರುವ ಸಂಪನ್ಮೂಲಗಳು ಸಾಕಾಗುತ್ತಿಲ್ಲ.

ನಗರೀಕರಣ, ನಗರ ಕೇಂದ್ರಗಳಲ್ಲಿ ಮೂಲಸೌಕರ್ಯಗಳು ಹಾಗೂ ಮೂಲ ಸೇವೆಗಳ ಪೂರೈಕೆಯನ್ನು ಬೇಡುತ್ತದೆ. ಆದರೆ ಹೆಚ್ಚುತ್ತಿರುವ ವಲಸೆಯ ಸಮಸ್ಯೆ ನಗರ ಕೇಂದ್ರಗಳಲ್ಲಿ ಒತ್ತಡವನ್ನು ಹೆಚ್ಚಿಸುತ್ತಿದೆ.

ನಗರಗಳು, ಒಂದು ರಾಜ್ಯದ ಅಭಿವೃದ್ಧಿಯ ಕೇಂದ್ರಗಳು, ಅದರಲ್ಲಿಯೂ ಬೆಂಗಳೂರಿನಂತಹ ನಗರಕ್ಕೆ ಮೂಲಸೌಕರ್ಯದ ವೃದ್ಧಿ ಅತ್ಯವಶ್ಯವಾಗಿದೆ.

ರಾಜ್ಯದ ಆದಾಯದಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ಸುಸ್ಥಿರ ಬೆಳವಣಿಗೆಗೆ ಸೂಕ್ತ ಸಹಕಾರವನ್ನು ನೀಡುವುದು ರಾಜ್ಯದ ಆದ್ಯತೆಯಾಗಿದೆ.

ಸಬಲೀಕೃತ ಸಮಿತಿಗಳ ಅಂದಾಜು ಬಳಸಿ ಮಾಡುವ ಒಟ್ಟು ಪ್ರಯತ್ನದ ಹೊರತಾಗಿಯೂ ರಾಜ್ಯ ಸತತವಾದ ಪ್ರಾದೇಶಿಕ ಅಸಮತೋಲನವನ್ನು ಎದುರಿಸುತ್ತಿದೆ. 2022-23ರ ಆರ್ಥಿಕ ಸಮೀಕ್ಷೆಯ ಪ್ರಕಾರ, 6,21,131 ರೂ.ಗಳ ತಲಾದಾಯವನ್ನು ಹೊಂದಿರುವ ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದ್ದು, 1,24,998 ರೂ.ಗಳ ತಲಾ ಆದಾಯವನ್ನು ಹೊಂದಿರುವ ಕಲಬುರಗಿ ಕೊನೆಯ ಸ್ಥಾನದಲ್ಲಿದೆ.

ಬೆಂಗಳೂರು ನಗರದ ಮಾನವ ಅಭಿವೃದ್ಧಿ ಸೂಚ್ಯಂಕ 0.738 ಪಡೆದು ಮೊದಲ ಸ್ಥಾನದಲ್ಲಿದ್ದರೆ, ಯಾದಗಿರಿ, ಕಲಬುರಗಿ ಮತ್ತು ರಾಯಚೂರು 0.538, 0.539 ಹಾಗೂ 0.562 ಅನುಕ್ರಮವಾಗಿ ಮಾನವ ಅಭಿವೃದ್ಧಿ ಸೂಚ್ಯಂಕ ಪಡೆದು ಕೊನೆಯ ಮೂರು ಸ್ಥಾನಗಳಲ್ಲಿದ್ದು, ಮಾನವ ಅಭಿವೃದ್ಧಿಯ ಅಸಮತೋಲನ ಗಮನಾರ್ಹವಾಗಿದೆ.

ಇದನ್ನೂ ಓದಿ: ನಿತ್ಯ 100% ಫ್ರೇಶ್ ಹಣ್ಣಿನ ರಸ ಕುಡಿಯುವುದರಿಂದಲೂ ಆರೋಗ್ಯಕ್ಕೆ ಹಾನಿಯಾಗುತ್ತಂತೆ!

ಸಮತೋಲಿತ ಪ್ರಾದೇಶಿಕ ಅಭಿವೃದ್ಧಿಯನ್ನು ಸಾಧಿಸಲು ರಾಜ್ಯದ ಶ್ರಮಕ್ಕೆ ಪೂರಕವಾಗಿ ಹೆಚ್ಚುವರಿ ಸಂಪನ್ಮೂಲಗಳ ಅಗತ್ಯವೂ ಇದೆ.

ಹಣಕಾಸು ಆಯೋಗಗಳಿಂದ ಸಾಕ್ಷ್ಯಾಧಾರಿತ ಸಮತೋಲಿತ ವ್ಯವಸ್ಥೆ ಅನುಸರಿಸಿ ನೀತಿ ಮತ್ತು ಪ್ರೋತ್ಸಾಹಕ ದಕ್ಷತೆಯನ್ನು ಗಳಿಸಲು ವಿಚಾರ ಸಂಕಿರಣದಲ್ಲಿ ಭಾಗವಹಿಸುತ್ತಿರುವವರು ಚರ್ಚಿಸಬೇಕೆಂದು ನಾನು ಒತ್ತಾಯಿಸುತ್ತೇನೆ.

16 ನೇ ಹಣಕಾಸು ಆಯೋಗದ ಮುಂದೆ ಕರ್ನಾಟಕ ಕೇಂದ್ರದಿಂದ ನ್ಯಾಯೋಚಿತ ತೆರಿಗೆ ಹಂಚಿಕೆಯನ್ನು ಪಡೆಯಲು ಹಾಗೂ ಸೂಕ್ತ ಪ್ರಾತಿನಿಧ್ಯ ವಹಿಸಲು ಈ ವಿಚಾರ ಸಂಕಿರಣವು ಈ ಎಲ್ಲಾ ವಿಷಯಗಳ ಬಗ್ಗೆ ಬೆಳಕು ಚೆಲ್ಲಿ ಮೌಲ್ಯಯುತ ಸಲಹೆಗಳನ್ನು ನೀಡಲಿದೆ ಎಂದು ಭಾವಿಸುತ್ತೇನೆ.

ವಿಚಾರ ಸಂಕಿರಣ ಯಶಸ್ವಿಯಾಗಲಿ ಎಂದು ಆಶಿಸಿ, ಸಕಾಲಿಕ ವಿಚಾರ ಸಂಕಿರಣವನ್ನು ಆಯೋಜಿಸಿದ ರಾಮಯ್ಯ ವಿಶ್ವವಿದ್ಯಾಲಯವನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ ಎಂದು ಶುಭ ಹಾರೈಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News