ನವದೆಹಲಿ: ರಾಜ್ಯದಲ್ಲಿ ಜಾರಿಯಾಗಬೇಕಿರುವ ನೀರಾವರಿ ಯೋಜನೆಗಳ ವಿಷಯದಲ್ಲಿ ಪಕ್ಷಾತೀತ ಹೋರಾಟ ನಡೆಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ದೆಹಲಿ ನಿವಾಸದಲ್ಲಿಂದು ನಡೆದ ಸರ್ವ ಸಂಸದರ ಸಭೆಯಲ್ಲಿ, ರಾಜ್ಯದ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕ್ಕೊಂಡು ಕುಡಿಯುವ ನೀರು ಮತ್ತು ವಿದ್ಯುತ್ ಸೇರಿದಂತೆ ರಾಜ್ಯದಲ್ಲಿ ಜಾರಿಯಾಗಬೇಕಿರುವ ಯೋಜನೆಗಳ ಕುರಿತು ಒಗ್ಗಟ್ಟಿನಿಂದ ಹೋರಾಡಲು ರಾಜ್ಯ ನಾಯಕರು ನಿರ್ಧಾರ ಕೈಗೊಂಡಿದ್ದಾರೆ.
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿತ್ತು. ಇದಕ್ಕೆ ತಮಿಳುನಾಡು ಸರ್ಕಾರದಿಂದ ತೀವ್ರ ವಿರೋಧ ಕೇಳಿ ಬಂದಿದ್ದು, ಯೋಜನೆಯನ್ನು ವಿರೋಧಿಸಿ ತಮಿಳುನಾಡು ಸಂಸದರು ಸದನದ ಒಳಗೂ, ಹೊರಗೂ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದರ ಬೆನ್ನಲ್ಲೇ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಇಂದು ದೆಹಲಿಯ ತಮ್ಮ ನಿವಾಸದಲ್ಲಿ ರಾಜ್ಯ ಸಂಸದರ ವಿಶೇಷ ಸಭೆ ಕರೆದಿದ್ದರು. ಸಭೆ ಬಳಿಕ ಮಾತನಾಡಿದ ಅವರು, ಸಭೆಯಲ್ಲಿ ತಮಿಳುನಾಡು ಮೇಕೆದಾಟು ಯೋಜನೆ ವಿರೋಧಿಸುತ್ತಿದೆ. ಸಂಸತ್ತಿನ ಒಳ-ಹೊರಗೆ ಪ್ರತಿಭಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಸಭೆ ನಡೆಸಿದ್ದೇವೆ. ಮೇಕೆದಾಟು ಮತ್ತು ಮಹಾದಾಯಿ ಬಗ್ಗೆ ಚರ್ಚಿಸಿದ್ದೇವೆ.
ರಾಜ್ಯದ ಕುಡಿಯುವ ನೀರು ಮತ್ತು ವಿದ್ಯುತ್ ಗಾಗಿ ಪಕ್ಷಭೇದ ಮರೆತು ಹೋರಾಡಲು ನಿಶ್ಚಯಿಸಿದ್ದೇವೆ. ಕುಡಿಯುವ ನೀರು ಮತ್ತು ವಿದ್ಯುತ್ ಗಾಗಿ ಹೋರಾಟ ಮುಂದುವರಿಯಲಿದೆ. ಮೇಕೆದಾಟು ವಿಚಾರವಾಗಿ ಈಗಾಗಲೇ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಮಹಾದಾಯಿ ವಿಚಾರವಾಗಿ ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇವೆ. ತಮಿಳುನಾಡಿನ ಜೊತೆ ಚರ್ಚೆ ಮಾಡಲು ನಾವು ಈಗಲೂ ಸಿದ್ಧರಿದ್ದೇವೆ ಎಂದು ಹೇಳಿದರು.