ಜಾನಪದ ಕಲೆ ಕಂಡ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ

ತಮ್ಮ ಕಲೆಯನ್ನು ಮುಖ್ಯಮಂತ್ರಿಗಳು ಇಷ್ಟು ಖುಷಿಪಟ್ಟಿದನ್ನು ನೋಡಿದ ಜಾನಪದ ಕಲಾವಿದರು, ಹರ್ಷಚಿತ್ರರಾಗಿ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು. 

Updated: Oct 11, 2018 , 07:51 AM IST
ಜಾನಪದ ಕಲೆ ಕಂಡ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ

ಮೈಸೂರು: ಜಾನಪದ ಕಲೆಯನ್ನು ಪ್ರೋತ್ಸಾಹಿಸಲು ರಾಜ್ಯದಲ್ಲಿ ಮತ್ತೆ ಜಾನಪದ ಜಾತ್ರೆ ಕಾರ್ಯಕ್ರಮಕ್ಕೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ಭವ್ಯ ವೇದಿಕೆಯಲ್ಲಿ  ಮುಖ್ಯಮಂತ್ರಿ ಹೆಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಿದರು. 

ನಂತರ ವೇದಿಕೆ ಮುಂಭಾಗ ಆಸೀನರಾಗಿ, ಜಾನಪದ ಗಾಯನ ಹಾಗೂ ಜಾನಪದ ನೃತ್ಯ ಕಾರ್ಯಕ್ರಮ ವೀಕ್ಷಿಸಿದ ಮುಖ್ಯಮಂತ್ರಿಗಳ ಕಣ್ಣಲ್ಲಿ ಆನಂದಭಾಷ್ಪ ಹರಿಯಿತು. ತಮ್ಮ ಕಲೆಗೆ ಮುಖ್ಯಮಂತ್ರಿಗಳು ಇಷ್ಟು ಖುಷಿಪಟ್ಟಿದನ್ನು ನೋಡಿದ ಜಾನಪದ ಕಲಾವಿದರು, ಹರ್ಷಚಿತ್ರರಾಗಿ ಮುಖ್ಯಮಂತ್ರಿಯವರಿಗೆ ಧನ್ಯವಾದ ಸಲ್ಲಿಸಿದರು. 

ದಸರಾ ಮಹೋತ್ಸವದ ಅರಮನೆ ವೇದಿಕೆ ಮೇಲೆ ಪ್ರದರ್ಶನ ನೀಡಿದ ಜನಪದ ಕಲಾವಿದರೊಂದಿಗೆ ಬೆರೆತು ಮನಃಪೂರ್ವಕವಾಗಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ನಮ್ಮ ನಾಡಿನ ಹಾಗೂ ಗ್ರಾಮೀಣ ಜನರ ಬದುಕಾಗಿರುವ ಜಾನಪದ ಕಲೆಗೆ ಪುನಶ್ಚೇತನ ನೀಡುವ ಉದ್ದೇಶದಿಂದ 12 ವರ್ಷಗಳ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂದೆ ಜಾನಪದ ಜಾತ್ರೆ ಕಾರ್ಯಕ್ರಮ ಆರಂಭಿಸಿದ್ದೆ. ನಂತರ ಅದು ಬೆಂಗಳೂರಿನ ಲಾಲ್ ಬಾಗ್ ಗೆ, ಮತ್ತೊಂದು ಸ್ಥಳಾಂತರವಾಯಿತು. ಆ ನಂತರ ಬಂದ ಸರ್ಕಾರಗಳು ಈ ಕಾರ್ಯಕ್ರಮ ಮುಂದುವರಿಸುವ ಉತ್ಸಾಹ ತೋರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 
ಈ ಕಲೆಯ ಪ್ರೋತ್ಸಾಹಕ್ಕೆ ನಾನು ಬದ್ಧನಾಗಿದ್ದೇನೆ. ಅದಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹೆಚ್ಚಿನ ಅನುದಾನ ಒದಗಿಸುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಡಾ. ಜಯಮಾಲ ಅವರು ಕೂಡ ಕಲಾವಿದರಾಗಿದ್ದು, ನಿಮ್ಮ ಬೆಂಬಲವಾಗಿ ಇದ್ದಾರೆ ಎಂದರು.