ಇಂದು ಜೆಡಿಎಸ್-ಕಾಂಗ್ರೆಸ್ ಮೊದಲ ಸಮನ್ವಯ ಸಮಿತಿ ಸಭೆ

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಮತ್ತು ಮಹತ್ವದ ಸಮನ್ವಯ ಸಮಿತಿ ಸಭೆ ಇಂದು ನಡೆಯಲಿದೆ.

Last Updated : Jun 14, 2018, 10:16 AM IST
ಇಂದು ಜೆಡಿಎಸ್-ಕಾಂಗ್ರೆಸ್ ಮೊದಲ ಸಮನ್ವಯ ಸಮಿತಿ ಸಭೆ title=

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಮತ್ತು ಮಹತ್ವದ ಸಮನ್ವಯ ಸಮಿತಿ ಸಭೆ ಇಂದು ನಡೆಯಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆಯಲಿರುವ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ. 

ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಖಾತೆ ಹಂಚಿಕೆ, ಸಚಿವ ಸಂಪುಟ ವಿಸ್ತರಣೆ, ಭಿನ್ನಮತ ಶಮನದಲ್ಲಿಯೇ ತೊಡಗಿದ್ದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಇಂದು ಸಂಜೆ 4 ಗಂಟೆಗೆ ವಿಧಾನಸೌಧದಲ್ಲಿ ಮೊದಲ ಸಮನ್ವಯ ಸಮಿತಿ ಸಭೆ ನಡೆಸಲಿದ್ದು, ಸುಗಮ ಆಡಳಿತದ ಬಗ್ಗೆ ಚರ್ಚೆ ನಡೆಸಲಿದೆ ಎನ್ನಲಾಗಿದೆ. 

ಇಂದು ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ರೈತರ ಸಾಲ ಮನ್ನಾ, ಜಿಲ್ಲೆಗಳ ಉಸ್ತುವಾರಿ ಬಗ್ಗೆಯೂ ಚರ್ಚೆ ನಡೆಸುವ ನಿರೀಕ್ಷೆಯಿದೆ. ಜತೆಗೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಹಲವು ಯೋಜನೆಗಳನ್ನು ಮುಂದುವರೆಸುವ ಬಗ್ಗೆ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಒತ್ತಾಯಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ, ಚುನಾವಣಾ ಪ್ರಣಾಳಿಕೆಯಲ್ಲಿ ಎರಡೂ ಪಕ್ಷಗಳೂ ನೀಡಿದ್ದ ಭರವಸೆಗಳ ಬಗ್ಗೆ ಚರ್ಚೆ ನಡೆಸಿ, ಹೆಚ್ಚು ಅಗತ್ಯವಾದ ಮತ್ತು ಬೇಡಿಕೆಯುಳ್ಳ ಯೋಜನೆಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ. 

ಸಮ್ಮಿಶ್ರ ಸರ್ಕಾರದ ಆಡಳಿತ ಸುಸೂತ್ರವಾಗಿ ನಡೆಯಲು ಉಭಯ ಪಕ್ಷಗಳಲ್ಲಿ ಅಪನಂಬಿಕೆಗೆ ಅವಕಾಶ ನೀಡದಿರಲು ಈ ಹಿಂದೆ ಸಮನ್ವಯ ಸಮಿತಿ ರಚಿಸಲಾಗಿತ್ತು. ಎರಡೂ ಪಕ್ಷಗಳ ಸದಸ್ಯರನ್ನು ಒಳಗೊಂಡ ಈ ಸಮಿತಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಗಿತ್ತು. ಇಂದು ಈ ಸಮಿತಿಯ ಮೊದಲ ಸಭೆ ನಡೆಯಲಿದೆ. 

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಸೇರಿದಂತೆ ಅನೇಕ್ ಮುಖಂಡರು ಸಭೆಗೆ ಹಾಜರಾಗಲಿದ್ದಾರೆ. 

Trending News