ಎಸ್ಸಿ, ಎಸ್ಟಿ ನೌಕರರಿಗೆ ಸಿಹಿ ಸುದ್ದಿ; ಬಡ್ತಿ ಮೀಸಲಾತಿ ಜಾರಿಗೆ ಸರ್ಕಾರ ಆದೇಶ, ಇಂದಿನಿಂದಲೇ ಜಾರಿ

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಆದೇಶಿಸಿದೆ.

Last Updated : Feb 27, 2019, 06:50 PM IST
ಎಸ್ಸಿ, ಎಸ್ಟಿ ನೌಕರರಿಗೆ ಸಿಹಿ ಸುದ್ದಿ; ಬಡ್ತಿ ಮೀಸಲಾತಿ ಜಾರಿಗೆ ಸರ್ಕಾರ ಆದೇಶ, ಇಂದಿನಿಂದಲೇ ಜಾರಿ title=

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ರಾಜ್ಯ ಸರ್ಕಾರಿ ನೌಕರರಿಗೆ ಅನುಕೂಲವಾಗುವ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಲು ಕರ್ನಾಟಕ ಸರ್ಕಾರ ಆದೇಶಿಸಿದ್ದು, ಇಂದಿನಿಂದಲೇ ಅನ್ವಯವಾಗಲಿದೆ.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಡ್ತಿ ಮೀಸಲಾತಿಗೆ ಒಟ್ಟು ನೀಡಲಾಗುವುದು ಎಂದು ಹೇಳುತ್ತಲೇ ಬಂದಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ, ಇಂದಿನಿಂದಲೇ ಜಾರಿಯಾಗುವಂತೆ ಆದೇಶ ಹೊರಡಿಸಿದೆ. ಇದರಿಂದಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ನೌಕರರಿಗೆ ಅನುಕೂಲವಾಗಲಿದೆ.

2017ರ ಫೆಬ್ರವರಿ 9 ರಂದು ಸುಪ್ರೀಂ ಕೋರ್ಟ್ ಬಡ್ತಿ ಮೀಸಲಾತಿ ಕಾಯ್ದೆ 2002 ಅನ್ನು ರದ್ದುಗೊಳಿಸಿ ಆದೇಶಿಸಿತ್ತು. ಹೀಗಾಗಿ ರಾಜ್ಯದ 3,700ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರು ಹಿಂಬಡ್ತಿಗೆ ಒಳಗಾಗಿದ್ದರು. ಬಳಿಕ ಈ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಹೊಸ ಕಾಯ್ದೆ ರೂಪಿಸಿ ರಾಷ್ಟ್ರಪತಿಯಿಂದ ಅನುಮೋದನೆಯನ್ನೂ ಪಡೆದು, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆಯನ್ನೂ ಪಡೆದಿತ್ತು. ಆದರೆ ಇದುವರೆಗೂ ಜಾರಿ ಮಾಡಿರಲಿಲ್ಲ.

ಆದರೆ ಇಂದು ರಾಜ್ಯ ಸರ್ಕಾರ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸಿ, ಇಂದಿನಿಂದಲೇ ಅನ್ವಯವಾಗುವಂತೆ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಹಿಂಬಡ್ತಿ ಪಡೆದಿದ್ದ ನೌಕರರು ತಮ್ಮ ಮೊದಲಿನ ಹುದ್ದೆಯನ್ನೇ ಪಡೆಯಲಿದ್ದಾರೆ.

Trending News