ಕರ್ನಾಟಕ ಕಾನೂನು ವಿವಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಡ್ತಿ ನೀಡಿ ಮಹತ್ವದ ಆದೇಶ

ವಿವಿ ಕುಲಪತಿ ಮತ್ತು ಕಾನೂನು ಸಚಿವರು ಭೌತಿಕ ಪರೀಕ್ಷೆ ನಡೆಸಿಯೇ ಸಿದ್ಧವೆಂದು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾನೂನು ವಿವಿ ಕೈಗೊಂಡಿದ್ದ ಈ ನಿರ್ಣಯವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು.  

Written by - Zee Kannada News Desk | Last Updated : Dec 14, 2021, 10:39 PM IST
  • ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ನಡೆಸಲು ಉದ್ದೇಶಿಸಿದ್ದ ಮಧ್ಯಂತರ ಸೆಮಿಸ್ಟರ್ ಭೌತಿಕ ಪರೀಕ್ಷೆ ರದ್ದು
  • ಕರ್ನಾಟಕ ಹೈಕೋರ್ಟ್ ನ ನ್ಯಾ.ಹೇಮಂತ ಚಂದನಗೌಡರ ನೇತೃತ್ವದ ಏಕಸದಸ್ಯ ಪೀಠದಿಂದ ಮಹತ್ವದ ತೀರ್ಪು
  • 50:50 ಅನುಪಾತದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕೆಂದು ಆದೇಶ
ಕರ್ನಾಟಕ ಕಾನೂನು ವಿವಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಬಡ್ತಿ ನೀಡಿ ಮಹತ್ವದ ಆದೇಶ title=
ವಿದ್ಯಾರ್ಥಿಗಳಿಗೆ ಬಡ್ತಿ ನೀಡಿ ಮಹತ್ವದ ಆದೇಶ

ಧಾರವಾಡ: ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ನಡೆಸಲು ಉದ್ದೇಶಿಸಿದ್ದ ಮಧ್ಯಂತರ ಸೆಮಿಸ್ಟರ್ ಭೌತಿಕ ಪರೀಕ್ಷೆ(Karnataka Law University Exams)ಯನ್ನು ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠವು ಮಹತ್ವದ ತೀರ್ಪು ನೀಡಿದೆ. ಈಗಾಗಲೇ ನಿಗದಿಪಡಿಸಿದ ವೇಳಾಪಟ್ಟಿಯಂತೆ ನಾಳೆ ಅಂದರೆ ಡಿಸೆಂಬರ್ 15ರಿಂದ ಎಲ್‌ಎಲ್‌ಬಿ ಪರೀಕ್ಷೆಗಳು ನಡೆಯಬೇಕಾಗಿದ್ದವು. ಆದರೆ ಈಗ ಈ ಪರೀಕ್ಷೆಗಳನ್ನು ಹೈಕೋರ್ಟ್ ರದ್ದುಪಡಿಸಿರುವುದಲ್ಲದೆ, ಎಲ್‌ಎಲ್‌ಬಿಯ 2 ಮತ್ತು 4ನೇ ಸೆಮಿಸ್ಟರ್ನ ವಿದ್ಯಾರ್ಥಿಗಳಿಗೆ 50:50 ಅನುಪಾತದ ಆಧಾರದ ಮೇಲೆ ಮುಂದಿನ ತರಗತಿಗಳಿಗೆ ಬಡ್ತಿ ನೀಡಬೇಕೆಂದು ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್(Karnataka High Court)ನ ನ್ಯಾಯಮೂರ್ತಿ ಹೇಮಂತ ಚಂದನಗೌಡರ ನೇತೃತ್ವದ ಏಕಸದಸ್ಯ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ಸರ್ಕಾರದ ಪರವಾಗಿ ಹಿರಿಯ ವಕೀಲರಾದ ಉದಯ್ ಹೊಳ್ಳ ಅವರು ಹಾಜರಾಗಿದ್ದರು. ಕಳೆದ ಹಲವಾರು ದಿನಗಳಿಂದ ಕರ್ನಾಟಕ ಕಾನೂನು ವಿವಿ ಮತ್ತು ವಿದ್ಯಾರ್ಥಿಗಳ ನಡುವೆ ಈ ವಿಚಾರವಾಗಿ ತೀವ್ರ ಜಟಾಪಟಿ ನಡೆದಿತ್ತು. ಕಾನೂನು ವಿವಿ ಆವರಣದಲ್ಲಿ ಅನೇಕ ವಿದ್ಯಾರ್ಥಿಗಳು ಕಳೆದ ಹಲವಾರು ದಿನಗಳಿಂದ ಉಪವಾಸ ಸತ್ಯಾಗ್ರಹ ಕುಳಿತಿದ್ದರು. ಅಷ್ಟೇ ಅಲ್ಲದೆ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಕೂಡ ಕಾನೂನು ವಿವಿಯ ನಡೆಯನ್ನು ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು.

ಇದನ್ನೂ ಓದಿ: ರೈತರಿಗೆ ಪರಿಹಾರ ನೀಡದ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ: ಸಿದ್ದರಾಮಯ್ಯ

ಈ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ಪಕ್ಷದ ನಾಯಕರು ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದ್ದರು. ಆದರೆ ಕಾನೂನು ವಿವಿ ಕುಲಪತಿ ಪ್ರೊ.ಈಶ್ವರ್ ಭಟ್(Prof. Ishwar Bhat) ಹಾಗೂ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ವಿದ್ಯಾರ್ಥಿಗಳ ಕೂಗಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದರು. ಕೊರೊನಾ ಕಾರಣದಿಂದ ಸರಿಯಾಗಿ ತರಗತಿಗಳು ನಡೆಯದ ಹಿನ್ನೆಲೆ ಬಾರ್ ಕೌನ್ಸಿಲ್ ಮತ್ತು ಯುಜಿಸಿ ನಿರ್ದೇಶನಗಳ ಅನುಸಾರವಾಗಿ ವಿದ್ಯಾರ್ಥಿಗಳನ್ನು 4 ಮಾದರಿಯ ಮೌಲ್ಯಮಾಪನದ ಮೂಲಕ ಮುಂದಿನ ತರಗತಿಗಳಿಗೆ ಬಡ್ತಿ ನೀಡುವಂತೆ ಸೂಚಿಸಿದ್ದವು.

ವಿವಿ ಕುಲಪತಿ ಮತ್ತು ಕಾನೂನು ಸಚಿವರು ಭೌತಿಕ ಪರೀಕ್ಷೆ(KSLU Exam) ನಡೆಸಿಯೇ ಸಿದ್ಧವೆಂದು ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಕಾನೂನು ವಿವಿ ಕೈಗೊಂಡಿದ್ದ ಈ ನಿರ್ಣಯವನ್ನು ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. ಈಗಾಗಲೇ ಬಾರ್ ಕೌನ್ಸಿಲ್ ನಿರ್ದೇಶನದಂತೆ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಲು ಆಫ್ ಲೈನ್ ಹೊರತಾಗಿ ಹಲವು ಆಯ್ಕೆಗಳನ್ನು ನೀಡಿದೆ. ಇದರಲ್ಲಿ ಪ್ರಮುಖವಾಗಿ ಆನ್ ಲೈನ್ ಪರೀಕ್ಷೆ, ಆಂತರಿಕ ಮೌಲ್ಯಮಾಪನ, ಸೆಮಿನಾರ್, ಓಪನ್ ಬುಕ್ ಹಾಗೂ ಇನ್ನಿತರ ಆಯ್ಕೆಗಳು ಲಭ್ಯ ಇವೆ. ಈಗಾಗಲೇ ರಾಜ್ಯದ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಆಫ್ಲೈನ್ ಹೊರತಾದ ಆಯ್ಕೆಗಳ ಮೂಲಕ ವಿದ್ಯಾರ್ಥಿಗಳನ್ನು ಮೌಲ್ಯಮಾಪನ ಮಾಡಿ ಮುಂದಿನ ತರಗತಿಗಳಿಗೆ ಬಡ್ತಿ ಮಾಡುವ ಮೂಲಕ ಹೊಸ ಅಕಾಡೆಮಿಕ್ ವರ್ಷದ ತರಗತಿಗಳನ್ನು ನಡೆಸುತ್ತಿದೆ.

ಇದನ್ನೂ ಓದಿ: ‘ನಮ್ಮನ್ನು ಬಿಟ್ಟು ಹೋಗ್ಬೇಡಿ ಸಾರ್ ಪ್ಲೀಸ್’: ಶಿಕ್ಷಕನ ವರ್ಗಾವಣೆಗೆ ಬಿಕ್ಕಿ ಬಿಕ್ಕಿ ಅತ್ತ ವಿದ್ಯಾರ್ಥಿಗಳು..

ಈಗ ಕರ್ನಾಟಕ ಕಾನೂನು ವಿವಿ ಆಫ್ ಲೈನ್ ಪರೀಕ್ಷೆ ನಡೆಸುವುದರಿಂದ ಅಕಾಡೆಮಿಕ್ ವರ್ಷದಲ್ಲಿ ವಿಳಂಭವಾಗುತ್ತದೆ. ಇದರಿಂದಾಗಿ ಈಗ 3 ವರ್ಷದ ಕಾನೂನು ಕೋರ್ಸ್ ನ್ನು 4 ವರ್ಷಕ್ಕೆ, 5 ವರ್ಷದ ಕೋರ್ಸ್ ನ್ನು 6 ವರ್ಷಕ್ಕೆ ಮುಗಿಸಬೇಕಾಗುತ್ತದೆ. ಇದರಿಂದ ತಮ್ಮ ಭವಿಷ್ಯವು ಡೋಲಾಯಮಾನವಾಗುತ್ತದೆ ಎಂದು ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದರು.

ಕಾನೂನು ವಿವಿ ನಿರ್ಧಾರದ ವಿರುದ್ಧ ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಗೆಲುವಿನ ಜೊತೆಗೆ ಮುಂದಿನ ತರಗತಿಗಳಿಗೆ ಬಡ್ತಿ ಸಿಕ್ಕಂತಾಗಿದೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಪರೀಕ್ಷೆಯನ್ನು ನಡೆಸಿಯೇ ಸಿದ್ಧವೆಂದು ತೀರ್ಮಾನಿಸಿದ್ದ ಕರ್ನಾಟಕ ಕಾನೂನು ವಿವಿ ಕುಲಪತಿ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರಿಗೆ ಭಾರೀ ಮುಖಭಂಗವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News