ರಾಜ್ಯ ರಾಜಕೀಯ ಬಿಕ್ಕಟ್ಟು: ಇಂದಿನಿಂದ ವಿಧಾನಸಭೆ ಮಾನ್ಸೂನ್ ಅಧಿವೇಶನ ಆರಂಭ

ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಹಣಕಾಸು ಮಸೂದೆಯನ್ನು ಅಂಗೀಕರಿಸುವ ಸಲುವಾಗಿ ರಾಜ್ಯ ವಿಧಾನಸಭೆಯ ಮಾನ್ಸೂನ್ ಅಧಿವೇಶನ ಶುಕ್ರವಾರದಿಂದ ಪ್ರಾರಂಭವಾಗಲಿದೆ.

Last Updated : Jul 12, 2019, 07:29 AM IST
ರಾಜ್ಯ ರಾಜಕೀಯ ಬಿಕ್ಕಟ್ಟು: ಇಂದಿನಿಂದ ವಿಧಾನಸಭೆ ಮಾನ್ಸೂನ್ ಅಧಿವೇಶನ ಆರಂಭ title=
File Image

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಹಣಕಾಸು ಮಸೂದೆಯನ್ನು ಅಂಗೀಕರಿಸುವ ಸಲುವಾಗಿ ರಾಜ್ಯ ವಿಧಾನಸಭೆಯ ಮಾನ್ಸೂನ್ ಅಧಿವೇಶನ ಶುಕ್ರವಾರದಿಂದ ಪ್ರಾರಂಭವಾಗಲಿದೆ. ಕಾಂಗ್ರೆಸ್-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಮುಖ್ಯ ಸಚೇತಕರಾದ ಗಣೇಶ ಪ್ರಕಾಶ್ ಹುಕ್ಕೇರಿ ಅವರು ಎರಡೂ ಪಕ್ಷಗಳ ಎಲ್ಲ ಶಾಸಕರು ಶುಕ್ರವಾರ ವಿಧಾನಸಭೆಯ ಮೊದಲ ದಿನದ ಅಧಿವೇಶನದಲ್ಲಿ ಹಾಜರಾಗುವಂತೆ ಕೋರಿ ವಿಪ್ ಜಾರಿ ಮಾಡಿದ್ದಾರೆ.

ಏತನ್ಮಧ್ಯೆ, ರೆಬೆಲ್ ಶಾಸಕರು ತಮ್ಮ ರಾಜೀನಾಮೆ ಅಂಗೀಕರಿಸುವ ವಿಚಾರವಾಗಿ ಸುಪ್ರೀಂಕೋರ್ಟ್ ಹಸ್ತಕ್ಷೇಪ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಆಲಿಸುವ ನಿರೀಕ್ಷೆಯಿದೆ. ವಿಧಾನಸಭೆ ಸ್ಪೀಕರ್ ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸುತ್ತಿಲ್ಲ ಮತ್ತು ಅವರ ರಾಜೀನಾಮೆಯನ್ನು ಅಂಗೀಕರಿಸುವಲ್ಲಿ ವಿಳಂಬ ಧೋರಣೆ ತೋರುತ್ತಿದ್ದಾರೆ ಎಂದು ಶಾಸಕರು ತಮ್ಮ ಮನವಿಯಲ್ಲಿ ಆರೋಪಿಸಿದ್ದಾರೆ.

ಗುರುವಾರ ಬಂಡಾಯ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯ, ಗುರುವಾರ ಸಂಜೆ 6 ಗಂಟೆಯೊಳಗೆ ರಾಜೀನಾಮೆ ನೀಡಿರುವ ಶಾಸಕರು ಸ್ಪೀಕರ್ ಮುಂದೆ ಖುದ್ದಾಗಿ ಹಾಜರಾಗುವಂತೆ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠ ನಿರ್ದೇಶಿಸಿತ್ತು. ಕಚೇರಿಯಲ್ಲೇ ಇರುವಂತೆ ಸ್ಪೀಕರ್​ ಕೆ.ಆರ್. ರಮೇಶ್ ಕುಮಾರ್​ ಅವರಿಗೂ ಸೂಚನೆ ನೀಡಿತ್ತು.

ಬಂಡಾಯ ಕಾಂಗ್ರೆಸ್-ಜೆಡಿ (ಎಸ್) ಶಾಸಕರು ಸಲ್ಲಿಸಿದ ರಾಜೀನಾಮೆಯನ್ನು ಪರಿಶೀಲಿಸಲು ಸಮಯ ಬೇಕು ಎಂದು ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಪ್ರತಿಪಾದಿಸಿದ್ದರು. 

ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಗುರುವಾರ ಸಂಜೆ 8 ಅತೃಪ್ತ ಶಾಸಕರು ಮುಂಬೈನಿಂದ ಆಗಮಿಸಿ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್,  ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆಯನ್ನು ಸದ್ಯದ ಪರಿಸ್ಥಿತಿಯಲ್ಲಿ ಅಂಗೀಕರಿಸಲು ಸಾಧ್ಯವಿಲ್ಲ. ರಾಜೀನಾಮೆ ಅಂಗೀಕಾರಕ್ಕೆ ಅದರದ್ದೇ ಆದ ನಿಯಮಗಳಿವೆ. ಅದರಂತೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ. 

ಅತೃಪ್ತರು ಇಂದು ನನ್ನ ಕಚೇರಿಗೆ ಬಂದು ರಾಜೀನಾಮೆ ಸಲ್ಲಿಸಿ ನೀಡಿದ ವಿವರಣೆಗಳನ್ನು ವೀಡಿಯೋ ಮಾಡಲಾಗಿದೆ. ಅದನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸುತ್ತೇನೆ. ಹಾಗೇ ಆ ರಾಜೀನಾಮೆಗಳನ್ನು ಪರಿಶೀಲಿಸಿ, ಆ ರಾಜೀನಾಮೆಗಳು ಪ್ರಾಮಾಣಿಕವಾದುವೇ, ಒತ್ತಡದಲ್ಲಿ ಸಲ್ಲಿಸಿದ ರಾಜೀನಾಮೆಗಳೇ ಎಂಬುದು ನನಗೆ ಮನವರಿಕೆಯಾದ ಬಳಿಕವಷ್ಟೇ ನಾನು ರಾಜೀನಾಮೆಯನ್ನು ಅಂಗೀಕಾರ ಮಾಡುತ್ತೇನೆ ಎಂದು ಅವರು ತಿಳಿಸಿದರು.

ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮುಂಬೈನಿಂದ ಬೆಂಗಳೂರಿಗೆ ಬಂದು ಸಭಾಪತಿಯವರನ್ನು ಭೇಟಿಯಾಗಿದ್ದ ಬಂಡಾಯ ಶಾಸಕರು ಬಳಿಕ ಮತ್ತೆ ಮುಂಬೈನತ್ತ ತೆರಳಿದ್ದಾರೆ. ಇಂದಿನಿಂದ ಪ್ರಾರಂಭವಾಗಲಿರುವ ಮಾನ್ಸೂನ್ ಅಧಿವೇಶನಕ್ಕೆ ಅವರು ಹಾಜರಾಗಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Trending News