ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಮಾತ್ರಕ್ಕೆ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಈ ಹಿಂದೆ ಡಿಕೆಶಿ ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕಾಗಿಯೇ ಅವರನ್ನು ಬಂಧಿಸಲಾಗಿದೆ- ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ  

Yashaswini V Yashaswini V | Updated: Sep 4, 2019 , 12:19 PM IST
ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಮಾತ್ರಕ್ಕೆ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ
File Image

ಬೆಂಗಳೂರು: ಬಿಜೆಪಿ ತನ್ನ ದುರುದ್ದೇಶಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನು ಬಳಸಿಕೊಂಡು ಈ ರೀತಿ ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಮಾತ್ರಕ್ಕೆ ಪಕ್ಷವನ್ನು ಮುಗಿಸಬಹುದೆಂದು ಭಾವಿಸಿದ್ದರೆ, ಅದು ಅವರ ತಪ್ಪು ಕಲ್ಪನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಬಂಧನದ ಹಿನ್ನೆಲೆಯಲ್ಲಿ ನಗರದಲ್ಲಿಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ ಖರ್ಗೆ, ಷಡ್ಯಂತ್ರದ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಬಿಜೆಪಿ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ. ಬಿಜೆಪಿಯ ಇಂತಹ ಕುತಂತ್ರಕ್ಕೆ ಯಾವ ಕಾಂಗ್ರೆಸ್ ನಾಯಕರೂ ಎದೆಗುಂದುವುದಿಲ್ಲ ಎಂದಿದ್ದಾರೆ.

ಜಾರಿ ನಿರ್ದೇಶನಾಲಯದಿಂದ ನೀಡಲಾಗಿರುವ ಎಲ್ಲಾ ಸಮನ್ಸ್ ಹಾಗೂ ನೋಟೀಸ್ ಗಳಿಗೂ ಸೂಕ್ತವಾಗಿ ಸ್ಪಂದಿಸಿರುವ ಶಿವಕುಮಾರ್ ಅವರನ್ನು ಉದ್ದೇಶ ಪೂರ್ವಕವಾಗಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಸುಳ್ಳು ಕಾರಣ ನೀಡಿ ಬಂಧಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ, ಈ ಹಿಂದೆ ಡಿಕೆಶಿ ಗುಜರಾತ್ ಶಾಸಕರಿಗೆ ರಕ್ಷಣೆ ನೀಡಿದ್ದಕ್ಕಾಗಿಯೇ ಅವರನ್ನು ಬಂಧಿಸಲಾಗಿದೆ ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ್ ಗುಜರಾತ್ ಶಾಸಕರಿಗೆ ಸಹಕಾರ ನೀಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎನ್ನುವುದಾದರೆ, ಇತ್ತೀಚಿಗೆ ಕರ್ನಾಟಕದ ಕಾಂಗ್ರಸ್-ಜೆಡಿಎಸ್ ಶಾಸಕರಿಗೆ ರಕ್ಷಣೆ ನೀಡಿದ್ದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಇಡಿ ಅಧಿಕಾರಿಗಳು ಏಕೆ ಕ್ರಮ ಕೈಗೊಂಡಿಲ್ಲ ಎಂದು ಖರ್ಗೆ ಪ್ರಶ್ನಿಸಿದರು.

ಡಿ.ಕೆ. ಶಿವಕುಮಾರ್ ಏನು ಪರಾರಿಯಾಗಿದ್ದಾರೆಯೇ? ಪರಾರಿಯಾಗಿದ್ದಾನೆ? ನಿಯಮಗಳ ಪ್ರಕಾರ ಆದಾಯ ತೆರಿಗೆ ಇಲಾಖೆ ಮತ್ತು ಇಡಿ ಕರೆದಾಗಲೆಲ್ಲಾ ಅವರು ಸಹಕರಿಸುತ್ತಿದ್ದಾರೆ. ಆದಾಗ್ಯೂ ಡಿಕೆಶಿ ಅವರಿಗೆ ಮಾನಸಿಕವಾಗಿ ಹಿಂಸಿಸಿ, ಕಿರುಕುಳ ನೀಡುತ್ತಿರುವುದನ್ನು ನಾನು ಖಂಡಿಸುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.