"ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಭರಪೂರ ಮೀಸಲಾತಿ ಸೌಲಭ್ಯ ಸಿಕ್ಕಿದೆ"

  ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ 2013ರಲ್ಲಿ ಜಾರಿಗೆ ಬಂದು ಇದೀಗ ಹತ್ತು ವರ್ಷ ಪೂರೈಸಿದ್ದು, ಕಳೆದ ಒಂದು ದಶಕದಲ್ಲಿ ಪ್ರದೇಶದಲ್ಲಿ ಮೂಲಸೌಕರ್ಯ ಬಲವರ್ದನೆಗೆ 8,520 ಕೋಟಿ ರೂ. ಖರ್ಚು ಮಾಡಲಾಗಿದೆ. ಇದಲ್ಲದೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಭರಪೂರ ಮೀಸಲಾತಿ ಸೌಲಭ್ಯ ಸಿಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Written by - Manjunath N | Last Updated : Sep 17, 2023, 11:45 PM IST
  • ಕಲ್ಯಾಣದ ಪ್ರದೇಶ ಅಭಿವೃದ್ಧಿಯಾಗದ ಹೊರತು ನಾಡಿನ ಸಮಗ್ರ ಪ್ರಗತಿ ಅಸಾಧ್ಯ
  • ಅಭಿವೃದ್ಧಿ ಎಂದರೆ ಕೇವಲ ಹೆದ್ದಾರಿ, ರಸ್ತೆ, ದೊಡ್ಡ ದೊಡ್ಡ ಕಟ್ಟಡಗಳು ಮಾತ್ರವಲ್ಲ;
  • ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಆರ್ಥಿಕ ಹಾಗೂ ಸಾಮಾಜಿಕ ಭದ್ರತಾ ಭಾವವೂ ಮುಖ್ಯವಾಗುತ್ತದೆ.
  • ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತದೆ
"ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಭರಪೂರ ಮೀಸಲಾತಿ ಸೌಲಭ್ಯ ಸಿಕ್ಕಿದೆ" title=

ಕಲಬುರಗಿ:  ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿಸುವ ಸಂವಿಧಾನಕ್ಕೆ ತಿದ್ದುಪಡಿ ತಂದು 371ಜೆ 2013ರಲ್ಲಿ ಜಾರಿಗೆ ಬಂದು ಇದೀಗ ಹತ್ತು ವರ್ಷ ಪೂರೈಸಿದ್ದು, ಕಳೆದ ಒಂದು ದಶಕದಲ್ಲಿ ಪ್ರದೇಶದಲ್ಲಿ ಮೂಲಸೌಕರ್ಯ ಬಲವರ್ದನೆಗೆ 8,520 ಕೋಟಿ ರೂ. ಖರ್ಚು ಮಾಡಲಾಗಿದೆ. ಇದಲ್ಲದೆ ಉನ್ನತ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸ್ಥಳೀಯರಿಗೆ ಭರಪೂರ ಮೀಸಲಾತಿ ಸೌಲಭ್ಯ ಸಿಕ್ಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ರವಿವಾರ ಕಲಬುರಗಿ ನಗರದ ಡಿ.ಎ.ಅರ್.ಪೊಲೀಸ್ ಪರೇಡ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವದ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 2013-14 ರಿಂದ 2022-23ರ ವರೆಗೆ ಸರ್ಕಾರದಿಂದ ಒಟ್ಟಾರೆ 11,878.33 ಕೋಟಿ ರೂ. ಅನುದಾನ ಹಂಚಿಕೆ ಮಾಡಿ 10,228.80 ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ 8,520.74 ಕೋಟಿ ರೂ. ಖರ್ಚು ಮಾಡಲಾಗಿದೆ. ಬಿಡುಗಡೆಯಾದ ಅನುದಾನಕ್ಕೆ ಶೇ.83 ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 29,215 ಕಾಮಗಾರಿಗಳು ಕೈಗೆತ್ತಿಕೊಂಡು 24,563 ಕಾಮಗಾರಿ ಪೂರ್ಣಗೊಳಿಸಿದ್ದು, 4,652 ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಕಾಮಗಾರಿಗಳು ಪ್ರದೇಶದ ಚಿತ್ರ ಬದಲಿಸಿವೆ ಎಂದರೆ ತಪ್ಪಾಗಲಾರದು ಎಂದರು.

ಕಾಯ್ದೆ ಆರಂಭದಿಂದ ಕಳೆದ ಆಗಸ್ಟ್ ಅಂತ್ಯಕ್ಕೆ ವಿವಿಧ ಇಲಾಖೆಗಳಲ್ಲಿ ಈ ಭಾಗದವರಿಗೆ ಒಟ್ಟು 98,889 ಹುದ್ದೆ ನೇರ ನೇಮಕಾತಿಗೆ ಗುರುತಿಸಿದ್ದು, ಅದರಲ್ಲಿ 70,738 ಭರ್ತಿಯಾಗಿವೆ. ಮುಂಬಡ್ತಿ ಮೀಸಲಿಗೆ ಗುರುತಿಸಿದ 33,371 ಹುದ್ದೆಗಳ ಪೈಕಿ 23,101 ಜನರಿಗೆ ಮುಂಬಡ್ತಿ ನೀಡಲಾಗಿದೆ. ಇನ್ನು ಖಾಲಿ ಉಳಿದ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು ಎಂದರು.

ಇದನ್ನೂ ಓದಿ-Gadag: ಆಂಬ್ಯುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

2014-15 ರಿಂದ 2022-23ನೇ ಶೈಕ್ಷಣಿಕ ಸಾಲಿನ ವರೆಗೆ 6,795 ಅಭ್ಯರ್ಥಿಗಳು ವೈದ್ಯಕೀಯ, 1,388 ಅಭ್ಯರ್ಥಿಗಳು ದಂತ ವೈದ್ಯಕೀಯ, 3448 ಅಭ್ಯರ್ಥಿಗಳು ಹೋಮಿಯೋಪತಿ, 22,219 ಅಭ್ಯರ್ಥಿಗಳು ಇಂಜಿನೀಯರಿಂಗ್, 3,808 ಅಭ್ಯರ್ಥಿಗಳು ಕೃಷಿ ಸಂಬಂಧಿತ, 1,593 ಅಭ್ಯರ್ಥಿಗಳು ಬಿ.ಫಾರ್ಮಸಿ/ ಡಿ.ಫಾರ್ಮಸಿ ಸೇರಿದಂತೆ ಒಟ್ಟಾರೆ 10 ವರ್ಷದಲ್ಲಿ ಪ್ರದೇಶದ 39,251 ಅಭ್ಯರ್ಥಿಗಳು ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ.

371 (ಜೆ) ಕಾಯ್ದೆ ಜಾರಿಗೆ ರಾಷ್ಟ್ರಪತಿಗಳು ಅಂಕಿತ ನೀಡಿದ ಕೂಡಲೇ ಅಂದು 2013ರಲ್ಲಿ ರಾಜ್ಯದಲ್ಲಿದ್ದ ನಮ್ಮದೆ ಸರ್ಕಾರ ಕೂಡಲೆ ಪ್ರದೇಶ ಮಂಡಳಿ ರಚಿಸಿದಲ್ಲದೆ, ಉದ್ಯೋಗ ಮತ್ತು ಶಿಕ್ಷಣದಲ್ಲಿ ಸ್ಥಳೀಯರನ್ನು ಮೀಸಲಾತಿ ಸೌಲಭ್ಯ ಒದಗಿಸುವ ಸರ್ಕಾರಿ ಆದೇಶ ಹೊರಡಿಸುವ ಮೂಲಕ ಈ ಭಾಗದ ಅಭಿವೃದ್ಧಿಯ ಹೊಸ ಶಕೆಗೆ ಚಾಲನೆ ನೀಡಲಾಗಿತ್ತು ಎಂದರು.

ಕಲ್ಯಾಣದ ಪ್ರದೇಶ ಅಭಿವೃದ್ಧಿಯಾಗದ ಹೊರತು ನಾಡಿನ ಸಮಗ್ರ ಪ್ರಗತಿ ಅಸಾಧ್ಯ ಎಂದು ನಂಬಿರುವ ನಮ್ಮ ಸರ್ಕಾರ ಪ್ರಸಕ್ತ 2023-24ನೇ ಸಾಲಿನ ಆಯವ್ವಯದಲ್ಲಿ ದಾಖಲೆ ಪ್ರಮಾಣದಲ್ಲಿ ಕೆ.ಕೆ.ಆರ್.ಡಿ.ಬಿ. ಮಂಡಳಿಗೆ ಪ್ರಸಕ್ತ 2023-24ನೇ ಸಾಲಿನ ಆಯವ್ಯಯದಲ್ಲಿ 5,000 ಕೋಟಿ ರೂ. ಘೋಷಿಸಲಾಗಿದೆ. ಮಂಡಳಿ ಇನ್ನಷ್ಟು ದಕ್ಷತೆಯಿಂದ, ಪಾರದರ್ಶಕವಾಗಿ ಹಾಗೂ ಅಗತ್ಯತೆಗಳನ್ನು ಆಧರಿಸಿ ಯೋಜನೆಗಳ ಅನುಷ್ಠಾನಗೊಳಿಸುವ ಅಗತ್ಯವನ್ನು ನಮ್ಮ ಸರ್ಕಾರ ಮನಗಂಡಿದೆ. ಇದಕ್ಕಾಗಿ ಡಾ.ಅಜಯ್ ಸಿಂಗ್ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಮಂಡಳಿ ಸ್ಥಾಪಿಸಲಾಗಿದೆ ಎಂದ ಅವರು 371ಜೆ ಕಾಯ್ದೆ ಪರಿಣಾಮಕಾರಿಗಳ ಅನುಷ್ಟಾನದ ಮೇಲುಸ್ತುವಾರಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧ್ಯಕ್ಷತೆಯಲ್ಲಿಯೇ ಸಚಿವ ಸಂಪುಟ ಉಪ ಸಮಿತಿ ರಚಿಸಿದೆ ಎಂದರು.

ಕೆ.ಕೆ.ಆರ್.ಡಿ.ಬಿ. ಮಂಡಳಿಯ 182.65 ಕೋಟಿ ರೂ. ಆರ್ಥಿಕ ನೆರವಿನೊಂದಿಗೆ ಕಲಬುರಗಿಯಲ್ಲಿ ನಿರ್ಮಾಣವಾಗುತ್ತಿರುವ 371 ಹಾಸಿಗೆಯ ಶ್ರೀ ಜಯದೇವ ಹೃದ್ರೋಗ ಮತ್ತು ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಯನ್ನು ಮುಂದಿನ 3-4 ತಿಂಗಳಿನಲ್ಲಿ ಉದ್ಘಾಟಿಸಲಾಗುವುದು. ಮಂಡಳಿಯ 58.52 ಕೋಟಿ ನೆರವಿನೊಂದಿಗೆ ಕಲಬುರಗಿ ವಿಮಾನ ನಿಲ್ದಾಣ ನಿರ್ಮಿಸಿದ್ದು, ಗಗನದಲ್ಲಿ ಹಾರಾಡಬೇಕೆಂಬ ಇಲ್ಲಿನವರ ಕನಸು ನನಸಾಗಿದೆ. ಇದರಿಂದ ಈ ಭಾಗದ ಕೈಗಾರಿಕೆ, ಶಿಕ್ಷಣ, ಕೃಷಿ, ಆರೋಗ್ಯ ಕ್ಷೇತ್ರ ಅಭಿವೃದ್ಧಿಗೆ ನೆರವಾಗಿದೆ. ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಕಲಬುರಗಿ ಮತ್ತು ಕೊಪ್ಪಳದಲ್ಲಿ ವೈದ್ಯಕೀಯ ಕಾಲೇಜು, ಕಲಬುರಗಿಯಲ್ಲಿ ಟ್ರಾಮಾ ಸೆಂಟರ್ ಸ್ಥಾಪನೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲಾಗಿದೆ. ಇದೀಗ 70 ಕೋಟಿ ರೂ. ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಲಬುರಗಿಯಲ್ಲಿ ತೆರೆಯಲಾಗುತ್ತದೆ. ಒಟ್ಟಾರೆಯಾಗಿ ಕಲಬುರಗಿ ಕೇಂದ್ರೀತವಾಗಿ ಕಲ್ಯಾಣ ಭಾಗದಲ್ಲಿ ಆರೋಗ್ಯ ಸೇವೆ ಮತ್ತಷ್ಟು ಉತ್ತಮಗೊಂಡಿದ್ದು, ಕಲಬುರಗಿ ಮೆಡಿಕಲ್ ಹಬ್” ಆಗಿ ಪರಿವರ್ತನೆಯಾಗಿದೆ ಎಂದರು.

ಕಳೆದ ಹತ್ತು ವರ್ಷದಲ್ಲಿ ಪ್ರದೇಶದಲ್ಲಿ ಶಿಕ್ಷಣ, ಆರೋಗ್ಯ, ಸಾರಿಗೆ, ಮೂಲಸೌಕರ್ಯ, ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು ಮಂಡಳಿ ಅವಿರತವಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಅಭಿವೃದ್ಧಿ ಎಂದರೆ ಕೇವಲ ಹೆದ್ದಾರಿ, ರಸ್ತೆ, ದೊಡ್ಡ ದೊಡ್ಡ ಕಟ್ಟಡಗಳು ಮಾತ್ರವಲ್ಲ; ಜನರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೇವೆ, ಆರ್ಥಿಕ ಹಾಗೂ ಸಾಮಾಜಿಕ ಭದ್ರತಾ ಭಾವವೂ ಮುಖ್ಯವಾಗುತ್ತದೆ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಆದ್ಯತೆ ನೀಡಿ ಕಾರ್ಯನಿರ್ವಹಿಸುತ್ತದೆ ಎಂದರು.

ಇದನ್ನೂ ಓದಿ-HD Kumaraswamy Health Updates: ಎಚ್​​ಡಿಕೆ ಆರೋಗ್ಯದ ಬಗ್ಗೆ ಅನಿತಾ ಕುಮಾರಸ್ವಾಮಿ​ ಹೇಳಿದ್ದೇನು..?

ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಡಾ.ಅಜಯ್ ಸಿಂಗ್, ಶಾಸಕರಾದ ಬಿ.ಆರ್.ಪಾಟೀಲ, ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ಎಂ.ಎಲ್.ಸಿ.ಗಳಾದ ಶಶೀಲ ನಮೋಶಿ, ತಿಪ್ಪಣಪ್ಪ ಕಮಕನೂರ, ಕಲಬುರಗಿ ಮೇಯರ್ ವಿಶಾಲ ಧರ್ಗಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್, ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾಂಸಿಸ್, ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೇಯಿ, ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ., ಐ.ಜಿ.ಪಿ. ಅಜಯ್ ಹಿಲೋರಿ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಎಸ್.ಪಿ. ಅಡ್ಡೂರು ಶ್ರೀನಿವಾಸಲು, ಡಿ.ಸಿ.ಪಿ. ಕನಿಕಾ ಸಿಕ್ರಿವಾಲ್, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಶಾಲಾ ಶಿಕ್ಷಣ ಇಲಾಖೆಯ ಅಪರ ಅಯುಕ್ತ ಡಾ.ಆಕಾಶ ಎಸ್., ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಪ್ರೊಬೇಷನರ್ ಐ.ಎ.ಎಸ್. ಗಜಾನನ್ ಬಾಳೆ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು, ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News