ಟೆಲಿಕಾಂ ಟವರ್‌ ಅಳವಡಿಕೆಗೆ ಇನ್ಮುಂದೆ ಹೊಸ ನಿಯಮ ಅನ್ವಯ-ಡಿಸಿಎಂ ಡಾ.ಜಿ. ಪರಮೇಶ್ವರ್

ಟವರ್‌ನಿಂದ ಯಾವುದೇ ರೀತಿಯ ತೊಂದರೆ ಉಂಟಾದರೆ ಈ ಬಗ್ಗೆ ಸಾರ್ವಜನಿಕರು ದೂರು ದಾಖಲಿಸಲು ಪ್ರತ್ಯೇಕ ಸೆಲ್‌ ತೆರೆಯಲಾಗುವುದು.

Last Updated : Nov 20, 2018, 08:14 AM IST
ಟೆಲಿಕಾಂ ಟವರ್‌ ಅಳವಡಿಕೆಗೆ ಇನ್ಮುಂದೆ ಹೊಸ ನಿಯಮ ಅನ್ವಯ-ಡಿಸಿಎಂ ಡಾ.ಜಿ. ಪರಮೇಶ್ವರ್ title=

ಬೆಂಗಳೂರು: ರಾಜ್ಯಾದ್ಯಂತ ಹಾಕಿರುವ ಎಲ್ಲ ಬಗೆಯ ಟವರ್‌ಗಳಿಗೆ ಆಯಾ ಕಂಪನಿಗಳು ಮೂರು ತಿಂಗಳೊಳಗಾಗಿ ಲೈಸನ್ಸ್‌ ಪಡೆಯುವುದು ಕಡ್ಡಾಯ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

ಮೊಬೈಲ್‌‌ ಟವರ್ ಅಳವಡಿಕೆ ಸಂಬಂಧ ಸೋಮವಾರ ಅಧಿಕಾರಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಇನ್ಸಾಲೇಷನ್‌ ಆಫ್ ನ್ಯೂ ಟೆಲಿ ಕಮ್ಯುನಿಕೇಷನ್ ಇನ್‌ಫ್ರಾಸ್ಟ್ರಕ್ಚರ್ ಕಾಯಿದೆಗೆ‌ ಹೊಸದಾಗಿ ಕೆಲ‌ ನಿಯಮಗಳನ್ನು ಅಳವಡಿಸಲಾಗಿದೆ.‌ ಇದುವರೆಗೂ ಟವರ್‌ ಅಳವಡಿಕೆಗೆ ಯಾವುದೇ ರೀತಿಯ ನಿಯಮವಾಗಲಿ ಲೈಸನ್ಸ್‌ ಆಗಲಿ ಇರಲಿಲ್ಲ. ಯಾವುದೇ ಮಾನದಂಡವಿಲ್ಲದೇ ನೆಟ್‌ವರ್ಕ್‌ ಕಂಪನಿಗಳು ಟವರ್‌‌ ಹಾಕಿದ್ದಾರೆ. ಜನರ‌ ಆರೋಗ್ಯದ ದೃಷ್ಟಿಯಿಂದ ಹೊಸದಾಗಿ ನಿಯಮ ಅಳವಡಿಸಲಾಗಿದೆ ಎಂದರು.

ಪ್ರಸ್ತುತ ರಾಜ್ಯದಲ್ಲಿ 3೦ ಸಾವಿರಕ್ಕೂ ಹೆಚ್ಚು ಒಎಫ್‌ಸಿ ಹಾಗೂ ಟೆಲಿಕಮ್ಯುನಿಕೇಷನ್‌ ಟವರ್ಸ್‌‌ಗಳಿವೆ. ಬೆಂಗಳೂರು ಒಂದರಲ್ಲೇ 6766 ಟವರ್‌ಗಳಿವೆ. ಇನ್ನು ಮುಂದೆ ಯಾವುದೇ ಹೊಸದಾಗಿ ಟವರ್‌ ಹಾಕಬೇಕಿದ್ದರೂ ಮಹಾನಗರಗಳಲ್ಲಿ ಶಾಲಾ- ಕಾಲೇಜು,, ಆಸ್ಪತ್ರೆ , ಧಾರ್ಮಿಕ‌ ಸಂಸ್ಥೆಗಳಿಂದ ಕನಿಷ್ಠ 50 ಮೀಟರ್‌ ಅಂತರದಲ್ಲಿ ಟವರ್‌ ಅಳವಡಿಕೆ ಮಾಡಬೇಕು. ಹೊಸದಾಗಿ ಲೈಸೆನ್ಸ್‌ ತೆಗೆದುಕೊಳ್ಳುವವರು ಕಡ್ಡಾಯವಾಗಿ ಈ ನಿಯಮ ಅನುಸರಿಸಬೇಕು. 

ಈವರೆಗೂ ಟವರ್‌ ಅಳವಡಿಕೆಗೆ ನಿಯಮ ಇಲ್ಲದಿದ್ದ ಕಾರಣ ಈಗಾಗಲೇ ಅಳವಡಿಸಿರುವ ಟವರ್‌ಗಳು ಲೈಸೆನ್ಸ್‌ ಪಡೆಯದೇ ಟವರ್‌ ಅಳವಡಿಸಿದ್ದರು. ಇದರಿಂದ ಕೆಲ ಟವರ್‌ಗಳನ್ನು ಶಾಲಾ ಕಾಲೇಜುಗಳ ಸಮೀಪವೇ ಹಾಕಲಾಗಿದೆ. ಹೀಗಾಗಿ ಇವರು ಕನಿಷ್ಠ 3 ತಿಂಗಳ ಒಳಗಾಗಿ 50 ಮೀಟರ್‌ ಅಂತರದಲ್ಲಿ ಟವರ್‌ ಹಾಕಿ ಲೈಸನ್ಸ್‌ ಪಡೆದುಕೊಳ್ಳುವುದು ಕಡ್ಡಾಯ. ಶಾಲಾ ಕಾಲೇಜು‌ ಸಮೀಪವಿದ್ದರೆ ಕೂಡಲೇ ತೆರವುಗೊಳಿಸಬೇಕು ಎಂದು ಸೂಚಿಸಿದರು.

ಹೊಸದಾಗಿ ಪರವಾನಗಿಗೆ ಅರ್ಜಿ ಸಲ್ಲಿಸಿದರೆ ಈ‌ ಮೊದಲು 45 ದಿನಗಳವರೆಗೂ ಅನುಮತಿಗಾಗಿ ಕಾಯಬೇಕಿತ್ತು. ಈಗ 15 ದಿನದೊಳಗೆ ಅವರಿಗೆ ಅನುಮತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ‌ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು. 

ಟವರ್‌ ಅಳವಡಿಕೆಯ ಶುಲ್ಕವನ್ನು ಪರಿಷ್ಕರಿಸಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಟವರ್‌ ಅಳವಡಿಸಲು 1 ಲಕ್ಷ ರೂ.‌ಶುಲ್ಕ ಪಾವತಿಸಬೇಕು. ಸಿಟಿ‌ ಮಹಾನಗರಗಳಲ್ಲಿ 35 ಸಾವಿರ ರೂ., ಟೌನ್ ಮುನ್ಸಿಪಾಲಿಟಿಯಲ್ಲಿ 25 ಸಾವಿರ ರೂ. ಹಾಗೂ ಗ್ರಾಮಪಂಚಾಯತಿಯಲ್ಲಿ 15 ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕು ಎಂದು ಅವರು ತಿಳಿಸಿದರು.

ಅಷ್ಟೇಅಲ್ಲದೆ, ನೂತನ ಕಾಯಿದೆಯಲ್ಲಿ ಟವರ್‌ ಅಳವಡಿಸುವ ಕಟ್ಟಡದ ಭದ್ರತೆ, ನೋಂದಣಿ ರೂಪುರೇಷೆಯನ್ನು ಪರಿಶೀಲಿಸಲು ಬಿಲ್ಡಿಂಗ್‌ ಪ್ಲಾನ್‌ ಆಕ್ಯುಪೇಷನ್‌ ಸರ್ಟಿಫಿಕೇಟ್‌ನನ್ನು ಸಂಬಂಧಪಟ್ಟ ಇಂಜಿನಿಯರ್ಸ್‌ನಿಂದ ಪಡೆಯಬೇಕು‌.‌ ಹೆಚ್ಚು ಶಬ್ಧ ಬರುವ ಜನರೇಟರ್‌‌ ಬದಲು ಶಬ್ಧ ರಹಿತ ಜನರೇಟರ್ ಅಳವಡಿಸಬೇಕು. 

ಟವರ್‌ನಿಂದ ಯಾವುದೇ ರೀತಿಯ ತೊಂದರೆ ಉಂಟಾದರೆ ಈ ಬಗ್ಗೆ ಸಾರ್ವಜನಿಕರು ದೂರು ದಾಖಲಿಸಲು ಪ್ರತ್ಯೇಕ ಸೆಲ್‌ ತೆರೆಯಲಾಗುವುದು.

ಪ್ರತಿ ಜಿಲ್ಲೆಯಲ್ಲಿ ಟವರ್‌ ಅಳವಡಿಕೆ ಸಂಬಂಧ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯಲ್ಲಿ ಆಯಾ ಜಿಲ್ಲೆಯ ಡಿಸಿ, ಜಿಲ್ಲಾ ಪಂಚಾಯತ್ ಸಿಇಒ, ಸಿಇಆರ್‌ಎಂ‌ ಸದಸ್ಯ, ಆರೋಗ್ಯಾಧಿಕಾರಿ, ವಾಯುಮಾಲಿನ್ಯ ಅಧಿಕಾರಿ,ಸರಕಾರದಿಂದ ನಾಮನಿರ್ದೇಶನ ಮಾಡುವ ಸದಸ್ಯರು ಇರಲಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಸಮಿತಿ ರಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಟವರ್‌ನಿಂದ ಹೊರಹೊಮ್ಮುವ ರೇಡಿಯೇಷನ್‌ನಿಂದ ಆರೋಗ್ಯ ಸಮಸ್ಯೆ ಉಂಟಾಗಲಿದೆ ಎಂಬುದರ ಬಗ್ಗೆ ಮೌಖಿಕ ದೂರುಗಳಷ್ಟೇ ಕೇಳಿ ಬಂದಿವೆ. ವೈಜ್ಞಾನಿಕವಾಗಿ ಯಾವುದು ದೃಢಪಟ್ಟಿಲ್ಲ. ಆದರೂ ಜನಸಾಮಾನ್ಯರ ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮ ವಹಿಸಲಾಗುತ್ತಿದೆ ಎಂದರು.

Trending News